ಚಳ್ಳಕೆರೆ: ಕಳೆದ ಸುಮಾರು 50 ವರ್ಷಗಳಿಂದ ಚಳ್ಳಕೆರೆ ನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ತನ್ನ ವಹಿವಾಟನ್ನು ನಡೆಸುತ್ತಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ಮಳೆ ಹಾಗೂ ಬರಗಾಲ ಹಿನ್ನೆಲೆಯಲ್ಲಿ ಹೆಚ್ಚಿನ ವಹಿವಾಟು ನಡೆಯಲಿಲ್ಲ.
ಪ್ರಸ್ತುತ ವರ್ಷ ಕೊರೊನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಮಾರುಕಟ್ಟೆಯ ವ್ಯವಹಾರ ಸಂಪೂರ್ಣವಾಗಿ ತಟಸ್ಥವಾಗಿದೆ. ರೈತರು ಹಾಗೂ ಇತರೆ ಕಡೆಗಳಿಂದ ಹೆಚ್ಚಿನ ಮಾಲು ಇಲ್ಲಿಗೆ ಆಗಮಿಸುತ್ತಿದ್ದು, ಮಾಲನ್ನು ಖರೀದಿಸಲು ಜನರೇ ಬರುತ್ತಿಲ್ಲ. ಕೇವಲ ದಲ್ಲಾಲರು ಮತ್ತು ಹಮಾಲರು ಕಾರ್ಯನಿರ್ವಹಿಸುತ್ತಿದ್ದು, ವಹಿವಾಟು ಉತ್ತಮ ಸ್ಥಿತಿಯಲ್ಲಿ ನಡೆಯದೇ ಖರೀದಿದಾರರ ಅವಶ್ಯಕತೆ ಇದೆ. ಆದರೆ ಮಾರುಕಟ್ಟೆಯ ಬಹುತೇಕ ದಲ್ಲಾಲಿ ಮಂಡಿಗಳಲ್ಲಿ ಹೆಚ್ಚಿನ ಪ್ರಮಾಣದ ಮೆಣಸಿನಕಾಯಿ ಹಾಗೂ ಹುಣಸೆ ಹಣ್ಣು ದಾಸ್ತಾನಾಗಿದೆ. ಯಾರೂ ಖರೀದಿದಾರರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಮಾರುಕಟ್ಟೆ ವಹಿವಾಟು ನಡೆಯದೇ ಆರ್ಥಿಕ ಹಿನ್ನೆಡೆ ಅನುಭವಿಸುವಂತಾಗಿದೆ ಎಂದು ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ. ಅರವಿಂದಕುಮಾರ್ ತಿಳಿಸಿದರು.
ಇತ್ತೀಚೆಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾರುಕಟ್ಟೆ ಉಪ ನಿರ್ದೇಶಕ ಶ್ರೀನಿವಾಸ್‌ರೆಡ್ಡಿ, ಹಮಾಲರ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ಸಂಘದ ತೀರ್ಮಾನದಂತೆ ಮಾರುಕಟ್ಟೆ ಆರಂಭಿಸಿದ್ದರೂ ಖರೀದಿದಾರರೇ ಇಲ್ಲದ ಕಾರಣ ಮಾರುಕಟ್ಟೆ ವ್ಯವಹಾರಕ್ಕೆ ತಾತ್ಕಾಲಿಕವಾಗಿ ಪ್ರಗತಿ ಕಾಣದಂತಾಗಿದೆ ಎಂದರು.
ದಲ್ಲಾಲರ ಸಂಘದ ನಿರ್ದೇಶಕ ಶ್ರೀರಂಗನಾಥಸ್ವಾಮಿ ಟ್ರೇಡರ್ ಮಾಲೀಕ ಡಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ 40 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಇಲ್ಲಿರುವ ಸುಮಾರು 30ಕ್ಕೂ ಹೆಚ್ಚು ಅಂಗಡಿಗಳಲ್ಲಿ ಮೆಣಸಿನಕಾಯಿ ದಾಸ್ತಾನಿದ್ದು, ಖರೀದಿದಾರರ ಕೊರತೆಯಿಂದ ವ್ಯಾಪಾರದಲ್ಲಿ ಚೇತರಿಕೆ ಇಲ್ಲ. ಇ-ಟೆಂಡರ್ ಮೂಲಕ ಖರೀದಿಸಲು ಆಸಕ್ತಿ ತೋರುತ್ತಿಲ್ಲ ಎಂದರು.
ಹುಣಸೆಹಣ್ಣು ಸಹ ಹೆಚ್ಚು ದಾಸ್ತಾನಿದ್ದು, ಚಳ್ಳಕೆರೆ ತಾಲೂಕು ಸೇರಿದಂತೆ ಜಿಲ್ಲೆಯ ಹಲವಾರು ಗ್ರಾಮಗಳು ಹಾಗೂ ಬಳ್ಳಾರಿ ಜಿಲ್ಲೆಯ ಗಡಿಭಾಗದ ಗ್ರಾಮಗಳಿಂದ ಹೆಚ್ಚು ಮಾಲು ದಾಸ್ತಾನಿದ್ದು, 8 ರಿಂದ 13 ರೂ. ಸಾವಿರ ತನಕ ದರವಿದೆ. ಖರೀದಿದಾರರ ಆಗಮನದಿಂದ ಮಾತ್ರ ಮಾರುಕಟ್ಟೆ ಎಲ್ಲ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.