Advertisement

ಗೋಶಾಲೆ ಮುಂದುವರಿಕೆಗೆ ಒತ್ತಾಯ

01:10 PM Jul 31, 2019 | Team Udayavani |

ಚಳ್ಳಕೆರೆ: ಕಳೆದ ಒಂದು ವರ್ಷದಿಂದ ತಾಲೂಕಿನಲ್ಲಿ ಎಂಟಕ್ಕೂ ಹೆಚ್ಚು ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಗೋಶಾಲೆಗಳಲ್ಲಿ ಜಾನುವಾರುಗಳಿಗೆ ವಿತರಿಸುವ ಮೇವಿನ ಗುಣಮಟ್ಟ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲು ಅಪರ ಜಿಲ್ಲಾಧಿಕಾರಿ ಸಂಗಪ್ಪ ನೇತೃತ್ವದ ತಂಡ ಮಂಗಳವಾರ ತಾಲೂಕಿನ ವಿವಿಧ ಗೋಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಎ.ಜಿ. ರಸ್ತೆ ಗೋಶಾಲೆ, ಬೊಮ್ಮದೇವರಹಟ್ಟಿ ಹಾಗೂ ನನ್ನಿವಾಳ ಗೋಶಾಲೆಗೆ ಭೇಟಿ ನೀಡಿದ್ದ ಅಧಿಕಾರಿಗಳು, ರೈತರೊಂದಿಗೆ ಚರ್ಚಿಸಿದರು. ಯಾವುದೇ ಕಾರಣಕ್ಕೂ ಗೋಶಾಲೆ ಸ್ಥಗಿತಗೊಳಿಸಬಾರದು. ಈಗಾಗಲೇ ಮಳೆಯ ಪ್ರಮಾಣ ಕ್ಷೀಣಿಸುತ್ತಿದ್ದು ಗೋಶಾಲೆ ಮುಚ್ಚಿದರೆ ಜಾನುವಾರುಗಳ ಸಂಕಷ್ಟ ಹೆಚ್ಚಾಗುತ್ತದೆ ಎಂದು ರೈತರು ಅಪರ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.

ಪ್ರತಿನಿತ್ಯ ಗೋಶಾಲೆಗಳ ಜಾನುವಾರುಗಳಿಗೆ ವಿತರಣೆ ಮಾಡುವ ಹುಲ್ಲಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಾನುವಾರುಗಳನ್ನು ಬಿಸಿಲಿನಲ್ಲಿ ಕಟ್ಟಿ ಹಾಕಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಿಸಿಲಿನ ತಾಪಕ್ಕೆ ಜಾನುವಾರುಗಳು ನಲುಗಿಹೋದಂತೆ ಕಂಡು ಬರುತ್ತಿದೆ. ಕೂಡಲೇ ಬಿಸಿಲಿನಲ್ಲಿ ಕಟ್ಟಿ ಹಾಕಿದ ಎಲ್ಲಾ ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಪಶುವೈದ್ಯ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಪ್ರತಿನಿತ್ಯ ಜಾನುವಾರುಗಳ ಆರೋಗ್ಯ ತಪಾಸಣೆಯನ್ನು ವೈದ್ಯರ ತಂಡ ನಡೆಸುತ್ತಿದೆ. ತಾಲೂಕಿನ ಯಾವುದೇ ಗೋಶಾಲೆಯಲ್ಲಿ ಜಾನುವಾರುಗಳು ಮೃತಪಟ್ಟಿರುವುದು ವರದಿಯಾಗಿಲ್ಲ. ಗೋಶಾಲೆಯಲ್ಲಿನ ಮೇವು ಹಾಗೂ ನೀರು ಪಡೆದ ಜಾನುವಾರುಗಳು ಆರೋಗ್ಯವಾಗಿವೆ ಎಂದರು.

ಪ್ರತಿಯೊಂದು ಗೋಶಾಲೆಯ ಜವಾಬ್ದಾರಿಯನ್ನು ಪಶುವೈದ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ವಹಿಸಲಾಗಿದೆ. ಅವರೇ ಖುದ್ದಾಗಿ ಗೋಶಾಲೆಗೆ ಭೇಟಿ ನೀಡಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಜಾನುವಾರುಗಳನ್ನು ಕಟ್ಟುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ತೊಟ್ಟಿಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಕನಿಷ್ಠ ಪಕ್ಷ ಎರಡು ದಿನಕ್ಕೊಮ್ಮೆಯಾದರೂ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಜಾನುವಾರುಗಳಿಗೆ ಯಾವುದೇ ಸೊಂಕು ತಗುಲದಂತೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

Advertisement

ಕೃಷಿ ಇಲಾಖೆ ಉಪನಿರ್ದೇಶಕ ಸದಾಶಿವ ಮಾತನಾಡಿ, ಸರಿಯಾಗಿ ಮಳೆಯಾಗದೇ ಇರುವುದರಿಂದ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಜಾನುವಾರುಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಗೋಶಾಲೆಗಳ ಮೇಲಿದೆ. ಪ್ರತಿಯೊಂದು ಗೋಶಾಲೆಗೂ ವಿವಿಧ ಗ್ರಾಮಗಳಿಂದ ಸಾವಿರಾರು ಜಾನುವಾರುಗಳು ಆಗಮಿಸುತ್ತಿದ್ದು, ಮೇವು ವಿತರಣೆ ಕಷ್ಟವಾಗಿದೆ. ಆದರೂ ಸರ್ಕಾರದ ಸೂಚನೆಯಂತೆ ಗೋಶಾಲೆಗಳಿಗೆ ಮೇವು ಪೂರೈಕೆ ಮಾಡಲಾಗುತ್ತಿದೆ. ರೈತರು ಜಾನುವಾರುಗಳ ಮೇವು ಹಾಳಾಗದಂತೆ ಜಾಗ್ರತೆ ವಹಿಸಬೇಕು ಎಂದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ ಮಾತನಾಡಿ, ಎ.ಜಿ. ರಸ್ತೆ ಗೋಶಾಲೆಲ್ಲಿ 1500ಕ್ಕೂ ಹೆಚ್ಚು ಜಾನುವಾರುಗಳಿವೆ. ಅದರಲ್ಲಿ 1100 ಜಾನುವಾರುಗಳು ರೈತರಿಗೆ ಸೇರಿದ್ದರೆ, 400ಕ್ಕೂ ಹೆಚ್ಚು ಜಾನುವಾರುಗಳು ದೇವರ ಎತ್ತುಗಳಾಗಿವೆ. ಸರ್ಕಾರದ ಸೂಚನೆಯಂತೆ ಪ್ರತಿ ನಿತ್ಯ ಮೇವು ವಿತರಣೆ ಮಾಡಲಾಗುತ್ತಿದೆ. ನೀರಿನ ವ್ಯವಸ್ಥೆಯೂ ಸಮರ್ಪಕವಾಗಿದೆ. ತಾಲೂಕು ಕಚೇರಿ ಮತ್ತು ತಾಲೂಕು ಪಂಚಾಯತ್‌ ಸಿಬ್ಬಂದಿ ಇಲ್ಲಿಯೇ ಇದ್ದು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಪ್ರತಿನ ದಿನ ಒಂದು ಜಾನುವಾರಿಗೆ 5 ಕೆಜಿ ಮೇವು ನೀಡಲಾಗುತ್ತದೆ ಎಂದು ವಿವರಿಸಿದರು. ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next