ಚಳ್ಳಕೆರೆ: ತಾಲೂಕಿನಾದ್ಯಂತ ಪ್ರಧಾನ ಮಂತ್ರಿಗಳ ಫಸಲ್ ಬೀಮಾ ಯೋಜನೆಯ ಹಣ ಇದುವರೆಗೂ ರೈತ ಫಲಾನುಭವಿಗಳಿಗೆ ತಲುಪದೆ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಬಾಕಿ ನಿಂತ ಎಲ್ಲ ಫಲಾನುಭವಿಗಳಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ನೇತೃತ್ವದಲ್ಲಿ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮುಷ್ಕರ ನಡೆಸಿದರು.
ತಾಲೂಕಿನ ಸಾವಿರಾರು ರೈತರಿಗೆ ಇದುವರೆಗೂ ಫಸಲ್ ಬಿಮಾ ಯೋಜನೆಯ ಹಣ ಪಾವತಿಯಾಗದೇ ರೈತರು ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಕೂಡಲೇ ಸರ್ಕಾರ ಈ ಹಣ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಕ್ಷೇತ್ರದ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳೆ ವಿಮೆ ಪಾವತಿ ಕುರಿತು ಧರಣಿ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ ಕೂಡಲೇ ಸ್ಥಳಕ್ಕೆ ಧಾವಿಸಿ ವಿಮೆ ಹಣ ಪಾವತಿಯಾಗದ ಬಗ್ಗೆ ರೈತರಿಂದ ಮಾಹಿತಿ ಪಡೆದರು.
ನಂತರ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ಚಳ್ಳಕೆರೆ ತಾಲ್ಲೂಕು ಬರಗಾಲ ಪೀಡಿತ ಪ್ರದೇಶವಾಗಿದ್ದು, ರೈತರು ಫಸಲ್ ಬಿಮಾ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದು, ಕೂಡಲೇ ಸರ್ಕಾರ ಈ ಹಣವನ್ನು ಬಿಡುಗಡೆಗೊಳಿಸಬೇಕೆಂದು ರೈತರ ಪರವಾಗಿ ಒತ್ತಾಯಿಸಟಲಾಗುವುದು ಎಂದು ತಿಳಿಸಿದರು.
ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ರೈತರು ತಮಗೆ ನ್ಯಾಯಯುತವಾಗಿ ದೊರಕಬೇಕಾದ ವಿಮೆ ಕಂತು ಹಣ ಇನ್ನೂ ಅವರ ಖಾತೆಗೆ ಜಮಾವಾಗದ ಕಾರಣ ಇಲ್ಲಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದೀರಿ. ರೈತರ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರವಾಗಿ ಫಸಲ್ ಬಿಮಾ ಯೋಜನೆ ಹಣ ರೈತರ ಖಾತೆಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಆಯುಕ್ತ ಶಿವಕುಮಾರ್ ಮಾತನಾಡಿ, ಈಗಾಗಲೇ ಚಳ್ಳಕೆರೆ ತಾಲೂಕಿನ ಕೆಲವು ರೈತರಿಗೆ ಫಸಲ್ ಬಿಮಾ ಯೋಜನೆಯಡಿ ಅವರ ಖಾತೆಗೆ ಹಣ ಪಾವತಿಸಲಾಗಿದೆ. ಇನ್ನೂ ಬಾಕಿ ಉಳಿದ ರೈತರಿಗೆ 8 ದಿನದೊಳಗಾಗಿ ಚುನಾವಣೆಗೆ ನೀತಿ ಸಂಹಿತೆ ಮುಗಿದ ನಂತರ ಹಣ ಪಾವತಿ ಮಾಡಲಾಗುವುದು. ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಹಾಯಕ ಆಯುಕ್ತ ವೈ. ಶ್ರೀನಿವಾಸ್, ರೈತರಾದ ಆರ್.ಎ. ದಯಾನಂದಮೂರ್ತಿ, ನೇರ‌್ಲಗುಂಟೆ ರಾಮಪ್ಪ, ಚಂದ್ರಣ್ಣರೆಡ್ಡಿ, ಹಂಪಣ್ಣ, ತಿಮ್ಮಣ್ಣ ಇತರರು ಪಾಲ್ಗೊಂಡಿದ್ದರು.