ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಿಯಾಗುತ್ತಿರುವವರನ್ನೆಲ್ಲ ರಾಜಕೀಯವಾಗಿ ಕತ್ತು ಹಿಸುಕಿ ಮುಗಿಸುತ್ತಿದ್ದಾರೆ. ಅವರಷ್ಟು ದಲಿತ ವಿರೋಧಿ ಬೇರೆ ಯಾರೂ ಇಲ್ಲ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲು ನೋಟಕ್ಕೆ ಬಸಪ್ಪ ಆದರೆ ಒಳಗೆ ವಿಷಪ್ಪ. ಅವರು ಒಂದು ರೀತಿ ಗೋಮುಖ ವ್ಯಾಘ್ರ. ಕಳೆದ ಬಾರಿ ಕಾಂಗ್ರೆಸ್ ದಲಿತರನ್ನು ಮುಖ್ಯಮಂತ್ರಿ ಮಾಡಬೇಕಾಗಿತ್ತು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಕಾಂಕ್ಷಿ ಯಾಗಿದ್ದವರನ್ನೆಲ್ಲಾ ರಾಜಕೀಯವಾಗಿ ಮುಗಿಸಿದರು. ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿ ಆದರು. ಆ ಮೂಲಕ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಿದರು ಎಂದು ದೂರಿದರು.
ಸಿದ್ದರಾಮಯ್ಯ ಲೀಡರ್ ಅಲ್ಲ: ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್‌ನಲ್ಲಿ ತಾನೊಬ್ಬನೇ ನಾಯಕರಾಗಿ ಬೆಳೆದರು. ಹತ್ತು ಜನ ಗೆಲ್ಲಿಸಿಕೊಂಡು ಬರುವವನು ನಿಜವಾದ ನಾಯಕ. ಆದರೆ ಸಿದ್ದ ರಾಮಯ್ಯ ಎಲ್ಲರನ್ನೂ ತುಳಿದುಕೊಂಡು ಬರುತ್ತಿದ್ದಾರೆ. ಹಾಗಾಗಿ ಅವರು ನಿಜವಾದ ನಾಯಕರಲ್ಲ, ಚಾಮುಂಡೇಶ್ವರಿ ಯಲ್ಲಿ ಅವರ ಸ್ಥಿತಿ ಏನಾಯಿತು. ಈಗ ಬಾದಾಮಿಯಲ್ಲಿ ಏನು ಪರಿಸ್ಥಿತಿ ಇದೆ. ಹೀಗಾಗಿ ಗೆಲ್ಲಲು ಯಾವುದೇ ಕ್ಷೇತ್ರವಿಲ್ಲದೆ, ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದಾರೆ. ಇವರೊಬ್ಬ ಲೀಡರ್ ರಾ, ಬೊಗಳೆ ಭಾಷಣ ಮಾಡುವವರು ಲೀಡರ್ ಅಲ್ಲ ಎಂದು ಹರಿಹಾಯ್ದರು.
ದಲಿತ ಸಿಎಂ ಬಿಜೆಪಿಯಿಂದ ಸಾಧ್ಯ: ಕಾಂಗ್ರೆಸ್ ಪಕ್ಷ ಕಳೆದ 7 ದಶಕಗಳಿಂದ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಬಂದಿದೆ. ಅಧಿಕಾರ ಹಂಚಿಕೆ ವಿಚಾರ ಬಂದಾಗ ದಲಿತರನ್ನು ಕಡೆಗಣಿಸುತ್ತಾ ಬಂದಿದೆ. ಕಾಂಗ್ರೆಸ್‌ನಲ್ಲಿರುವ ದಲಿತ ಮುಖಂಡರನ್ನು ಸಿದ್ದು ಮೂಲೆ ಗುಂಪು ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಸಾಧ್ಯವಿಲ್ಲ, ಅದೇನಿದ್ದರೂ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಮೂರನೇ ಸ್ಥಾನ ಗೆಲ್ಲುವ ಸ್ಪಷ್ಟವಾದ ಅವಕಾಶವಿರುವುದು ಬಿಜೆಪಿಗೆ ಮಾತ್ರ. ಹೀಗಿದ್ದರೂ ಕಾಂಗ್ರೆಸ್ ಏನಾದರೂ ವ್ಯತ್ಯಾಸ ಮಾಡಲು ಪ್ರಯತ್ನ ನಡೆಸಿದರೆ ಸಿಗುವ ಒಂದು ಸ್ಥಾನವನ್ನೂ ಕೊಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಚಡ್ಡಿ ರಾಜಕಾರಣ ತಾರಕಕ್ಕೇರಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಡ್ಡಿ ಸುಡುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರ ಚಡ್ಡಿಯನ್ನು ಸುಟ್ಟು ಕಳುಹಿಸಿದ್ದಾರೆ. ಮತ್ತೆ ನಿಮ್ಮ ಚಡ್ಡಿಯನ್ನು ನೀವೇ ಸುಟ್ಟುಕೊಂಡರೆ ಇದಕ್ಕಿಂತ ವಿಪರ್ಯಾಸ ಮತ್ತೂಂದಿಲ್ಲ. ಚಡ್ಡಿ ಸುಡುವ ಆಂದೋಲನ ಮಾಡುವುದಾಗಿ ಹೇಳಿದ್ದೀರಿ. ಇದನ್ನು ನಾನು ಕೂಡ ಬೆಂಬಲಿಸುತ್ತೇನೆ. ಈ ಸಂಬಂಧ ಬಿಜೆಪಿಯ ಎಸ್‌ಸಿ ಮೋರ್ಚಾ ಅಧ್ಯಕ್ಷರುಗಳಿಗೂ ಕರೆ ನೀಡುತ್ತೇನೆ. ಎಲ್ಲರ ಚಡ್ಡಿಗಳನ್ನು ಸಿದ್ದರಾಮಯಯ್ಯಗೆ ಕಳುಹಿಸಿ ಕೊಡಲು ಕರೆ ನೀಡುತ್ತೇನೆ. ಆದರೆ, ಅದಕ್ಕೂ ಮೊದಲು ಸಿದ್ದರಾಮಯ್ಯ ಪರಿಸರ ನಿಯಂತ್ರಣ ಮಂಡಳಿಯಲ್ಲಿ ಚಡ್ಡಿ ಸುಡಲು ಅನುಮತಿ ಪಡೆಯಲಿ ಎಂದು ಲೇವಡಿ ಮಾಡಿದರು. ಚಡ್ಡಿಯನ್ನು ಕಾಂಗ್ರೆಸ್ ನವರು ಧರಿಸಿದ್ದರು. ಈ ಹಿಂದೆ ಪೊಲೀಸ್, ಸೈನಿಕರು ಸೇರಿದಂತೆ ಎಲ್ಲರು ಧರಿಸುತ್ತಿದ್ದರು. ಈಗಲೂ ಯುವ ಸಮೂಹ ಚಡ್ಡಿಯನ್ನು ಧರಿಸುತ್ತಿದೆ. ಮನುಷ್ಯರ ಮಾನವನ್ನು ಕಾಪಾಡುತ್ತಿದೆ. ಅದು ಮಾನವರ ಗೌರವದ ಸಂಕೇತ ವಾಗಿದೆ. ಅಂತಹ ಚಡ್ಡಿಯನ್ನು ಕಾಂಗ್ರೆಸ್‌ನವರು ಸುಟ್ಟಿದ್ದಾರೆ. ಆ ಮೂಲಕ ಮಾನವರ ಮರ್ಯಾದೆ, ಗೌರವ ಗಳನ್ನು ಸುಟ್ಟಿದ್ದಾರೆ ಎಂದು ಟೀಕಿಸಿದರು.