Advertisement

ದೇವರ ಪಾದ ಸೇರಿದ ಎತ್ತು

01:11 PM May 05, 2019 | Naveen |

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೊಮ್ಮದೇವರಹಟ್ಟಿ ಬಳಿ ಇರುವ ದೇವರ ಹಟ್ಟಿಯಲ್ಲಿ ಮೇವು-ನೀರಿನ ಕೊರತೆಯಿಂದ ದೇವರ ಎತ್ತೊಂದು ಮೃತಪಟ್ಟಿದೆ.

Advertisement

ದೇವರ ಹೆಸರಿನಲ್ಲಿ ಸುಮಾರು 400ಕ್ಕೂ ಹೆಚ್ಚು ಜಾನುವಾರುಗಳಿದ್ದು, ಮ್ಯಾಸಬೇಡ ಸಮುದಾಯ ಕಿಲಾರಿಗಳು ಈ ಜಾನುವಾರುಗಳ ಪೋಷಣೆ ಜವಾಬ್ದಾರಿ ಹೊತ್ತಿದ್ದಾರೆ. ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದರೂ ಸಹ ಶುಕ್ರವಾರ ರಾತ್ರಿ ಒಂದು ಎತ್ತು ನಿತ್ರಾಣದಿಂದ ಸಾವನ್ನಪ್ಪಿದೆ. ಎರಡು ಹಸುಗಳು ಜೀವ ಉಳಿಸಿಕೊಳ್ಳಲು ಚಡಪಡಿಸುವ ದೃಶ್ಯ ಮನ ಕಲಕುವಂತಿತ್ತು.

ಕಿಲಾರಿ ಜೋಗಯ್ಯ, ಪಾಲಯ್ಯ, ದೊಡ್ಡಪಾಲಯ್ಯ ಮತ್ತಿತರರು ಈ ಬಗ್ಗೆ ಮಾಹಿತಿ ನೀಡಿದರು. ಎರಡು ತಿಂಗಳುಗಳಿಂದ ಇಲ್ಲಿನ ಜಾನುವಾರುಗಳ ದುಸ್ಥಿತಿ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಒಂದು ಎತ್ತು ಮೃತಪಟ್ಟಿದ್ದು, ಇನ್ನೆರಡು ಅಪಾಯದ ಅಂಚಿನಲ್ಲಿವೆ. ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದಲ್ಲಿ ಈ ದುರ್ಘ‌ಟನೆ ಸಂಭವಿಸುತ್ತಿರಲಿಲ್ಲ. ದಯಮಾಡಿ ಜಿಲ್ಲಾಡಳಿತ ಜಾನುವಾರುಗಳ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜಾನುವಾರುಗಳನ್ನು ಸಂರಕ್ಷಿಸಲು ಮುಂದಾಗಬೇಕು ಹಾಗೂ ಇಲ್ಲಿರುವ ಎಲ್ಲಾ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ನೀಡಬೇಕೆಂದು ಇಲ್ಲಿನ ಕಿಲಾರಿ ಸಮುದಾಯ ಹಾಗೂ ಹಲವಾರು ಗೋರಕ್ಷಕರು ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೆ ಜಿಲ್ಲಾಡಳಿತ ಮಾತ್ರ ಸೂಕ್ತ ನಿರ್ಧಾರ ಕೈಗೊಳ್ಳಲಿಲ್ಲ.

ಪತ್ರಿಕಾ ವರದಿ ಆಧರಿಸಿ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿಯವರು, ಇನ್ಫೋಸಿಸ್‌ ಸಹಕಾರದೊಂದಿಗೆ ಮೇವು ವಿತರಣೆ ಮಾಡುತ್ತಿದ್ದಾರೆ.

Advertisement

ಶುಕ್ರವಾರ ಸಂಜೆ ಒಂದು ಎತ್ತು ಸಂಪೂರ್ಣ ನಿತ್ರಾಣಗೊಂಡು ಮಲಗಿದ ಜಾಗದಲ್ಲೇ ಪ್ರಾಣ ಬಿಟ್ಟಿದೆ. ಇನ್ನೆರಡು ಹಸುಗಳು ಜೀವನ್ಮರಣ ಹೋರಾಟ ನಡೆಸುತ್ತಿದ್ದನ್ನು ಕಂಡ ಕಿಲಾರಿಗಳು ಕೂಡಲೇ ಗ್ರಾಮದ ಮುಖ್ಯಸ್ಥರಿಗೆ ವಿಷಯ ತಿಳಿಸಿದರು. ತಹಶೀಲ್ದಾರ್‌ಗೂ ಮಾಹಿತಿ ನೀಡಲಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರು ಜಾನುವಾರುಗಳ ದುಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್‌ ಆಗಮಿಸಿದರು. ಜಾನುವಾರುಗಳಿಗೆ ಸೂಕ್ತ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌, ಪಶುವೈದ್ಯಾಧಿಕಾರಿಗಳಾದ ಡಾ| ಬಿ. ಹನುಮಪ್ಪ, ಡಾ| ರಘುವರ್ಮ ಅವರಿಗೆ ಸೂಚನೆ ನೀಡಿದರು.

ಯಾವುದೇ ಕಾರಣಕ್ಕೂ ಇಲ್ಲಿನ ಜಾನುವಾರುಗಳು ಪ್ರಾಣ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಲು ತಿಳಿಸಿದರು. ಸೂಕ್ತ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದರು. ಕೂಡಲೇ ಪಶುವೈದ್ಯರು ಎಲ್ಲಾ ರಾಸುಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದರು.

ಈಗಾಗಲೇ ಒಂದು ಹಸು ಮಾತ್ರ ಮೃತಪಟ್ಟಿದ್ದು, ನಿತ್ರಾಣದಲ್ಲಿರುವ ಹಸುಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಎಲ್ಲಾ ಜಾನುವಾರುಗಳನ್ನು ಪರೀಕ್ಷಿಸಿ ಅವಶ್ಯವಿರುವ ಎಲ್ಲಾ ರೀತಿಯ ಪೌಷ್ಟಿಕಾಂಶದ ಆಹಾರ ನೀಡುವಂತೆ ಉಪವಿಭಾಗಾಕಾರಿ ವಿಜಯಕುಮಾರ್‌ ಸೂಚನೆ ನೀಡಿದರು.ಈ ಭಾಗದಲ್ಲಿ ತಾತ್ಕಾಲಿಕ ಗೋಶಾಲೆಯನ್ನು ತುರ್ತಾಗಿ ತೆರೆಯಬೇಕಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿ ಒಂದೆರಡು ದಿನಗಳಲ್ಲಿ ಇಲ್ಲಿಯೇ ತಾತ್ಕಾಲಿಕ ಗೋಶಾಲೆ ಪ್ರಾರಂಭಿಸುವಂತೆ ತಿಳಿಸಿದರು.

ಪೌಷ್ಟಿಕಾಂಶ ಕೊರತೆ ಸಾವಿಗೆ ಕಾರಣ
ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಾನುವಾರುಗಳು ಗುಡ್ಡದಲ್ಲಿ ಮೇವಿಗಾಗಿ ಅಲೆದಾಡುವುದರಿಂದ ನಿತ್ರಾಣಗೊಂಡು ಸಾವಿಗೀಡಾಗಿವೆ. ಪೌಷ್ಟಿಕಾಕಾಂಶದ ಆಹಾರ ಕೊರತೆಯೂ ಸಹ ಸಾವಿಗೆ ಕಾರಣ. ಪ್ರಸ್ತುತ ಎರಡು ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಿದ್ದು, ಒಂದು ವಾರದಲ್ಲಿ ಎರಡೂ ಜಾನುವಾರುಗಳು ಚೇತರಿಕೆ ಕಾಣಲಿವೆ. ಇಲ್ಲಿರುವ ಎಲ್ಲಾ ಹಸುಗಳ ಪರೀಕ್ಷೆಯನ್ನು ನಡೆಸಿದ್ದು ಹೆಚ್ಚಿನ ಅಪಾಯವಿಲ್ಲ. ಸ್ಥಳದಲ್ಲೇ ಬೀಡು ಬಿಟ್ಟು ಅವುಗಳ ಚಿಕಿತ್ಸೆ ನೋಡಿಕೊಳ್ಳಲಾಗುವುದು ಎಂದು ಪಶುವೈದ್ಯಾಧಿಕಾರಿಗಳಾದ ಡಾ| ಬಿ. ಹನುಮಪ್ಪ, ಡಾ| ರಘುವರ್ಮ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next