ಚಳ್ಳಕೆರೆ: ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶ ಶಿಕ್ಷಣ ಇಲಾಖೆಗೆ ಇದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಜಾಗ್ರತೆ ವಹಿಸಬೇಕಿದ್ದು, ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಲು ಸಾಧ್ಯ ಎಂದು ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ ಹೇಳಿದರು.
ಇಲ್ಲಿನ ಕಸ್ತೂರಿಬಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಗು ಶಿಕ್ಷಣವನ್ನು ಕಲಿಯಬೇಕಾದಲ್ಲಿ ಪ್ರಾರಂಭದ ಹಂತದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶಾಲೆಯಲ್ಲಿ ಶಿಕ್ಷಕರು ನೀಡುವ ಶಿಕ್ಷಣದ ಬಗ್ಗೆ ಮನೆಯಲ್ಲಿ ತಾಯಂದಿರು ಗಮನ ಹರಿಸಬೇಕಾಗುತ್ತದೆ. ಶಿಕ್ಷಣದಿಂದಷ್ಟೇ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಶಿಕ್ಷಕರಷ್ಟೇ ಗಮನವನ್ನು ಪೋಷಕರು ನೀಡಬೇಕಿದೆ. ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದರು.
ಮಹಿಳಾ ವೈದ್ಯಾಧಿಕಾರಿ ಡಾ| ಎನ್. ಗೀತಾ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿದ್ದರೆ ಮಕ್ಕಳು ಉತ್ಸಾಹದಿಂದ ಕಲಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಕರಿಗಷ್ಟೇ ಗೌರವ, ಬೆಲೆ ನೀಡದೆ ತಮ್ಮ ಪೋಷಕರಿಗೂ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚೆಚ್ಚು ಅಂಕ ಪಡೆಯಬೇಕೆಂಬ ಹಂಬಲ ಪೋಷಕರಲ್ಲಿ ಉಂಟಾಗಿದೆ. ನಿಮ್ಮ ಕನಸು ಈಡೇರಬೇಕಾದಲ್ಲಿ ಮಗುವಿನ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸಂಬಂಧಪಟ್ಟ ಶಿಕ್ಷಕರೊಂದಿಗೆ ಚರ್ಚಿಸಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ನೀಡಬೇಕು. ವಿದ್ಯಾರ್ಥಿಗಳು ಕೂಡ ತಮ್ಮ ಪೋಷಕರ ಬಗ್ಗೆ ಸದಾ ಅಭಿಮಾನ ಹೊಂದಿರಬೇಕು. ಯಾವುದೇ ಸಂದರ್ಭದಲ್ಲಿ ಉದಾಸೀನತೆ ಮಾಡ ಕಲಿಕೆಯ ಅವಧಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾಯಂದಿರ ಮೇಳದ ಹಿನ್ನೆಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದ ತಾಯಂದಿರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿರಾದ ರಾಣಿ, ವಿಜಯಲಕ್ಷ್ಮೀ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಆರ್‌ಸಿ ಮಂಜಣ್ಣ, ಶಿಕ್ಷಣ ಇಲಾಖೆಯ ಶ್ರೀಧರ್, ಸವಿತಾ, ಕೆ. ಗಂಗಾಧರ ನಾಯ್ಕ, ಡಿ.ಕೆ. ಲೀಲಾವತಿ, ಒ. ನೇತ್ರಾವತಿ, ಎಸ್.ಒ. ಪುಟ್ಟರಂಗಮ್ಮ, ಎನ್. ಮಮತಾ, ಎನ್. ಲತಾಶ್ರೀ, ಮಲ್ಲಮ್ಮ ಮತ್ತಿತರರು ಭಾಗವಹಿಸಿದ್ದರು.