ಚಳ್ಳಕೆರೆ: ಅಗ್ನಿ ಆಕಸ್ಮಿಕ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ವಿಶೇಷವಾಗಿ ರಹೀಂನಗರ ವ್ಯಾಪ್ತಿಯಲ್ಲಿ ತೆಂಗಿನ ಗರಿಯ ಗುಡಿಸಲುಗಳ ಸಂಖ್ಯೆ ಹೆಚ್ಚಿದ್ದು, ಗರಿಗಳನ್ನು ತೆರವುಗೊಳಿಸಿ ಶೀಟ್ ಹಾಕುವ ವ್ಯವಸ್ಥೆ ಆಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ರಹೀಂ ನಗರದ ನಾಗವೇಣಿ ಶ್ರೀನಿವಾಸ್ ಎಂಬುವವರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಬಟ್ಟೆ, ಆಹಾರ ಪದಾರ್ಥ ಅಗ್ನಿಗೆ ಆಹುತಿಯಾಗಿತ್ತು. ಭಾನುವಾರ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಈ ಭಾಗದ ಗುಡಿಸಲು ನಿವಾಸಿಗಳು ಶೆಡ್ ನಿರ್ಮಿಸಿಕೊಳ್ಳುವಂತೆ ಸೂಚಿಸಬೇಕೆಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಅವರಿಗೆ ತಿಳಿಸಿದರು. ಅಗ್ನಿ ಅನಾಹುತದಲ್ಲಿ ಸಂತ್ರಸ್ತರಾದ ನಾಗವೇಣಿ ಶ್ರೀನಿವಾಸ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರಲ್ಲದೆ ಸರ್ಕಾರದಿಂದ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.
ನಗರಸಭೆ ಸದಸ್ಯೆ ಸುಜಾತಾ ಪಾಲಯ್ಯ ಮಾತನಾಡಿ, ರಹೀಂನಗರ ವ್ಯಾಪ್ತಿಯಲ್ಲಿರುವ ಗುಡಿಸಲು ವ್ಯಾಪ್ತಿಯ ಜನರಿಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಲಾಗಿದೆ. ಈ ಹಿಂದೆ ಒಂದೇ ಹಂತದಲ್ಲಿ 5 ರಿಂದ 10 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಶಾಸಕರ ಅನುದಾನದಲ್ಲಿ ಇಲ್ಲಿರುವ ಗುಡಿಸಲು ವಾಸಿಗಳಿಗೆ ಶೆಡ್ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಟಿ. ರಘುಮೂರ್ತಿ, ಈ ಭಾಗದ ರಸ್ತೆ ಅಗಲೀಕರಣಕ್ಕೆ ಸೂಚನೆ ನೀಡಿದರು. ಕೇವಲ 7 ಮೀಟರ್‌ನಷ್ಟು ರಸ್ತೆ ಅಗಲೀಕರಣಗೊಳಿಸಲಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ಪೌರಾಯುಕ್ತ ಜೆ.ಟಿ. ಹನುಮಂತರಾಜು ಮಾತನಾಡಿ, ಸೋಮವಾರವೇ ಈ ರಸ್ತೆಯ ಎರಡೂ ಬದಿಗಳಲ್ಲಿ ಮತ್ತೂಮ್ಮೆ ಮಾರ್ಕಿಂಗ್ ಮಾಡಿ ರಸ್ತೆ ಅಗಲೀಕರಣ ಆರಂಭಿಸಲಾಗುವುದು. ಈಗಾಗಲೇ ರಸ್ತೆ ಬದಿಯ ಎರಡೂ ಬದಿಯ ನಿವಾಸಿಗಳಿಗೆ ಅಗಲೀಕರಣದ ಬಗ್ಗೆ ಮಾಹಿತಿ ನೀಡಲಾಗಿದೆ. 9 ಮೀಟರ್ ಅಗಲೀಕರಣ ಮಾಡಬೇಕಿತ್ತು. ಆದರೆ ಸಾರ್ವಜನಿಕರ ಮನವಿ ಮೇರೆಗೆ ಶಾಸಕರು 7 ಮೀಟರ್ ಮಾಡುವಂತೆ ನಿರ್ದೇಶನ ನೀಡಿದ್ದು, ಅದನ್ನು ಪಾಲಿಸುವುದಾಗಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಬಾಬು ರೆಡ್ಡಿ, ನಗರಸಭಾ ಸದಸ್ಯರಾದ ಬಿ.ಟಿ. ರಮೇಶ್ ಗೌಡ, ಟಿ. ಮಲ್ಲಿಕಾರ್ಜುನ, ವೈ. ಪ್ರಕಾಶ್, ವಿರೂಪಾಕ್ಷಿ, ಮಾಜಿ ಸದಸ್ಯ ಎಸ್. ಮುಜೀಬುಲ್ಲಾ, ಕಾಂಗ್ರೆಸ್ ಮುಖಂಡ ಪಾಲಯ್ಯ, ಗ್ರಾಮಲೆಕ್ಕಿಗ ರಾಜೇಶ್, ನಗರಸಭೆ ಸಮನ್ವಯಾಧಿಕಾರಿ ಪಿ. ಪಾಲಯ್ಯ, ಸ್ವಾಮಿ ಮತ್ತಿತರರು ಇದ್ದರು.