Advertisement

ಚಾಕಲಬ್ಬಿ ಆದಿಶಕ್ತಿ ಶ್ರೀ ರೇಣುಕ ಯಲ್ಲಮ್ಮ

10:52 AM Apr 07, 2022 | Team Udayavani |

ಕುಂದಗೋಳ: ತಾಲೂಕಿನ ಚಾಕಲಬ್ಬಿ ಗ್ರಾಮದ ಶ್ರೀ ರೇಣುಕ ಯಲ್ಲಮ್ಮ ದೇವಿಯ ಮಹಿಮೆ ಅಪಾರವಾಗಿದೆ.

Advertisement

ಚಾಕಲಬ್ಬಿ ಗ್ರಾಮ ಪುರಾತನ ಕಾಲದಲ್ಲಿ ಇದೊಂದು ಜಾಲಿಗೊಬ್ಬಿಯಾಗಿತ್ತು. ಅತ್ಯಂತ ದಟ್ಟ ಕಾನನ ಆಗಿದ್ದ ಈ ಪ್ರದೇಶದಲ್ಲಿ ದೈವತ್ವ ಪ್ರೇರಣೆಯ ಆರು ಜನ ಸಹೋದರರು ಹಾಗೂ ಓರ್ವ ಸಹೋದರಿ ಈ ಸ್ಥಳದಲ್ಲಿದ್ದರೆಂಬ ಪ್ರತೀತಿ ಇದೆ. ದೇಶ ಸಂಚಾರಿಗಳಾಗಿದ್ದ ಆ ಸಹೋದರರು, ಸಹೋದರಿಗೆ ಆಹಾರ ವಸ್ತುಗಳ ಜತೆಗೆ ಭದ್ರ ರಕ್ಷಣೆಯನ್ನಿಟ್ಟು ದೇಶ ಸಂಚಾರಿಗಳಾಗಿ ತಿಂಗಳುಗಟ್ಟಲೆ ಹೊರಗಡೆ ಹೋಗುತ್ತಿದ್ದರು. ಒಂದು ದಿನ ಚಿಕ್ಕಮ್ಮ ತಾಯಿ (ಆರು ಜನ ಸಹೋದರರ ತಂಗಿ) ಗೆ ಬೇಯಿಸಿದ ಹುರುಗಡಲೆ ತಿನ್ನುವ ಆಶೆಯಾಯಿತು. ಕಾಡಿನಲ್ಲಿದ್ದ ಕಟ್ಟಿಗೆಗಳನ್ನು ತಂದು ಕಡಲೆ ಬೇಯಿಸಲು ಮುಂದಾದಳು. ಸಂಶಿಯ ಗುಡ್ಡದ ಮೇಲೆ ಸವಣೂರ ನವಾಬ ಸಾಹೇಬನ ಅಂಗರಕ್ಷಕರು ದಟ್ಟ ಕಾನನವಾಗಿದ್ದ ಸದ್ಯದ ಚಾಕಲಬ್ಬಿಯ ಜಾಲಿಗೊಬ್ಬೆಯಲ್ಲಿ ಬೆಂಕಿಯಿಂದ ಬಂದ ಸಣ್ಣದೊಂದು ಹೊಗೆ ಕಂಡು ಅಚ್ಚರಿಯಾದರು. ಸುಳಿ, ಸುಳಿಯಾಗಿ ಬರುತ್ತಿದ್ದ ಹೊಗೆಯನ್ನಾಧರಿಸಿ ಸ್ಥಳಕ್ಕೆ ಬಂದು ನೋಡಿದಾಗ ಅವರಿಗೊಂದು ಅಚ್ಚರಿ ಕಾದಿತ್ತು. ಅತ್ಯಂತ ದುರ್ಗಮವಾದ ಪ್ರದೇಶದಲ್ಲಿ ಒಬ್ಬ ಹೆಣ್ಣು ಮಗಳು ಅದು ಒಬ್ಬಳೇ ಇರುವುದನ್ನು ಕಂಡು ಅಚ್ಚರಿ ಪಟ್ಟರು. ಆಕೆಯೊಂದಿಗೆ ಮಾತನಾಡಲು ಮುಚ್ಚಿದ ಬಾಗಿಲು ತೆರೆ ಎಂದು ವಿನಂತಿಸಿದರು.

ಆದರೆ ನಮ್ಮ ಹೊರತಾಗಿ ಯಾರೇ ಬಂದರೂ ಬಾಗಿಲು ತೆರೆಯಕೂಡದೆಂಬ ಸಹೋದರರ ಕಟ್ಟಪ್ಪಣೆ ಇತ್ತು. ಬಾಯಾರಿಕೆಯಾಗಿದ್ದು ಗುಟುಕು ನೀರಾದರೂ ಕೊಡಿ ಎಂದು ಸೈನಿಕರು ಪದೇ ಪದೇ ವಿನಂತಿಸಿದಾಗ ಆಕೆಗೆ ಮಾನವೀಯತೆ, ಅಂತಃಕರಣ, ದಯೆ ತಾನಾಗಿಯೇ ಮೂಡಿ ಬಂತು. ಸಹೋದರರ ಕಟ್ಟಪ್ಪಣೆ ದಾನ, ಧರ್ಮ, ಪರೋಪಕಾರಕ್ಕೆ ಅಡ್ಡಿ ಬರಲಿಲ್ಲ. ಬಾಗಿಲು ತೆಗೆದು ಅವರಿಗೆ ನೀರು, ಬೇಯಿಸಿದ ಕಡಲೆ ಬೀಜ ನೀಡಿದಳು. ಸಂತಸಗೊಂಡ ಸೈನಿಕರು ಅಲ್ಲಿಂದ ಸವಣೂರಿಗೆ ಹೋಗಿ ನಡೆದ ವೃತ್ತಾಂತ ಹೇಳಿದರೆಂಬುದು ಐತಿಹಾಸಿಕ ಹಿನ್ನೆಲೆ. ಇದಾದ ಬಳಿಕ ಬಂದ ಸಹೋದರರು ಕುದುರೆ ಹೆಜ್ಜೆ ನೋಡಿ ಈ ಬಗ್ಗೆ ವಿಚಾರಿಸಿದಾಗ ಸತ್ಯ ಸಂಗತಿ ತಿಳಿದು ಬಂತು. ನಮ್ಮ ಕಟ್ಟಾಜ್ಞೆ ಮೀರಿದ ತಂಗಿಯ ಶಿರಚ್ಚೇದಕ್ಕೆ ಮುಂದಾಗಿ ಆಕೆಯ ರುಂಡವನ್ನೇ ಚೆಂಡಾಡಿದರು. ಈ ಪ್ರದೇಶದಲ್ಲಿ ನೀರಿದ್ದರೆ ಆಹಾರವಿಲ್ಲ. ಆಹಾರವಿದ್ದರೆ ನೀರಿರಬಾರದೆಂಬ ಶಾಪ ತಟ್ಟಿ ಪ್ರಾಣ ತ್ಯಾಗ ಮಾಡಿದಳು. ಪರಿಣಾಮ ಅಲ್ಲೊಂದು ಜಗತ್‌ ಪ್ರಳಯವೇ ಆಗಿ ಕಲ್ಮಠ ಉದ್ಭವಗೊಂಡಿತು.

ಏಳೂ ಜನ ಸಹೋದರರು ದಿಕ್ಕಾ ಪಾಲಾದರು. ಪ್ರಾಣ ಬಿಟ್ಟ ಈ ಮಾತೆ ಚಿಕ್ಕಮ್ಮ ಆದಿಶಕ್ತಿಯಾದಳು. ಪ್ರಳಯದಿಂದ ಕಲ್ಮಠವಾಗಿ ಅಲ್ಲೊಂದು ದೊಡ್ಡ ಬೇವಿನ ಮರ ನಿರ್ಮಾಣವಾಯಿತು. ಯಾರೋ ಒಬ್ಟಾತ ಅದನ್ನು ಕಡಿದಾಗ ರಕ್ತ ಸೋರಿತು. ಪರಿಣಾಮ ಜಾಲಿಗೊಬ್ಬಿ ಮಾಯವಾಗಿ ಚಾಕಲಬ್ಬಿಯಾಯಿತು.

ತದನಂತರ ಚಿಕ್ಕಮ್ಮ ತಾಯಿಯೇ ಶ್ರೀ ರೇಣುಕಾ ಯಲ್ಲಮ್ಮಳಾಗಿ ಭಕ್ತರನ್ನು ಸಲಹುತ್ತಿದ್ದಾಳೆ. ಹೀಗಾಗಿ ತಾನು ಕೊಟ್ಟ ಶಾಪ ತಾನೇ ಸಹಿಸಿಕೊಂಡು ಭಕ್ತರಿಗೆ ವರ ನೀಡುತ್ತಿದ್ದಾಳೆ. ಶಿಶುನಾಳ ಶರೀಫರು ಇಲ್ಲಿಗೆ ಬಂದಾಗ ರೇಣುಕಾ ಯಲ್ಲಮ್ಮದೇವಿ ದೇವಿಯಿಂದ ಚಿಲುಮೆ ಸೇದಲು ಬೆಂಕಿ ಪಡೆದು ಪವಾಡಗೈದರು. ಚಿಲುಮೆ ಎಲ್ಲಿ ತೊಳೆದೊ ಶರೀಫ ಎಂದು ಗುರುಗಳಾದ ಗೋವಿಂದಭಟ್ಟರನ್ನು ಶರೀಫರನ್ನು ಕೇಳಿದಾಗ ಕೆರೆಯಲ್ಲಿ ಎಂದು ಹೇಳಿದರು.

Advertisement

ನೀರು ಘಾಟವಾಗುತ್ತದೆ ಶರೀಫ ಎಂದರಂತೆ. ಅದರಂತೆ ಇಂದಿಗೂ ಜಾತ್ರೆ ದಿನದಂದು ಕೆರೆಯ ನೀರು ಘಾಟು ವಾಸನೆ ಬರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಪ್ರತಿವರ್ಷ ನಡೆಯುವ ದೇವಿಯ ಕರಿಬಂಡಿಯನ್ನು ಗ್ರಾಮದ ಎರಡು ಮನೆತನದ ಎತ್ತುಗಳ ಮೂಲಕ ಎಳೆಯಲಾಗುತ್ತದೆ. ನಂತರ ರೈತರು ತಮ್ಮ ಎತ್ತುಗಳನ್ನು ಕಟ್ಟಿ ಬಂಡಿ ಎಳೆಯುತ್ತಾರೆ. ಕೃಷಿ ಕಾಯಕಕ್ಕೆ ದೇವಿಯ ಅನುಗ್ರಹ ಸಿಗುತ್ತದೆ ಎಂಬ ನಂಬಿಕೆ. ಇನ್ನು ಬಂಡಿಗೆ ಎತ್ತುಗಳನ್ನು ಹೂಡಲು ನಗಕ್ಕೆ ಹಕ್ಕ ಕಟ್ಟಿದರು. ಯಾವುದೆ ಒಂದು ಗಂಟು ಹಾಕದಿರುವುದು ವಿಶೇಷ. ಹೀಗೆ ಅನೇಕ ಪವಾಡಗಳಿಂದ ಕೂಡಿದ ಕರಿಬಂಡಿ ಉತ್ಸವ ಏ.7ರಂದು ನಡೆಯಲಿದ್ದು,ದೇವಸ್ಥಾನಕ್ಕೆ ದೂರದಿಂದ ಭಕ್ತರು ಬರುತ್ತಿದ್ದು, ಹಣ್ಣು,ಕಾಯಿ ಸಮರ್ಪಿಸುತ್ತಾರೆ.

 ಶೀತಲ ಎಸ್‌.ಎಮ್‌

Advertisement

Udayavani is now on Telegram. Click here to join our channel and stay updated with the latest news.

Next