ಕಲಬುರಗಿ: ಖ್ಯಾತ ವಾಗ್ಮಿ, ವಿಚಾರವಾದಿ ಚಕ್ರವರ್ತಿ ಸೂಲಿಬೆಲೆ ಅವರು ಕಲಬುರಗಿ ಜಿಲ್ಲೆ ಪ್ರವೇಶ ನಿರ್ಬಂಧಗೊಳಿಸಿ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಗುರುವಾರ ಹೈಕೋರ್ಟ್ ತೆರವುಗೊಳಿಸಿದೆ.
ಕಾನೂನು ಸಮರದಲ್ಲಿ ಗೆದ್ದ ಬಳಿಕ ಕಲಬುರಗಿಯಲ್ಲಿ ನಮೋ ಬ್ರಿಗೇಡ್ ಚಿತ್ತಾಪುರ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸೂಲಿಬೆಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವಂತೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ಜಿಲ್ಲೆ ಪ್ರವೇಶಿಸಿದರೆ ಶಾಂತಿ ಕದಡುತ್ತಾರೆಂದು ಹಾಗೂ ಕಾನೂನ ವ್ಯವಸ್ಥೆ ಹಾಳಾಗಬಹುದು ಎಂಬ ನಿಟ್ಟಿನಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿ ಫೆ.29 ರಿಂದ ಮಾರ್ಚ 4ರವರೆಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಕಲಬುರಗಿ ಸಹಾಯಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದರು.
ಬೀದರ್ ನಿಂದ ಬುಧವಾರ ಮಧ್ಯ ರಾತ್ರಿ ಕಲಬುರಗಿಗೆ ಬರುತ್ತಿರುವಾಗ ಚಕ್ರವರ್ತಿ ಅವರನ್ನು ರಾತ್ರಿ 12 ಗಂಟೆಗೆ ಗಡಿಯಲ್ಲೇ ಪೊಲೀಸರು ತಡೆದಿದ್ದರು. ಕಲಬುರಗಿ ಜಿಲ್ಲೆ ಪ್ರವೇಶದ ಕಿಣ್ಣಿ ಸಡಕ ಗ್ರಾಮದಲ್ಲಿ ನೂರಾರು ಪೊಲೀಸರ ತಂಡವು ಬಂದು ತಡೆಯೊಡ್ಡಿದೆ.ರಾತ್ರಿ ಸುಮಾರು 2 ಗಂಟೆವರೆಗೆ ತಡೆ ಹಿಡಿದು ನಂತರ ಸಮೀಪದ ಹಳ್ಳಿಖೇಡ ಗ್ರಾಮದಲ್ಲಿ ರಾತ್ರಿ ವಿಶ್ರಾಂತಿ ಪಡೆದಿದ್ದರು.
ಇಂದು (ಗುರುವಾರ ಫೆ. 29 ) ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ್ ಮಂಟಪದಲ್ಲಿ ನಮೋ ಬ್ರಿಗೇಡ್ ಅಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.
ಕಳೆದ ತಿಂಗಳು ರಾಯಚೂರು ಜಿಲ್ಲೆಯ ಶಿರವಾರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾತಿ ನಿಂದನೆ ನಿಟ್ಟಿನಲ್ಲಿ ಮಾತನಾಡಿದ್ದಾರೆಂದು ಠಾಣೆಗೆ ದೂರು ಸಹ ಸಲ್ಲಿಸಲಾಗಿತ್ತು.ಸೂಲಿಬೆಲೆ ಅವರು ನ್ಯಾಯಾಲಯ ಮೊರೆ ಹೋಗಿ ತಮ್ಮ ವಿರುದ್ದ ದಾಖಲಾದ ಎಫ್ಐಆರ್ ಗೆ ತಡೆ ತಂದಿದ್ದರು. ಇದೀಗ ಕಲಬುರಗಿ ಜಿಲ್ಲೆ ಪ್ರವೇಶಿದಂತೆ ನಿರ್ಬಂಧ ಹೇರುವ ಮೂಲಕ ಸಂಘರ್ಷ ಏರ್ಪಟ್ಟಿದೆ.