Advertisement

25 ಲಕ್ಷ ವೆಚ್ಚದಲ್ಲಿ ತಾಲೂಕಿನ 5 ಕೆರೆಗಳ ಅಭಿವೃದ್ಧಿ

06:22 PM Jan 11, 2020 | Team Udayavani |

ಚಳ್ಳಕೆರೆ: 10 ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಬಹುತೇಕ ಕೆರೆಗಳು ಹೂಳು, ಜಾಲಿ ಹಾಗೂ ಬಾರಿ ಕಂದಕ, ಜತೆಯಲ್ಲಿ ಒತ್ತುವರಿಯಿಂದ ಕೂಡಿದ್ದು, ಇದರಿಂದ ಜಲ ಸಂರಕ್ಷಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಜಲಸಂರಕ್ಷಣೆ ಹಾಗೂ ಕೆರೆ ಅಭಿವೃದ್ಧಿ ಬಗ್ಗೆ ಸರ್ಕಾರ ಚಿಂತನೆ ನಡೆಸಿ ಜಿಲ್ಲೆಯ 164 ಕೆರೆಗಳ ಅಭಿವೃದ್ಧಿಗೆ ಸೂಚನೆ ನೀಡಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ತಿಳಿಸಿದರು.

Advertisement

ಇಲ್ಲಿನ ತಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧ್ಯಕ್ಷರು, ಸದಸ್ಯರು ಮತ್ತು ನೀರು ಸಂರಕ್ಷಣಾ ಸಮಿತಿ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನ ಒಟ್ಟು 5 ಕೆರೆಗಳ ಅಭಿವೃದ್ಧಿಗೆ 25 ಲಕ್ಷ ಹಣ ಬಿಡುಗಡೆಯಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕೆರೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕಲ್ಲದೆ, ಗ್ರಾಮದ ಪ್ರತಿಯೊಂದು ಮನೆಯಲ್ಲೂ ಮಳೆ ನೀರು ಸಂರಕ್ಷಣೆ ಹಾಗೂ ಇಂಗು ಗುಂಡಿ ಇರುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.

ಪಂಚಾಯಿತಿ ಅಭಿವೃದ್ಧಿ ಇಲಾಖೆಯ ಯಾವುದೇ ಯೋಜನೆ ಅನುಷ್ಠಾನಗೊಳಿಸಬೇಕಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಮೀರಿ ಯಾವುದೇ ರೀತಿಯ ಕಾಮಗಾರಿ ನಡೆದಲ್ಲಿ ಇಲಾಖೆಯ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ತಾಲೂಕಿನ ಹಿರೇಹಳ್ಳಿ, ಪಾಲನಾಯಕಕೋಟೆ, ಟಿ.ಎನ್‌.ಕೋಟೆ, ಘಟಪರ್ತಿ,
ಚೌಳೂರು ಗ್ರಾಮಗಳ ಕೆರೆ ಅಭಿವೃದ್ಧಿಗೆ 25 ಲಕ್ಷ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ತಾಪ ಇಒ ಶ್ರೀಧರ್‌ ಐ.ಬಾರಿಕೇರ್‌ ಮಾತನಾಡಿ, ಈಗಾಗಲೇ ಕೆರೆಯ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಎಲ್ಲರೂ ನಿಯಮಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕಿದೆ. ಗ್ರಾಮೀಣ ಪ್ರದೇಶಗಳ ಕೆರೆಗಳ ಹೂಳನ್ನು ಹೊರತೆಗೆದಾಗ ಅವುಗಳನ್ನು ನಿಯಮನುಸಾರ ಮಾರಾಟ ಮಾಡಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಗ್ರಾಮಗಳ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಒಂದು ಲೋಡ್‌ ಟ್ರ್ಯಾಕ್ಟರ್‌ ಮಣ್ಣಿಗೆ 20 ರೂ. ಟಿಪ್ಪರ್‌ ಲೋಡ್‌ಗೆ 30 ರೂ. ನಂತೆ ನಿಗದಿಪಡಿಸಿದ್ದು, ಸದರಿ ಹಣವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಸೂಚಿಸಿದರು.

ಕೆರೆಯ ಅಭಿವೃದ್ಧಿ, ಸ್ವಚ್ಛತೆ, ಗುಂಡಿಗಳನ್ನು ಮುಚ್ಚುವುದು ಮತ್ತು ಕೆರೆಗಳ ಬದುವನ್ನು ಸಮಪಡಿಸುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next