ಚಳ್ಳಕೆರೆ: ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕಷ್ಟಗಳ ನಡುವೆಯೂ ಉದಾರವಾಗಿ ದಾನ ನೀಡಿದ ಚಳ್ಳಕೆರೆ ತಾಲೂಕಿನ ಸಮಸ್ತ ಜನರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಟಿ. ರಘುಮೂರ್ತಿ ಹೇಳಿದರು.
ಇಲ್ಲಿನ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದ ಹಂತದಲ್ಲಿ ನಗರದ ಎಲ್ಲಾ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕವಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪಕ್ಷ ಭೇದ ಮರೆತು ನೆರೆಪೀಡಿತ ಪ್ರದೇಶದ ಜನರಿಗೆ ಹಣ ಹಾಗೂ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ. ನೆರೆಪೀಡಿತ ಜನರಿಗೆ ನೆರವಾಗುವ ನಿಟ್ಟಿನಲ್ಲಿ ನನ್ನೊಂದಿಗೆ ಕಳೆದ ಒಂದು ವಾರದಿಂದ ಹಗಲಿರುಳು ಸಹಕಾರ ನೀಡಿದ ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿ ವರ್ಗದ ಸಹಕಾರವನ್ನು ಮರೆಯುವಂತಿಲ್ಲ. ಅಂದಾಜು 45 ಲಕ್ಷ ರೂ. ನಗದು, 30 ಲಕ್ಷ ರೂ. ಮೌಲ್ಯದ ಆಹಾರ ಹಾಗೂ ಇತರೆ ವಸ್ತುಗಳು ಸೇರಿದಂತೆ ಒಟ್ಟು 75 ಲಕ್ಷ ರೂ. ಮೌಲ್ಯದ ವಸ್ತು ಹಾಗೂ ನಗದನ್ನು ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಿಗೆ ತಲುಪಿಸಲಾಗುವುದು ಎಂದರು.
ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳು ನಿರಂತರ ಬರಕ್ಕೆ ತುತ್ತಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಆದರೆ ನೆರೆ ಸಂತ್ರಸ್ತರಿಗೆ ನೆರವಾಗಲು ಪ್ರತಿಯೊಬ್ಬರೂ ತಮ್ಮದೇಯಾದ ಕಾಣಿಕೆ ನೀಡಿದ್ದಾರೆ. ಈಗಾಗಲೇ ನಮ್ಮ ಸಿಬ್ಬಂದಿ ವರ್ಗ ಸಾರ್ವಜನಿಕರಿಂದ ದಾನದ ರೂಪದಲ್ಲಿ ಬಂದ ವಿವಿಧ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದಾರೆ. ಒಟ್ಟು 3311 ಚೀಲ ಅಕ್ಕಿ, 3 ಸಾವಿರ ಬೆಡ್‌ಶೀಟ್, 2 ಸಾವಿರ ನೀರಿನ ಬಾಟಲ್, 568 ಬಿಸ್ಕಿಟ್ ಪ್ಯಾಕೆಟ್, ಒಂದು ಸಾವಿರ ಸೀರೆ, ಲುಂಗಿ, ಟವೆಲ್, ಪ್ಲಾಸ್ಟಿಕ್ ಚಾಪೆ, ಪೇಪರ್ ಪ್ಲೇಟ್, 2470 ಸ್ಟೀಲ್ ಲೋಟ, 1185 ಸ್ಟೀಲ್ ತಟ್ಟೆ, 500 ಪ್ಯಾಂಟ್, 260 ಸ್ಟೀಲ್ ಪಾತ್ರೆ, 875 ಚಿಕ್ಕ ಮಕ್ಕಳ ಬಟ್ಟೆ ಮತ್ತಿತರ ವಸ್ತುಗಳನ್ನು ಪ್ಯಾಕ್ ಮಾಡಿ ಲಾರಿಗಳಿಗೆ ತುಂಬಲಾಗಿದೆ. ನಗದು ಹಣವನ್ನು ಸಹ ತೆಗೆದುಕೊಂಡು ಹೋಗಿ ಅಲ್ಲಿನ ಜನರ ಅವಶ್ಯಕತೆಗೆ ತಕ್ಕಂತೆ ವೆಚ್ಚ ಮಾಡಲಾಗುವುದು. ಈಗಾಗಲೇ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇಲ್ಲಿಂದ ಸುಮಾರು 100 ಸದಸ್ಯರ ತಂಡ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದರು.
ಹಿರಿಯ ಮುಖಂಡ ಟಿ. ಪ್ರಭುದೇವ್, ಸಮಾಜಸೇವಕ ಎಚ್.ಎಸ್. ಸೈಯ್ಯದ್, ತಾಪಂ ಸದಸ್ಯ ಎಚ್. ಆಂಜನೇಯ, ವೀರೇಶ್, ನಗರಸಭಾ ಸದಸ್ಯ ಟಿ. ಮಲ್ಲಿಕಾರ್ಜುನ, ಎಂ.ಜೆ. ರಾಘವೇಂದ್ರ, ಕೆ. ವೀರಭದ್ರಪ್ಪ, ಬಿ.ಟಿ. ರಮೇಶ್ ಗೌಡ, ವೈ. ಪ್ರಕಾಶ್, ಮುಖಂಡರಾದ ಕೃಷ್ಣ, ಶೇಖರಪ್ಪ, ಡಾ| ಮಂಜುನಾಥ, ಆರ್. ಪ್ರಸನ್ನಕುಮಾರ್, ಬಡಗಿ ಪಾಪಣ್ಣ, ಶಿವಕುಮಾರಸ್ವಾಮಿ, ಅತಿಕುರ್ ರೆಹಮಾನ್, ಸೈಫುಲ್ಲಾ ಇತರರು ಇದ್ದರು.