Advertisement

ಚಳ್ಳಕೆರೆ-ಮಳೆಕೆರೆ!

02:51 PM Sep 29, 2019 | Naveen |

ಚಳ್ಳಕೆರೆ: ಬರಗಾಲವನ್ನೇ ಹಾಸಿ ಹೊದ್ದಂತಿರುವ ಚಳ್ಳಕೆರೆ ತಾಲೂಕಿನ ಜನರಿಗೆ ಉತ್ತರೆ ಮಳೆ ತುಸು ಸಮಾಧಾನ ನೀಡಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗುತ್ತಿದ್ದು, ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹಗೊಂಡಿದೆ.

Advertisement

ತುಂಬಿ ಹರಿದ ಹಳ್ಳಗಳು: ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಗೆ ನಗರದ ಪಾವಗಡ ರಸ್ತೆಯ ಹಳ್ಳ, ರಹೀಂನಗರದ ಹಳ್ಳ ತುಂಬಿ ಹರಿಯುತ್ತಿದೆ. ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ಮೈರಾಡ ಕಾಲೋನಿಯ ಸುಮಾರು 15ಕ್ಕೂ ಹೆಚ್ಚು ಗುಡಿಸಲುಗಳಿಗೆ ರಭಸವಾಗಿ ನೀರು ನುಗ್ಗಿತ್ತು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿಗಳಿಗೆ ಕೂಡಲೇ ವರದಿ ಕಳುಹಿಸಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಮೈರಾಡ ಕಾಲೋನಿಯ ಲಿಂಗಮ್ಮ, ತಿಮ್ಮಕ್ಕ, ಯಶೋದಮ್ಮ, ಜಂಬಣ್ಣ, ನೇತ್ರಾವತಿ, ಸುಲೋಚನಾ, ರೇಣುಕಮ್ಮ, ಮಾರಕ್ಕ, ಅನ್ನಪೂರ್ಣಮ್ಮ, ಶಾಂತಮ್ಮ ಮೊದಲಾದವರ ಮನೆಗಳಿಗೆ ನೀರು ನುಗ್ಗಿ ತೊಂದರೆಯನ್ನುಂಟು ಮಾಡಿತು.

ತಾಲೂಕಿನ ದೊಡ್ಡೇರಿ ಗ್ರಾಮದ ಕನ್ನೇಶ್ವರ ಆಶ್ರಮದ
ಶ್ರೀ ಮಲ್ಲಪ್ಪ ಸ್ವಾಮೀಜಿ ತಮ್ಮ ಮಠದ ವ್ಯಾಪ್ತಿಯಲ್ಲಿ
ನಿರ್ಮಿಸಲಾಗಿರುವ ಚೆಕ್‌ಡ್ಯಾಂಗೆ ಪೂಜೆ ಸಲ್ಲಿಸಿದರು.

ದ್ಯಾವರನಹಳ್ಳಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ ಚೆಕ್‌ಡ್ಯಾಂ ಒಡೆದುಹೋಗಿದೆ. ಕಳೆದ ತಿಂಗಳು ಎನ್‌ಆರ್‌ಇಜಿ ಯೋಜನೆಯಡಿ ಚೆಕ್‌ಡ್ಯಾಂ ಅನ್ನು ದುರಸ್ತಿಗೊಳಿಸಲಾಗಿತ್ತು. ಶುಕ್ರವಾರ ಬಿದ್ದ ಮಳೆಗೆ ಚೆಕ್‌ಡ್ಯಾಂ ಒಡೆದು ಹೋಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಜಮೀನು ಜಲಾವೃತ: ದೊಡ್ಡೇರಿ ಗ್ರಾಮದ ರೈತ ಸ್ವಾಮಿ ಎಂಬುವವರ ಜಮೀನಿಗೆ ನೀರು ನುಗ್ಗಿ ಟೊಮ್ಯಾಟೋ ತೋಟ ಸಂಪೂರ್ಣ ಜಲಾವೃತವಾಗಿದೆ. ದೊಣೆಹಳ್ಳಿ ಗ್ರಾಮದ ಸಣ್ಣಪ್ಪ ಎಂಬುವವರ ಒಂದು ಎಕರೆ ಜಮೀನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ಮಳೆಗೆ ಕೊಚ್ಚಿಹೋಗಿ 1.50 ಲಕ್ಷ ರೂ. ನಷ್ಟ ಉಂಟಾಗಿದೆ. ಅದೇ ರೀತಿ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಕೆರೆ ನೀರು ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಎರಡು ಕುರಿ, ಒಂದು ಎಮ್ಮೆ, ಹೊಲದಲ್ಲಿದ್ದ ಈರುಳ್ಳಿ, ಶೇಂಗಾ ಬೆಳೆ ನೀರಿನಲ್ಲಿ ಮುಳುಗಿದ್ದವು.

ಕೆ.ಡಿ. ಕೋಟೆ ಗ್ರಾಮದಲ್ಲೂ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಿರೇಹಳ್ಳಿ ಗ್ರಾಮದಲ್ಲಿ ಮಳೆಯಿಂದ ಬಸಮ್ಮ ಕೊಲ್ಲಾರಯ್ಯ, ಗುರುಸಿದ್ದಪ್ಪ
ಎಂಬುವವರ ಮನೆಗಳ ಮೇಲ್ಛಾವಣಿ ಕುಸಿದು 20 ಸಾವಿರ ರೂ.ಗಿಂತ ನಷ್ಟ ಸಂಭವಿಸಿದೆ. ತಾಲೂಕಿನ ತಳಕು ಹೋಬಳಿ ಓಬಣ್ಣನಹಳ್ಳಿ ಬೆಲ್ದಾರಹಟ್ಟಿಯಲ್ಲಿ ಅಂಜಿನಮ್ಮ ಎಂಬುವವರ ಮನೆ ಬಿದ್ದು 10 ಸಾವಿರ ರೂ. ಹಾನಿಯಾಗಿದೆ. ಘಟಪರ್ತಿ ಗ್ರಾಮದಲ್ಲಿ ಲಕ್ಷ್ಮೀ ದೇವಿ ಕೋಂ ಚಂದ್ರಣ್ಣ, ರತ್ನಮ್ಮ ಕೋಂ ಶಿವಣ್ಣ ಮತ್ತು ಲಕ್ಷ್ಮೀದೇವಿ ಕೋಂ ಹನುಮಂತ ರೆಡ್ಡಿ ಮನೆಗಳ ಗೋಡೆ ಬಿದ್ದು ಸುಮಾರು 60 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಳೆ ಹಾನಿ ಹಿನ್ನೆಲೆಯಲ್ಲಿ ಶಾಸಕ ಟಿ. ರಘುಮೂರ್ತಿಯವರ ಸೂಚನೆ ಮೇರೆಗೆ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಕಂದಾಯಾಧಿಕಾರಿಗಳಾದ ಮಹಮ್ಮದ್‌ ರಫೀ , ಗ್ರಾಮಲೆಕ್ಕಿಗ ರಾಜೇಶ್‌ ಮತ್ತಿತರರು ಸ್ಥಳ ಪರಿಶೀಲನೆ ಮಾಡಿ ನಷ್ಟದ ವರದಿ ಸಿದ್ಧಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next