Advertisement

ದೇವರ ಎತ್ತುಗಳಿಗೆ 350 ಟನ್‌ ಮೇವು ವಿತರಣೆ

04:34 PM May 08, 2019 | Naveen |

ಚಳ್ಳಕೆರೆ: ಕಳೆದ ಹಲವಾರು ದಶಕಗಳಿಂದ ಗ್ರಾಮೀಣ ಪ್ರದೇಶದ ದೇವರ ಎತ್ತುಗಳು ಸೇರಿದಂತೆ ಎಲ್ಲಾ ಜಾನುವಾರುಗಳಿಗೆ ಮೇವು, ಹಿಂಡಿ ಹಾಗೂ ಬೂಸಾ ವಿತರಿಸಲಾಗುತ್ತಿದೆ. ನಮ್ಮ ಈ ಕಾರ್ಯಕ್ಕೆ ಬೆಂಗಳೂರಿನ ಇನ್ಫೋಸಿಸ್‌ ಅಧ್ಯಕ್ಷರು ಸಹಕಾರ ನೀಡುತ್ತಿದ್ದಾರೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್‌ ಹೇಳಿದರು.

Advertisement

ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಮೇವು ಪೂರೈಕೆ ಹಾಗೂ ಅವುಗಳ ಆರೋಗ್ಯದ ಕುರಿತಂತೆ ನಗರದ ಪ್ರವಾಸಿಮಂದಿರದಲ್ಲಿ ತಾಲೂಕು ಆಡಳಿತದೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ದೇವರ ಎತ್ತುಗಳಿಗೆ ಮೇವು ಪೂರೈಕೆ ಸ್ಥಗಿತಗೊಳಿಸದಂತೆ ಮನವಿ ಮಾಡಿದರು.

ಜಾನುವಾರುಗಳ ಮೇವು ಪೂರೈಕೆಗೆ ತಗಲುವ ವೆಚ್ಚವನ್ನು ಆಶ್ರಮವತಿಯಿಂದ ನೀಡಲಾಗುವುದು. ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಿ ಯಾವುದೇ ಕಾರಣಕ್ಕೂ ಕ್ಷೇತ್ರ ವ್ಯಾಪ್ತಿಯ ದೇವರ ಎತ್ತುಗಳು ಸೇರಿದಂತೆ ಯಾವುದೇ ಜಾನುವಾರುಗಳು ಮೇವಿಲ್ಲದೆ ಸಾಯುವ ಸ್ಥಿತಿ ಉಂಟಾಗದಂತೆ ಸಹಕಾರ ನೀಡಬೇಕೆಂದರು.

ಈಗಾಗಲೇ ಪಾವಗಡ, ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಅಂದಾಜು 350ಕ್ಕೂ ಹೆಚ್ಚು ಟನ್‌ ಮೇವು ವಿತರಿಸಲಾಗಿದೆ. ಅಲ್ಲದೆ ಹಿಂಡಿ ಮತ್ತು ಬೂಸಾವನ್ನು ಸಹ ವಿತರಣೆ ಮಾಡಲಾಗುತ್ತಿದೆ. ಪಾವಗಡ ತಾಲೂಕಿನ ಸುಮಾರು 5 ಗ್ರಾಮಗಳಲ್ಲಿ ಚಳ್ಳಕೆರೆ ತಾಲೂಕಿನ 8 ಗ್ರಾಮಗಳಲ್ಲಿ, ಮೊಳಕಾಲ್ಮೂರು ತಾಲೂಕಿನ 6 ಗ್ರಾಮಗಳಲ್ಲಿ ಈಗಾಗಲೇ ಉಚಿತವಾಗಿ ಮೇವು, ಹಿಂಡಿ, ಬೂಸಾ ನೀಡಲಾಗುತ್ತಿದೆ ಎಂದರು.

ದೇವರ ಎತ್ತುಗಳಿಗೆ ಕೇವಲ ಮೇವು, ಹಿಂಡಿ ನೀಡುವುದಷ್ಟೇ ಅಲ್ಲ, ಅವುಗಳ ಆರೋಗ್ಯದ ಕಡೆಗೂ ಸಹ ಗಮನ ನೀಡಬೇಕಿದೆ. ದೇವರ ಎತ್ತುಗಳು ವಾಸಿಸುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಕಡೇ ಪಕ್ಷ ಜಾನುವಾರುಗಳು ನೆರಳಿನಲ್ಲಾದರೂ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಮಗೆ ಹೆಚ್ಚಿನ ಸಹಕಾರ ನೀಡುತ್ತದೆ ಎಂಬ ಆಶಾಭಾವ ನಮಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌ ಮಾತನಾಡಿ, ನನ್ನಿವಾಳದ ದೇವರ ಎತ್ತುಗಳು ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಮೇವಿನ ಅಭಾವದಿಂದ ಯಾವುದೇ ಜಾನುವಾರುಗಳು ಸಾವನ್ನಪ್ಪದಂತೆ ಎಚ್ಚರಿಕೆ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವರ ಎತ್ತುಗಳ ಕಿಲಾರಿಗಳು ನಿಶ್ಯಕ್ತವಾದ ಹಸುಗಳನ್ನು ಹೊರಗೆ ಸಂರಕ್ಷಣೆಗೆ ಬಿಡುವುದಿಲ್ಲ. ಹಾಗಾಗಿ ಆಶ್ರಮದಲ್ಲಿಯೇ ಚಿಕಿತ್ಸೆ ನೀಡುವ ಅನಿವಾರ್ಯತೆ ಉಂಟಾಗಿದೆ. ಪಶುವೈದ್ಯ ಇಲಾಖೆಯ ಡಾ| ಬಿ. ಹನುಮಪ್ಪ ಮತ್ತು ಅವರ ಸಿಬ್ಬಂದಿ ಅಲ್ಲಿರುವ ಎಲ್ಲಾ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿದ್ದಾರೆ. ಯಾವುದೇ ತೊಂದರೆ ಎದುರಾದಲ್ಲಿ ಕೂಡಲೇ ತಾಲೂಕು ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದರು.

ಪಶು ವೈದ್ಯಾಧಿಕಾರಿ ಡಾ| ಹನುಮಪ್ಪ ಮಾತನಾಡಿ, ಕಿಲಾರಿಗಳು ದೇವರ ಎತ್ತುಗಳನ್ನು ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಅಲ್ಲಿರುವ ಕೆಲವು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದರೂ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಜಾನುವಾರುಗಳು ನಿತ್ರಾಣದ ಸ್ಥಿತಿಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿವೆ. ಮನವರಿಕೆ ಮಾಡಿದ ನಂತರ ಜಾನುವಾರುಗಳ ಚಿಕಿತ್ಸೆಗೆ ಕಿಲಾರಿಗಳು ಒಪ್ಪಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಎರಡು ಜಾನುವಾರುಗಳನ್ನು ರಕ್ಷಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮೇವು ಸರಬರಾಜು ವ್ಯವಸ್ಥಾಪಕ ವರುಣ್‌, ಸಿ.ಪಿ. ಮಹೇಶ್‌ಕುಮಾರ್‌, ಸಿದ್ದೇಶ್‌, ರಾಜಣ್ಣ, ತಿಪ್ಪೇಸ್ವಾಮಿ, ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next