ಚಳ್ಳಕೆರೆ: ಕೆಲವೇ ದಿನಗಳಲ್ಲಿ ಎಸ್‌ಎಸ್ ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಆದೇಶ ಹೊರಡಿಸಲಿದ್ದು, ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ನಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಜೀವ ಸಂರಕ್ಷಣೆಗೆ ಮನೆಯಲ್ಲಿಯೇ ಉಳಿಯುವಂತಹ ಪರಿಸ್ಥಿತಿ ಉಂಟಾಗಿದೆ. ಆದರೆ ಎಸ್‌ಎಸ್ ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳ ಮುಂದಿನ ಜೀವನದ ಮಹತ್ವದ ಘಟ್ಟವಾಗಿದ್ದು, ಈ ಹಂತವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರೈಸಬೇಕಿದೆ. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಬೇಕು. ನೀವು ಪ್ರಯತ್ನಪಟ್ಟರೆ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಪ್ರೇರಣೆ ದೊರೆಯುತ್ತದೆ ಎಂದರು.
ವಿಶ್ವಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಟಿ. ವೀರಭದ್ರಸ್ವಾಮಿ, ಆದರ್ಶ ಶಾಲೆಯ ಶ್ರೀನಿವಾಸ್, ಹಿರೇಹಳ್ಳಿ ಶಾಲೆಯ ಶ್ರೀನಿವಾಸ್, ಎಚ್‌ಟಿಟಿ ಶಾಲೆಯ ರಾಜಣ್ಣ, ಸಂಪತ್‌ಕುಮಾರ್, ನಾಗಭೂಷಣ, ಪಾಲಯ್ಯ ಮತ್ತಿತರರು ಮಾತನಾಡಿ, ರಜಾ ಕಾಲವಾದರೂ ಶಿಕ್ಷಕರ ಸಹಕಾರದಿಂದ ಆನ್‌ಲೈನ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಪ್ರತಿದಿನವೂ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಬಂಧ ಗಟ್ಟಿಯಾಗಿದ್ದು ಫಲಿತಾಂಶ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ ಮಾತನಾಡಿ, 2018ನೇ ಸಾಲಿನಲ್ಲಿ ಶೇ. 88, 2019 ರಲ್ಲಿ ತಾಲೂಕಿಗೆ ಶೇ. 90 ಫಲಿತಾಂಶ ದೊರೆತಿತ್ತು. 2020ನೇ ಸಾಲಿನಲ್ಲಿ ಶೇ. 95 ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ತಾಲೂಕಿನ 91 ಪ್ರೌಢಶಾಲೆಗಳಿಂದ 4433 ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ನಡೆಸಿದ್ದಾರೆ.
ಪ್ರತಿ ಪ್ರೌಢಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಆಂಗ್ಲ ಭಾಷೆ ಬೋಧನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದ್ದರು. ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಅಕ್ಷರ ದಾಸೋಹ ಅ ಧಿಕಾರಿ ತಿಪ್ಪೇಸ್ವಾಮಿ ಇತರರು ಇದ್ದರು.