ಚಳ್ಳಕೆರೆ: ಕಳೆದ ಸುಮಾರು ಎರಡು ವರ್ಷಗಳಿಂದ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಶಿಷ್ಟ ವರ್ಗದ ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್, ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ 12 ಕೊಠಡಿಗಳು ಮತ್ತು 75 ಲಕ್ಷ ವೆಚ್ಚದ ಆಡಿಟೋರಿಯಂ ಕಾಮಗಾರಿಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶುಕ್ರವಾರ ವೀಕ್ಷಿಸಿದರು.
ಕಾಲೇಜಿನ ಆವರಣದಲ್ಲಿ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಸುಮಾರು 60 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಾಸ್ಟೆಲ್ ಕಾಮಗಾರಿ ನಿಧಾನಗತಿಯಲ್ಲಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜಣ್ಣ, ಸಹಾಯಕ ಇಂಜಿನಿಯರ್ ಲಕ್ಷ್ಮೀನಾರಾಯಣ ಅವರನ್ನು ಶಾಸಕರು ಪ್ರಶ್ನಿಸಿದರು. ಈ ಬಗ್ಗೆ ಸಮಜಾಯಿಸಿ ನೀಡಿದ ಅಧಿಕಾರಿಗಳು ಇನ್ನೂ 30 ಲಕ್ಷ ಹಣ ನೀಡಿದಲ್ಲಿ ಕಟ್ಟಡದ ಕಾಮಗಾರಿ ಸಂಪೂರ್ಣವಾಗಲಿದೆ ಎಂದರು.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅ ಧಿಕಾರಿಗಳಿಗೆ ಪತ್ರ ಬರೆದು ಹಣ ಬಿಡುಗಡೆಗೊಳಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದರು. ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ 1 ಕೋಟಿ ವೆಚ್ಚದಲ್ಲಿ 6 ಬೋಧನಾ ಕೊಠಡಿಗಳು, ರೈಸ್ ಕಂಪನಿಯಿಂದ 1 ಕೋಟಿ ವೆಚ್ಚದಲ್ಲಿ 6 ಬೋಧನಾ ಕೊಠಡಿಗಳ ನಿರ್ಮಾಣ ಕಾರ್ಯ ಪರಿಶೀಲಿಸಿದ ಶಾಸಕರು, ಇನ್ನೂ ಹೆಚ್ಚಿನ ಗುಣಮಟ್ಟ ಬರಬೇಕಿತ್ತು ಎಂದರು.
ಇದೇ ಸಂದರ್ಭದಲ್ಲಿ 100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಡಿಟೋರಿಯಂ ಕಾಮಗಾರಿ ವೀಕ್ಷಿಸಿದ ಅವರು, ಬರುವ ನವೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕೆಆರ್‌ಐಡಿಎಲ್ ಇಂಜಿನಿಯರ್ ದೇವರಾಜರವರಿಗೆ ಸೂಚಿಸಿದರು.
ಕಾಲೇಜು ಆವರಣದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಂಪ್ಯೂಟರ್ ಕೊಠಡಿ ಮತ್ತು ಕ್ಯಾಂಟೀನ್ ಕಾಮಗಾರಿ ವೀಕ್ಷಿಸಿದ ಶಾಸಕರು ಕ್ಯಾಂಟಿನ್ ವ್ಯವಸ್ಥೆ ಮಾಡಲು ಖಾಸಗಿಯವರಿಗೆ ಟೆಂಡರ್ ಮೂಲಕ ಗುತ್ತಿಗೆ ನೀಡುವಂತೆ ಸೂಚಿಸಿದರಲ್ಲದೆ, ಅವಶ್ಯಕತೆ ಪೂರೈಸಿಕೊಡುವಂತೆ ಇಂಜಿನಿಯರ್‌ಗೆ ಸೂಚಿಸಿದರು.
ಕಾಲೇಜು ಆವರಣದಲ್ಲಿ ಈಗಾಗಲೇ ನೂರಾರು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಪ್ರತಿಯೊಂದು ಹಂತದಲ್ಲೂ ಗುಣಮಟ್ಟದ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಪರಿಶೀಲಿಸಬೇಕು. ಯಾವುದೇ ಲೋಪವಿದ್ದಲ್ಲಿ ಗಮನಕ್ಕೆ ತರುವಂತೆ ಸೂಚಿಸಿದರು. ಕಾಲೇಜಿನ ಪ್ರಾಂಶುಪಾಲ ಜಿ.ವೆಂಕಟೇಶ್, ಪ್ರೊ. ಎಂ.ಬೀರಲಿಂಗಪ್ಪ, ಶಿವಲಿಂಗಪ್ಪ, ಡಾ.ಕವಿತಾ, ಲೀಲಾವತಿ, ರಾಜೇಶ್ವರಿ ಪೂಜಾರ, ಜಗದೀಶ್, ಕೆ.ಚಿತ್ತಯ್ಯ, ಡಿ.ಅಂಜಿನಪ್ಪ, ಅಶೋಕರೆಡ್ಡಿ, ರಾಮಪ್ಪ, ಟಿ.ನಾಗರಾಜು, ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಇಂಜಿನಿಯರ್ ಪ್ರಶಾಂತ್, ಸೂಪರಿಟೆಂಡೆಂಟ್ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.