ಕಲಬುರಗಿ: ಚಡ್ಡಿ ಎಂದು ಕ್ಷುಲ್ಲಕವಾಗಿ ಮಾತನಾಡುವವರು ಒಂದು ತಿಳಿಯಬೇಕು, ‘ಚಡ್ಡಿ’ಎಲ್ಲರ ಮಾನ ಕಾಯುತ್ತದೆ. ಚಡ್ಡಿ ಇಲ್ಲದ ಜೀವನ ಸಾಗಿಸಲಿ ಎಂದು ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಡ್ಡಿ ಎನ್ನುವು ಕೇವಲ ಒಂದು ಸಂಘ, ಸಂಸ್ಥೆ ಅಷ್ಟೇ ಅಲ್ಲ, ಅದು ಮಾನ ಕಾಪಾಡುವ ವಸ್ತ್ರವೂ ಹೌದು ಎನ್ನುವುದು ಮರೆಯಬಾರದು ಎಂದು ಕಿವಿಮಾತು ಹೇಳಿದ ಅವರು, ಅಂಬೇಡ್ಕರ್ ಸ್ಥಾಪಿಸಿದ್ದ ಸಮತಾದಳದ್ದು ಸಹ ಚಡ್ಡಿಯೇ ಇತ್ತಲ್ಲ. ನೆಹರೂ, ಜಾಫರ್ ಶರೀಫ್ ಚಡ್ಡಿ ಹಾಕಿರಲಿಲ್ಲವೇ? ಆವಾಗ ನಿಮಗೆ ತೊಂದರೆ ಅನ್ನಿಸಲಿಲ್ಲ. ಈಗ ಆರ್ ಎಸ್ ಎಸ್ ಚಡ್ಡಿ ಬಳಸುತ್ತಿದ್ದರೆ ನಿಮಗೇನು ತೊಂದರೆ. ನಿಜ ಅರ್ಥದಲ್ಲಿ ನಿಮಗೆ ಸಂಘ ಪರಿವಾರದ ಚಡ್ಡಿ ಕುರಿತು ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಸಿಟ್ಟು ಹೊರ ಹಾಕಿದರು.
ನಿಮ್ಮಿಂದ ಸಿಎಂ ಸ್ಥಾನ ಕೈ ತಪ್ಪಿತು!: ಪ್ರಿಯಾಂಕ್ ಅವರೇ ನಿಮ್ಮ ಮಂತ್ರಿಗಿರಿಯ ಆಸೆಗಾಗಿ ಈ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿಕೊಂಡಂತಾಗಿದೆ ಎಂದು ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುವುದನ್ನು ಖುದ್ದು ಪ್ರಿಯಾಂಕ್ ತಪ್ಪಿಸಿದ್ದಾರೆ. ಅದಕ್ಕೆ ಅವರ ಕುರ್ಚಿಯ ಆಸೆಯೇ ಕಾರಣ ಎಂದು ಕಾಲೇಳೆದರು.
ಇದೇ ವೇಳೆ ನಾನೇನು ಚಡ್ಡಿಯನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪೋಟೋಗ್ರಾಫರ್ ಕೇಳಿದರೂ ಎನ್ನುವ ಕಾರಣಕ್ಕೆ ನಾನು ಚಡ್ಡಿ ಮೇಲಕ್ಕೆ ಎತ್ತಿದ್ದೆ ಎಂದು ಸಮರ್ಥಿಸಿಕೊಂಡ ನಾರಾಯಣಸ್ವಾಮಿ, ಪ್ರಿಯಾಂಕ್ ಈಚೆಗೆ ಸಂಘ ಪರಿವಾರದ ಕುರಿತು ಮಾತನಾಡುವುದು ಅತಿಯಾಗಿದ್ದು, ಚಡ್ಡಿಯ ಕುರಿತು ಹಗುರು ಮಾತನಾಡಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಛೇಡಿಸಿದರು.
ಸಿದ್ದು ರಾಜಕೀಯ ದಲ್ಲಾಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುತ್ಸದ್ದಿಯಲ್ಲ. ಅವರೊಬ್ಬ ಅವಕಾಶವಾದಿ ರಾಜಕೀಯ ದಲ್ಲಾಳಿ. ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯ ಶನಿ ಎಂದು ತಪ್ಪಾಗಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ, ಶ್ರೀನಿವಾಸ ಪ್ರಸಾದ್, ಆಂಜನೇಯ, ದ್ರುವನಾರಾಯಣ ಅವರನ್ನೆಲ್ಲಾ ಮೂಲೆಗುಂಪು ಮಾಡಿದ್ದೆ ಸಿದ್ದರಾಮಯ್ಯ. ಕಾಂಗ್ರೆಸ್ ಮುಗಿಸಲು ಬಂದು ಕುಂತಿದ್ದಾರೆ. ಪ್ರಧಾನಿ ಮೋದಿ ಕುರಿತು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ತಂದೆ ಹೆಸರಲ್ಲಿ ರಾಜಕಾರಣ ಬಿಡಿ: ಪ್ರಿಯಾಂಕ್ ತಂದೆಯ ಹೆಸರಲ್ಲಿ ರಾಜಕಾರಣ ಮಾಡುವುದು ಬಿಡಿ. ಅದರಿಂದ ನೀವು ಒಬ್ಬ ಒಳ್ಳೆಯ ರಾಜಕಾರಣಿಯನ್ನು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೀರಿ. ನಿಮಗಿನ್ನೂ ನಿಜವಾದ ದಲಿತ ಸಂವೇದನೆಯ ಪರಿಚಯ ಇಲ್ಲ. ದಲಿತ ಕೇರಿಗಳಿಗೆ ಹೋಗಿ ಉಂಡು ಬನ್ನಿ ಆಗ ನಿಮಗೆ ಸ್ವಾಭಿಮಾನ, ದಲಿತ ಸಂವೇದನೆ ಪರಿಚಯ ಆಗುತ್ತದೆ ಎಂದು ಟೀಕಿಸಿದರು.