ಚಳ್ಳಕೆರೆ: ಭಾರತೀಯ ಕಲೆ-ಸಂಸ್ಕೃತಿ ರಕ್ಷಣೆಗೆ ಸಂಸ್ಕಾರ ಭಾರತಿ ಸಂಸ್ಥೆ ಕಾರ್ಯನಿರ್ವಹಿಸು ತ್ತಿರುವುದು ಶ್ಲಾಘನೀಯ ಎಂದು ಚಿತ್ರದುರ್ಗದ ನೃತ್ಯಪಟು ವಿದೂಷಿ ನಂದಿನಿ ಶಿವಪ್ರಕಾಶ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಸಂಸ್ಕಾರ ಭಾರತಿಯ ತಾಲೂಕು ಘಟಕದ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಕಲಾ ಪರಂಪರೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಕಲೆಯನ್ನು ಮುಂದಿನ ಪೀಳಿಗೆಯವರೂ ಸಂರಕ್ಷಿಸಿ ಬೆಳೆಸಬೇಕಿದೆ. ಕಲೆಗೆ ಯಾವುದೇ ಜಾತಿ-ಭಾಷೆಯ ಭೇದ ಭಾವ ಇಲ್ಲ. ನಾವೆಲ್ಲರೂ ಉತ್ತಮ ಸಂಸ್ಕಾರವಂತರಾಗಿ ಬಾಳಬೇಕಾದರೆ ನಮಗೆ ಕಲೆಯೇ ಮೂಲ ಸ್ಫೂರ್ತಿ. ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಯಿಂದ ಭಾರತೀಯ ಕಲೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.
ಸಂಸ್ಕಾರ ಭಾರತಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಆನಂದ ಕುಲಕರ್ಣಿ ಮಾತನಾಡಿ, ನಾವು ಹಲವಾರು ಕಾರ್ಯಕ್ರಮಗಳನ್ನು ವಿವಿಧ ವೇದಿಕೆಗಳಲ್ಲಿ ವೀಕ್ಷಣೆ ಮಾಡುತ್ತೇವೆ. ಆದರೆ ಸಂಸ್ಕಾರ ಭಾರತಿ ಸರ್ವ ಕಲೆಯನ್ನು ಒಂದುಗೂಡಿಸಿ ಅವುಗಳನ್ನು ವ್ಯವಸ್ಥಿತವಾಗಿ ರಕ್ಷಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ರಾಜ್ಯದ ಹಲವಾರು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಸ್ಕಾರ ಭಾರತಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಪಿಲ್ಲಹಳ್ಳಿ ಸಿ. ಚಿತ್ರಲಿಂಗಪ್ಪ ಮಾತನಾಡಿ, ನಗರದ ಹಿರಿಯ ಕಲಾವಿದರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಕಲಾವಿದರನ್ನು ಸನ್ಮಾನಿಸುವ ಮೂಲಕ ಸಂಸ್ಕಾರ ಭಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಕಾರ ಭಾರತಿ ಕಾರ್ಯಕ್ರಮಗಳನ್ನು ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಂ.ಎಸ್. ಜಯರಾಂ, ಕಾರ್ಯದರ್ಶಿ ಲಕ್ಷ್ಮೀ ಶ್ರೀವತ್ಸ, ವಾಣಿಜ್ಯೋದ್ಯಮಿ ರಾಮದಾಸ್, ಡಾ| ಜಯಕುಮಾರ್, ರೋಟರಿ ಅಧ್ಯಕ್ಷ ಕೆ.ಎ. ಮೂರ್ತಪ್ಪ, ಜಯಪ್ರಕಾಶ್, ಆರ್.ಎ. ದಯಾನಂದಮೂರ್ತಿ, ಉಪಾಧ್ಯಕ್ಷೆ ಎಂ.ವಿ. ಸೀತಾಲಕ್ಷ್ಮೀ, ಸುನೀತಾ ಬಸವರಾಜು, ಮಂಜುಳಾ ರಾಜ್, ಗೀತಾಂಜಲಿ, ಉಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಆರ್. ಮಧುಮತಿ, ಕಾರ್ಯದರ್ಶಿ ಗಂಗಾಧರ, ಸಹ ಕಾರ್ಯದರ್ಶಿ ಎಸ್. ವೆಂಕಟೇಶ ಗುಪ್ತ, ಕೆ.ಎಂ. ಯತೀಶ್, ಖಜಾಂಚಿ ಎ.ಎಸ್. ಕುಮಾರ್, ನಿರ್ದೇಶಕರಾದ ದೊಡ್ಡಜ್ಜಯ್ಯ, ಶುಭಾ ಸೋಮಶೇಖರ್, ಬಸವರಾಜೇಶ್ವರಿ, ಪ್ರೇಮಾ ಮಂಜುನಾಥ, ಜೆ.ಪಿ. ಇಂದುಮತಿ, ಬಸವರಾಜು ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಎ. ಅನಂತಪ್ರಸಾದ್, ರಂಗ ಕಲಾವಿದ ಕಾಟಪ್ಪನಹಟ್ಟಿ ಎಸ್.ಕೆ. ಸೂರಯ್ಯ,ಪೌರಾಣಿಕೆ ನಾಟಕ ಶಿಕ್ಷಕ ಚೆಟ್ಟೇಕಂಬ ಎಚ್. ದೊಡ್ಡವೀರಪ್ಪ, ಸಂಗೀತ ವಿದ್ವಾನ್ ಅಜ್ಜಪ್ಪ, ರಂಗಭೂಮಿ ಕಲಾವಿದ ಶಿರಾದ ಕೆ. ಈರೇಗೌಡ, ಜಾನಪದ ಕಲಾವಿದೆ ಕ್ಯಾತಗೊಂಡನಹಳ್ಳಿಯ ಕೆಂಚಮ್ಮ ಅವರನ್ನು ಸನ್ಮಾನಿಸಲಾಯಿತು.