ಚಳ್ಳಕೆರೆ: ಹಿರಿಯೂರು, ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 20 ಗುತ್ತಿಗೆದಾರರಿಗೆ ವೇದಾವತಿ ನದಿಪಾತ್ರದ ಮರಳನ್ನು ಸರ್ಕಾರದ ನಿಯಮಾನುಸಾರ ಹಳ್ಳದಿಂದ ಎತ್ತಿ ದಾಸ್ತಾನು ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಮಾರಾಟ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ತಾಲೂಕುಗಳ ವ್ಯಾಪ್ತಿಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಯಮ ಮೀರಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘಟನೆಯಾಗದಂತೆ ಎಲ್ಲರೂ ಜಾಗ್ರತೆ ವಹಿಸಬೇಕೆಂದರು. ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿ ಅನುಮತಿ ನೀಡಿದಂತೆ ಒಂದು ಮೀಟರ್ ವ್ಯಾಪ್ತಿಯ ಆಳದಲ್ಲಿ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಇದರ ಪರಿಶೀಲನೆಗಾಗಿ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳಲ್ಲದೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುತ್ತಾರೆ. ಇದುವರೆಗೂ ಇಂತಹ ಯಾವುದೇ ಘಟನೆ ನಡೆದಿಲ್ಲವಾದರೂ ಅಧಿಕಾರಿ ವರ್ಗ ಹೆಚ್ಚು ಜಾಗ್ರತೆ ವಹಿಸಬೇಕೆಂದರು.
ಹಿರಿಯೂರು 8, ಹೊಸದುರ್ಗ 6 ಮತ್ತು ಚಳ್ಳಕೆರೆ ತಾಲೂಕಿನ 6 ಕಡೆ ಸೇರಿದಂತೆ ಒಟ್ಟು 20 ಕಡೆ ಮರಳು ತೆಗೆದು ದಾಸ್ತಾನು ಮಾಡಿ ಮಾರಾಟ ಮಾಡಲು ಅವಕಾಶವಿದೆ. ನದಿಯಿಂದ ಮರಳು ಎತ್ತುವ ಸಮಯದಲ್ಲಿ ವಿವಿಧ ಇಲಾಖೆಯ ಅಧಿ ಕಾರಿಗಳೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳೂ ಸ್ಥಳದಲ್ಲಿತ್ತಾರೆ. ಅಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಪರಿಶೀಲನೆ ನಡೆಸಿದ ನಂತರವೇ ಮರಳು ತುಂಬಿದ ವಾಹನಗಳು ಹೊರಹೋಗುತ್ತವೆ. ಸರ್ಕಾರದ ನಿಯಮ ಪಾಲನೆಗೆ ಮೊದಲ ಆದ್ಯತೆ ನೀಡಬೇಕು. ಮರಳು ತೆಗೆಯುವ ಸಂದರ್ಭದಲ್ಲಿ ಹೆಚ್ಚು ಆಳ ತೋಡಿದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಹತ್ತಿರ ಗ್ರಾಮಗಳ ನೀರಿನ ಸಮಸ್ಯೆ ಉಂಟಾಗದಂತೆ ಕೊಳವೆಬಾವಿಗಳ ಆಸುಪಾಸು ಆಳವಾಗಿ ತೆಗೆಯುವುದು ಬೇಡವೆಂದು ತಾಕೀತು ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್‌ಗಳಾದ ಬಸವರಾಜ, ಎಂ. ಮಲ್ಲಿಕಾರ್ಜುನ್, ಸತ್ಯನಾರಾಯಣ, ಡಿವೈಎಸ್ಪಿ ರೋಷನ್ ಜಮೀರ್, ಹಿರಿಯೂರು ವೃತ್ತ ನಿರೀಕ್ಷಕ ಆರ್.ಜಿ. ಚನ್ನೇಗೌಡ, ಚಳ್ಳಕೆರೆ ವೃತ್ತ ನಿರೀಕ್ಷಕ ಈ.ಆನಂದ, ಪಿಎಸ್‌ಐ ನೂರ್ ಅಹಮ್ಮದ್, ಗುಡ್ಡಪ್ಪ, ಕಂದಾಯಾಧಿಕಾರಿ ಶಾಂತಪ್ಪ, ರಾಜೇಶ್, ವರುಣ್, ಪ್ರಾಣೇಶ್, ಗುತ್ತಿಗೆದಾರ ಬಸವರಾಜ ಮತ್ತಿತರರು ಭಾಗವಹಿಸಿದ್ದರು.