Advertisement
ನಗರಸಭೆ ಆಡಳಿತ ಸುಸ್ಥಿತಿಯಲ್ಲಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ಕಚೇರಿಗೆ ಬರುವ ನಾಗರಿಕರ ಕೆಲಸ ಕಾರ್ಯ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ನಗರಸಭಾ ಸದಸ್ಯರು ಸಾರ್ವಜನಿಕರು ಆರೋಪಿಸಿದರು.
ಶಿವಕುಮಾರ್, ಕೆ. ವೀರಭದ್ರಪ್ಪ, ಕೆ.ಸಿ. ನಾಗರಾಜ, ವಿ.ವೈ. ಪ್ರಮೋದ್, ಹೊಯ್ಸಳ ಗೋವಿಂದ, ಸಿ. ಶ್ರೀನಿವಾಸ್, ಚಳ್ಳಕೆರೆಯಪ್ಪ, ಪ್ರಶಾಂತ್‌ಕುಮಾರ್ ಮತ್ತಿತರರು ಮಾತನಾಡಿ, ಚಳ್ಳಕೆರೆ ನಗರದ ನೈರ್ಮಲ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ನಗರದ ತುಂಬೆಲ್ಲ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಖಾಲಿ ನಿವೇಶನಗಳೂ ಸೇರಿದಂತೆ ಎಲ್ಲಾ ರಸ್ತೆಯಲ್ಲೂ ಗಿಡ ಗಂಟಿ ಬೆಳೆದಿವೆ. ಸ್ವಚ್ಚತಾ ಕಾರ್ಯ ಚುರುಕಿನಿಂದ ನಡೆಯುತ್ತಿಲ್ಲವೆಂದು ಆರೋಪಿಸಿದರು.
Related Articles
Advertisement
ನಗರದ ಸುಮಾರು 50 ಜನ ಖಾಲಿ ನಿವೇಶನದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಕಂದಾಯಾಧಿ ಕಾರಿ ತಿಳಿಸಿದರು. ನಗರದ ವಿವಿಧೆಡೆಗಳಲ್ಲಿ ನಗರಸಭೆ ನಿರ್ಮಿಸಿರುವ ಶೌಚಾಲಯಗಳನ್ನು ಸಾರ್ವಜನಿಕರು ಬಳಸುತ್ತಿಲ್ಲ. ವಿವಿಧ ವಾರ್ಡ್‌ಗಳಲ್ಲಿರುವ ಬಹುತೇಕ ಶೌಚಾಲಯಗಳು ನಿರುಪಯುಕ್ತವಾಗಿವೆ ಎಂದು ನಗರಸಭೆ ಸದಸ್ಯೆಯರಾದ ಸಾಕಮ್ಮ, ಸುಮಾ ಭರಮಣ್ಣ, ಎಂ. ನಾಗವೇಣಿ, ಕವಿತಾ ಬೋರಯ್ಯ, ಕವಿತಾ ವೀರೇಶ್, ತಿಪ್ಪಕ್ಕ, ಆರ್. ಮಂಜುಳಾ, ನಿರ್ಮಲಾ, ಜಯಲಕ್ಷ್ಮೀ ಸುಮಾ ಆಂಜನೇಯ, ಜೈತುಂಬಿ, ಪಾಲಮ್ಮ, ಸುಜಾತ ಪಾಲಯ್ಯ ಶಾಸಕರ ಗಮನಕ್ಕೆ ತಂದರು.
ಎಇಇ ಜೆ. ಶ್ಯಾಮಲಾ, ವಿನಯ್, ಸಹಾಯಕ ಇಂಜಿನಿಯರ್ ಲೋಕೇಶ್ ಈ ಬಗ್ಗೆ ಮಾಹಿತಿ ನೀಡಿದರು. ನಗರ ವ್ಯಾಪ್ತಿಯಲ್ಲಿ 3693 ಶೌಚಾಲಯ ನಿರ್ಮಿಸಲು ಸರ್ಕಾರ ಆದೇಶ ನೀಡಿದೆ. ಈ ಪೈಕಿ 3593 ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇನ್ನೂ 100 ಬಾಕಿ ಇದ್ದು, ಹೆಚ್ಚುವರಿಯಾಗಿ 275 ಅರ್ಜಿಗಳ ಬಂದಿವೆ. ಪ್ರತಿ ಶೌಚಾಲಯಕ್ಕೆ ಸರ್ಕಾರ 15 ಸಾವಿರ ರೂ.ನೀಡಲಿದೆ. 14 ಸಾರ್ವಜನಿಕ ಶೌಚಾಲ ಯಗಳ ದುರಸ್ತಿ ಮಾಡಲಾಗುವುದು ಎಂದರು.
ನಗರಸಭಾ ಸದಸ್ಯೆ ಆರ್. ಮಂಜುಳಾ ಮಾತನಾಡಿ, ತಾವು ಪ್ರತಿನಿಧಿ ಸುವ 24ನೇ ವಾರ್ಡ್ ವ್ಯಾಪ್ತಿಯಲ್ಲಿ 5 ಮದ್ಯದ ಅಂಗಡಿಗಳಿವೆ. ಪ್ರತಿ ಅಂಗಡಿಯ ಪಕ್ಕದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿ ಕುಡಿಯಲು ಮದ್ಯ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ದೇವಸ್ಥಾನ, ಶಾಲೆ, ಬ್ಯಾಂಕ್‌ಗಳಿದ್ದು, ಪ್ರತಿನಿತ್ಯ ಜನರು ಕಿರುಕುಳ ಅನುಭವಿಸುತ್ತಿದ್ದಾರೆಂದು ಆರೋಪಿಸಿದರು. ಕೂಡಲೇ ಶಾಸಕರು ಪಿಎಸ್‌ಐ ನೂರ್ ಅಹಮ್ಮದ್ ಅವರನ್ನು ಕರೆಸಿ ತಾತ್ಕಾಲಿಕ ಶೆಡ್‌ಗಳನ್ನು ತೆರವಿಗೆ ಸೂಚಿಸಿದರು.
ನಗರಸಭೆಯಿಂದ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಲು ಮುಕ್ತಿ ವಾಹನ, ಆಧುನಿಕ ಜೆಸಿಬಿ ಮತ್ತು ಸ್ವಚ್ಛತೆಗೆ ಸಕ್ಕಿಂಗ್ ಮಿಷನ್ ಅವಶ್ಯಕತೆ ಇದೆ ಎನ್ನುವ ಮನವಿ ಮುಂದಿಡಲಾಯಿತು. ಇದಕ್ಕೆ ಸ್ಪಂದಿಸಿದ ಶಾಸಕರು ತಮ್ಮ ಅನುದಾನದಲ್ಲಿ ಮುಕ್ತಿ ವಾಹನವನ್ನು ನೀಡುವ ಭರವಸೆ ನೀಡಿದರು. ಜೆಸಿಬಿ ಮತ್ತು ಸಕ್ಕಿಂಗ್ ಮಿಷನ್ ಖರೀದಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ್, ಇಂಜಿನಿಯರ್ ಸ್ವಾಮಿ, ಇಇ ಕಾಳಪ್ಪ, ಸಮಾಜ ಕಲ್ಯಾಣಾಧಿಕಾರಿ ಜೆ.ಆರ್. ಮಂಜಪ್ಪ, ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ಮಾಲತಿ, ಸ್ಲಂ ಬೋರ್ಡ್ ಸಹಾಯಕ ಇಂಜಿನಿಯರ್ ಪಾಟೀಲ್, ಹೌಸಿಂಗ್ ಬೋರ್ಡ್ ಇಂಜಿನಿಯರ್ ಅಣ್ಣಪ್ಪ, ಉಪ ನೋಂದಣಾಧಿಕಾರಿ ತಿಪ್ಪೇರುದ್ರಪ್ಪ, ಎಚ್.ಎಸ್. ಸೈಯ್ಯದ್ ಭಾಗವಹಿಸಿದ್ದರು.