ಮುಂಬಯಿ : ”ನರೇಂದ್ರ ಮೋದಿ ಅವರು ಚಾಯ್‌ವಾಲಾ ಆಗಿದ್ದ ತಾನು ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಗೇರಲು ತನಗೆ ಅವಕಾಶ ಮಾಡಿಕೊಟ್ಟ ಸಂವಿಧಾನ ಮತ್ತು ದೇಶದಲ್ಲಿನ ಪ್ರಜಾಸತ್ತೆ ವ್ಯವಸ್ಥೆಗೆ ಎಂದೂ ಋಣ ಸಲ್ಲಿಸುವುದಿಲ್ಲ” ಎಂದು ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಟೀಕಿಸಿದ್ದಾರೆ.
“ನಾನು ಸ್ವತಃ ಓರ್ವ ಕೋರ್ಟ್ ಪ್ಯೂನ್ (ಚಪರಾಸಿ) ಆಗಿದ್ದೆ. ಹಾಗಿದ್ದೂ ನಾನು ದೇಶದ ಗೃಹ ಸಚಿವನಾದೆನೆಂದು ಎಂದೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ” ಎಂದು ಶಿಂಧೆ ಹೇಳಿದರು.
“ಚಾಯ್‌ವಾಲಾ ಆಗಿದ್ದ ತಾನು ಪ್ರಧಾನಿ ಆದೆನೆಂದು ಮೋದಿ ಹೇಳಿರುವುದನ್ನು ನೀವು ಅನೇಕ ಬಾರಿ ಕೇಳಿರುವಿರಿ; ಆದರೆ ಅದನ್ನು ಸಾಧ್ಯಗೊಳಿಸಿದ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆ ವ್ಯವಸ್ಥೆಗೆ ಅವರೆಂದೂ ತಾನು ಋಣಿ ಎಂದು ಹೇಳಿದ್ದನ್ನು ನೀವು ಕೇಳಿರುವಿರಾ ? ಇಲ್ಲ” ಎಂದು ಶಿಂಧೆ ಹೇಳಿದರು.
ವಕೀಲ ಮತ್ತು ಕಾಂಗ್ರೆಸ್ ನಾಯಕರಾಗಿರುವ ಯತೀಶ್ ನಾಯ್ಕ ಅವರು ಬರೆದಿರುವ ಪುಸ್ತಕವೊಂದರ ಬಿಡಗಡೆ ಸಂಬಂಧ ಏರ್ಪಡಿಸಲಾಗಿದ್ದ “ನಮ್ಮ ಸಾಂವಿಧಾನಿಕ ಪ್ರಜಾಸತ್ತೆ ಮತ್ತು ಅದರ ಧ್ಯೇಯಗಳು” ಎಂಬ ವಿಚಾರ ಸಂಕಿರಣದಲ್ಲಿ ಪ್ರಧಾನ ಆಶಯ ಭಾಷಣ ಮಾಡುತ್ತಾ ಶಿಂಧೆ ಈ ಮಾತುಗಳನ್ನು ಹೇಳಿದರು.
“ಸೋಲಾಪುರದ ಜಿಲ್ಲಾ ಕೋರ್ಟಿನಲ್ಲಿ ನಾನೋರ್ವ ಪತ್ತೇವಾಲಾ (ಪ್ಯೂನ್) ಆಗಿದ್ದೆ. ನಾನು ಯಾವತ್ತೂ ಕೂಡ ನನ್ನ ಬದುಕಿನ ಯಶಸ್ಸಿಗೆ ದೇಶದ ಪ್ರಜಾಸತ್ತೆ ವ್ಯವಸ್ಥೆ ಮತ್ತು ಸಂವಿಧಾನವೇ ಕಾರಣವೆಂದು ಹೇಳುತ್ತಿದ್ದೆ. ನನ್ನನ್ನು ನಾನು ಹೊಗಳಿಕೊಳ್ಳುವ ಬದಲು ನಾನು ಸೇರಿರುವ ಪಕ್ಷ ಮತ್ತು ಅದು ನನಗೆ ಕೊಟ್ಟಿರುವ ಹುದ್ದೆ, ಹೊಣೆಗಾರಿಕೆಗಳನ್ನು ಹೇಳಿಕೊಳ್ಳುವುದೇ ನನ್ನ ಕರ್ತವ್ಯವಾಗಿರುತ್ತದೆ ಎಂದು ನಾನು ತಿಳಿದಿದ್ದೇನೆ” ಎಂದು ಶಿಂಧೆ ಹೇಳಿದರು.