Advertisement
“ಶಾಪಿಂಗ್‌ಗೆ ಹೋಗ್ಬೇಕು. ಒಮ್ಮೆ ಕರೆದುಕೊಂಡು ಹೋಗಿ, ಸ್ಕೂಲ್‌ಗೆ ಲೇಟಾಯ್ತು, ಮಗಳನ್ನು ಬಸ್‌ಸ್ಟಾಪ್ ತನಕ ಬಿಟ್ಟು ಬನ್ನಿ, ಡ್ಯಾನ್ಸ್ ಕ್ಲಾಸಿಗೆ ಬಿಟ್ಟು ಬನ್ನಿ…’ ಹೆಂಡತಿಯ ಈ ರೀತಿಯ ಕೋರಿಕೆಗಳನ್ನು ಈಡೇರಿಸಲು ಗಂಡನಿಗೆ ಸಮಯಾಭಾವ. ತನ್ನ ಕೆಲಸಗಳನ್ನು ಬದಿಗಿಟ್ಟು ಹೆಂಡತಿ ಹೇಳಿದ ಕಡೆಗೆಲ್ಲ ಹೋಗಿ ಬರಲು ಆತನಿಗೆ ಇಷ್ಟವೂ ಇಲ್ಲ. ಅದರಲ್ಲೂ ಹೆಂಡತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗುವುದಿದೆಯಲ್ಲ, ಅದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ ಎಂಬ ಭಾವನೆ ಅವನಿಗೆ. ಅಗತ್ಯ ಕೆಲಸಗಳಿಗೆ ಹೊರಗೆ ಹೋಗಲು ಆಕೆ ತನ್ನನ್ನು ಅವಲಂಬಿಸದಿರಲಿ ಎಂದು ಲೆಕ್ಕ ಹಾಕಿಯೇ ಹೆಂಡತಿಗೊಂದು ಸ್ಕೂಟರ್ ಕೊಡಿಸುತ್ತಾನೆ. ಬೈಕಿನ ಹಿಂದೆ ಗಂಡನಿಗೆ ಅಂಟಿ ಕುಳಿತು ಜುಮ್ಮಂತ ಹೋಗುವ ಅವಕಾಶ ನಷ್ಟವಾಯಿತಲ್ಲ ಅಂತ ಮರುಗುತ್ತಲೇ, ಮನಸ್ಸಿಲ್ಲದ ಮನಸ್ಸಿಂದ ಆಕೆ ಸ್ಕೂಟರ್ ಕಲಿಯುತ್ತಾಳೆ. ಆದರೆ, ದಿನಗಳೆದಂತೆ ಸ್ಕೂಟರ್ ಅವಳ ಅಚ್ಚುಮೆಚ್ಚಿನ ಸಂಗಾತಿಯಾಗಿ ಬಿಡುತ್ತದೆ.
Related Articles
Advertisement
ಸ್ಕೂಟರ್ ಬಂದ ನಂತರ ನನಗೆ ಹೊಸ ರೆಕ್ಕೆಗಳು ಮೂಡಿದಂತಾಗಿದೆ. ವಾಹನಕ್ಕಾಗಿ ಕಾಯಬೇಕಿಲ್ಲ. ಇಕ್ಕಟ್ಟಿನಲ್ಲಿ ಕುಳಿತು ಪ್ರಯಾಣಿಸಬೇಕಾಗಿಲ್ಲ. ಅಸಭ್ಯ ವರ್ತನೆ ತೋರುವ ಸಹಪ್ರಯಾಣಿಕರ ಬಗ್ಗೆ ಭಯವಿಲ್ಲ. ನನ್ನದೇ ಸ್ವಾತಂತ್ರ್ಯದ ಸ್ವರ್ಗದಲ್ಲಿ ವಿಹರಿಸುವ ಖುಷಿ ನನ್ನದಾಯಿತು. ಒಂದು ನಿಮಿಷ ಅಥವಾ ಸೆಕೆಂಡಿನ ವ್ಯತ್ಯಾಸದಲ್ಲಿ ಬಸ್ಸು ತಪ್ಪುವಾಗ ಆಗುವ ಯಾತನೆಯನ್ನೂ ಅನುಭವಿಸಬೇಕಿಲ್ಲ. ಚಿಲ್ಲರೆ ಹಣವನ್ನು ಪರ್ಸ್‌ನಲ್ಲಿಟ್ಟುಕೊಳ್ಳಬೇಕಿಲ್ಲ. ನಾನು ಹೊರಗೆ ಹೊರಡುವ ಸಮಯವನ್ನು ಸಾರ್ವಜನಿಕ ವಾಹನ ನಿರ್ಧರಿಸದೇ ನಾನೇ ನಿರ್ಧರಿಸುವ ಸುಖವೇನು ಸಾಮಾನ್ಯದ್ದೆ? ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುತ್ತ, ಸ್ವತ್ಛ ಗಾಳಿ ಸೇವಿಸುತ್ತ ಹಳ್ಳಿಶಾಲೆಯತ್ತ ಪ್ರಯಾಣಿಸುವಾಗ ನನ್ನ ಸ್ವಾತಂತ್ರ್ಯಕ್ಕೂ ಸಂತೋಷಕ್ಕೂ ಆಕಾಶವೊಂದೇ ಎಲ್ಲೆ ಎನಿಸುತ್ತದೆ. ಮಕ್ಕಳನ್ನು ಡ್ರಾಯಿಂಗ್, ಸಂಗೀತ, ನೃತ್ಯ ಮುಂತಾದ ತರಗತಿಗಳಿಗೆ ಸೇರಿಸಲು ನನ್ನ ವಾಹನದ ಸಹಕಾರದಿಂದಲೇ ಸಾಧ್ಯವಾಯಿತೆನ್ನಬಹುದು. ನೃತ್ಯ, ಸಂಗೀತ ಮುಂತಾದ ತರಗತಿಗಳಿಗೆ ಮಕ್ಕಳನ್ನು ಕರೆ ತರುವವರು ಹೆಚ್ಚಾಗಿ ಅಮ್ಮಂದಿರೇ. ಅದೂ ಸ್ಕೂಟರಿನಲ್ಲಿಯೇ ಅನ್ನೋದನ್ನು ಗಮನಿಸಿದ್ದೇನೆ.
ವಾಹನ ಸೌಕರ್ಯದ ಕೊರತೆಯಿರುವ ಕಡೆಗಳಲ್ಲಂತೂ ಮಹಿಳೆಯರಿಗೆ ಸ್ಕೂಟರ್ ಅನಿವಾರ್ಯ ಎನಿಸಿಬಿಟ್ಟಿದೆ. ಆದರೆ, ಕೆಲವರು ಗಂಡಸರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಮೊಬೈಲ್‌ನಲ್ಲಿ ಮಾತನಾಡುತ್ತ, ರಸ್ತೆ ನಿಯಮಗಳನ್ನು ಉಲ್ಲಂ ಸುತ್ತಾ ಸ್ಕೂಟರ್ ಚಲಾಯಿಸುತ್ತಾರೆ. ಹೆಲ್ಮೆಟ್ ಧರಿಸದೇ ಹೋಗುತ್ತಾರೆ. ಹಾಗೆಲ್ಲಾ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸುರಕ್ಷತೆಯ ನಿಯಮಗಳನ್ನು ಕಡೆಗಣಿಸುವುದು ಸಾಹಸವಲ್ಲ, ಅಪರಾಧ. ಹಿತಮಿತವಾದ ವೇಗದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಚಾಲನೆ ಮಾಡುವುದು ಅತ್ಯಗತ್ಯ. ಇನ್ನು ಸೀರೆ ಅಥವಾ ಚೂಡಿದಾರ್ ಧರಿಸಿ ಸ್ಕೂಟರ್ ಓಡಿಸುವವರು ಸೀರೆಯ ಸೆರಗು ಅಥವಾ ಚೂಡಿದಾರದ ಶಾಲನ್ನು ಗಾಳಿಯಲ್ಲಿ ಹಾರದಂತೆ ಕಟ್ಟಿಕೊಳ್ಳುವುದು ಅಗತ್ಯ. ಹಾಗೆಯೇ ಸೀರೆ ಕಾಲಿಗೆ ತೊಡರಿ ತೊಂದರೆಯಾಗದಂತೆ ಎತ್ತಿ ಕಟ್ಟುವುದೂ ಅಗತ್ಯ. ಇಲ್ಲದಿದ್ದರೆ ಗಾಡಿಯ ಚಕ್ರಕ್ಕೆ ಬಟ್ಟೆ ಸಿಲುಕಿ ನೆಲಕ್ಕೆಸೆಯಲ್ಪಡುವ ಅಥವಾ ಶಾಲು ಕುತ್ತಿಗೆಗೆ ಬಿಗಿಯಲ್ಪಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ವಾಹನ ಚಾಲನೆಯಲ್ಲಿ ಮಹಿಳೆಯರು ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸಬೇಕು. ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಜಾಕೆಟ್ ಧರಿಸುವುದೂ ಉತ್ತಮ.
ಎಲ್ಲಿಗಾದರೂ ಹೋಗಬೇಕಾದರೆ ಗಂಡನ ಬಳಿ ಗೋಗರೆಯುವ ಕಷ್ಟವಾಗಲಿ, ಜನರು ತುಂಬಿ ತುಳುಕುವ ವಾಹನದಲ್ಲಿ ಉಸಿರುಗಟ್ಟಿ ಪ್ರಯಾಣಿಸುವ ಕಷ್ಟವಾಗಲೀ ಇಲ್ಲದಂತೆ ನನ್ನಂಥ ಮಹಿಳೆಯರನ್ನು ಕಾಪಾಡುವ ಸ್ಕೂಟರ್ ನಮಗೆ ಕೊಟ್ಟ ಸ್ವಾತಂತ್ರ್ಯ ಎಲ್ಲಕ್ಕಿಂತ ದೊಡ್ಡದು!
ಜೆಸ್ಸಿ ಪಿ. ವಿ.