ಚಳ್ಳಕೆರೆ: ಪ್ರಕೃತಿ ಮಾತೆಯ ಮುನಿಸಿಗೆ ಉತ್ತರ ಕರ್ನಾಟಕದ ಸಾವಿರಾರು ಕುಟುಂಬಗಳು ತತ್ತರಿಸಿ ಹೋಗಿವೆ. ನೊಂದ ಜನರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಿದ್ದೇವೆ. ಸಂತ್ರಸ್ತರು ಆದಷ್ಟು ಬೇಗ ಚೇತರಿಸಿಕೊಳ್ಳುವಂತಾಗಲಿ ಎಂಬುದು ನಮ್ಮ ಹಾರೈಕೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನೆರೆ ಸಂತ್ರಸ್ತರಿಗೆ ಆಹಾರ ಪದಾರ್ಥ, ಬಟ್ಟೆ, ಗೃಹೋಪಯೋಗಿ ವಸ್ತುಗಳನ್ನು ವಿತರಿಸುತ್ತಿರುವ ಅವರು ಬುಧವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು.
ಆ ಭಾಗದ ಶಾಸಕರು, ಚುನಾಯಿತ ಜಿಲ್ಲಾ ಹಾಗೂ ತಾಪಂ ಸದಸ್ಯರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ನೆರವಿನಿಂದ ನಮ್ಮ ತಂಡದ ಎಲ್ಲಾ ಮುಖಂಡರು, ಕಾರ್ಯಕರ್ತರು ಎಡೆಬಿಡದೆ ಈ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ನೂರು ಜನರ ತಂಡ ಎಂಟು ಭಾಗಗಳಾಗಿ ಪದಾರ್ಥ, ವಸ್ತು ಗಳನ್ನು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಳಕವಾಡಿ, ಆಗನೂರು, ಕಲಗಟ್ಟ ಮುಂತಾದ ಗ್ರಾಮಗಳಿಗೆ ತೆರಳಿ ನೆರವು ನೀಡಿದ್ದೇವೆ. ಆ ಭಾಗದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಅಲ್ಲಿನ ಜನರು ಸಂಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಂದಾಜು 16,500 ಕುಟುಂಬಗಳಿಗೆ ದವಸ ಧಾನ್ಯ, ಬಟ್ಟೆಗಳನ್ನು ವಿತರಿಸಲಾಯಿತು. ಸಾವಿರಾರು ಮುಗ್ಧ ಜನರು ನಮ್ಮ ಸಹಾಯವನ್ನು ಅತ್ಯಂತ ಕೃತಜ್ಞತಾ ಭಾವನೆಯಿಂದ ಸ್ವೀಕರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಭಾಗದ ಜನರಿಗೆ ಮೂಲಭೂತವಾಗಿ ಬೇಕಾಗಿರುವ ಬಟ್ಟೆ, ಲುಂಗಿ, ಬೆಡ್‌ಶೀಟ್, ಟವೆಲ್, ಸೀರೆ, ಚಾಪೆ, ಪಾತ್ರೆ, ಕೊಡ, ಪ್ಲಾಸ್ಟಿಕ್ ವಸ್ತುಗಳು, ಪೇಸ್ಟ್, ಬ್ರಷ್, ಸಾಬೂನು, ಬಿಸ್ಕಿಟ್, ಅಕ್ಕಿ, ಅಡುಗೆ ಎಣ್ಣೆ ಮುಂತಾದ ಪದಾರ್ಥಗಳನ್ನು ನೆರೆ ಸಂತ್ರಸ್ತರಿಗೆ ಹಂಚಲಾಗಿದೆ. ನಮ್ಮಿಂದ ವಸ್ತುಗಳನ್ನು ಪಡೆದ ನೂರಾರು ಜನರು ಸಂತಸದಿಂದ ನಮ್ಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ದುಸ್ಥಿತಿ ಯಾರಿಗೂ ಬಾರದಿರಲಿ ಎಂದು ದೇವರನ್ನು ಪ್ರಾರ್ಥಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬು ರೆಡ್ಡಿ, ನಗರಸಭಾ ಸದಸ್ಯರಾದ ಕೆ. ವೀರಭದ್ರಪ್ಪ, ವೈ. ಪ್ರಕಾಶ್, ಟಿ. ಮಲ್ಲಿಕಾರ್ಜುನ, ಮುಖಂಡರಾದ ಜಿ. ವೀರೇಶ್, ಆರ್. ಪ್ರಸನ್ನಕುಮಾರ್, ಕೃಷ್ಣ, ಆರ್. ಭರಮಣ್ಣ, ಪಾಲಯ್ಯ, ಎನ್. ಮಂಜುನಾಥ, ಪಿ. ತಿಪ್ಪೇಸ್ವಾಮಿ, ಶೇಖರಪ್ಪ, ತಿಪ್ಪೇಶ್ ಮತ್ತಿತರರು ಇದ್ದರು.