ಚನ್ನರಾಯಪಟ್ಟಣ: ಉತ್ತರ ಕರ್ನಾಟಕ, ಕೊಡುಗು ಹಾಗೂ ಹಾಸನ ಜಿಲ್ಲೆಯ ನೆರೆಸಂತ್ರಸ್ತರಿಗೆ ಚಾಯ್‌ವಾಲಾ ಎಚ್.ಕೆ.ಶೇಖ್‌ಅಹಮದ್ ಹಣ ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಪೂರ್ಣ ಹಣ ದೇಣಿಗೆ: ಪಟ್ಟಣದ ಬಾಗೂರು ರಸ್ತೆಯಲ್ಲಿ ಎಚ್ಕೆಎಸ್ ಟೀ ಅಂಗಡಿ ನಡೆಸುತ್ತಿರುವ ಶೇಖ್ ಅಹಮದ್ ಮಂಗಳವಾರ ಬೆಳಗ್ಗೆ ತನ್ನ ಅಂಗಡಿ ಮುಂದೆ ನೆರೆ ಸಂತ್ರಸ್ತ ಜಿಲ್ಲೆಗೆ ವ್ಯಾಪಾರ ಸಂಪೂರ್ಣ ಹಣ ನೀಡುವ ಉದ್ದೇಶ ಹೊಂದಿದ್ದೇನೆ ಎಂದು ನಾಮಫಲಕವನ್ನು ಹಾಕಿದ್ದಾರೆ ಇದನ್ನು ಗಮನಿಸಿದ ಯುವಕರು ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲಾತಾಣಕ್ಕೆ ಹರಿ ಬಿಟ್ಟಿದ್ದರಿಂದ ಹಲವು ಮಂದಿ ಇಂದು ಇದೇ ಟೀ ಅಂಗಡಿಗೆ ಬಂದು ವ್ಯಾಪಾರ ಮಾಡಿ ಉಳಿದ ಚಿಲ್ಲರೆ ಪಡೆಯದೆ ನೆರೆ ಸಂತ್ರಸ್ತರಿಗೆ ತಮ್ಮದೂ ಸ್ಪಲ್ಪಹಣ ಸೇರಲೆಂದು ಹೇಳುತ್ತಿದ್ದಾರೆ.
ಗ್ರಾಹಕರ ಸಹಕಾರವಿದೆ: ಟೀ ಅಂಗಡಿ ಮಾಲೀಕ ಗ್ರಾಹಕರು ಕೇಳಿದ ವಸ್ತುವನ್ನು ನೀಡುತ್ತಾರೆ. ಸಾರ್ವಜನಿಕರು ಹಣ ನೀಡಲು ಮುಂದಾದಾಗ ನಾನು ಹಣ ವನ್ನು ಕೈನಲ್ಲಿ ಸ್ವೀಕರಿಸುವುದಿಲ್ಲ ಇಲ್ಲಿ ಇಟ್ಟಿರುವ ಟಬ್‌ಗ ಹಣ ಹಾಕಿ ತಾವೇ ಚಿಲ್ಲರೆ ತೆಗೆದುಕೊಂಡು ಹೋಗಿ ಎಂದು ಹೇಳು ತ್ತಾರೆ. ಇದರಿಂದಾಗ ಚಿಲ್ಲರೆ ಪಡೆಯಲು ಗ್ರಾಹಕರಿಗೆ ಮುಜುಗರ ವಾಗಿ 30 ರೂ. ವ್ಯಾಪಾರ ಮಾಡಿದರೆ 20 ರೂ. ಹೆಚ್ಚುವರಿ ನೀಡುತ್ತಾರೆ ಕೆಲವರು ತಾವು ನೀಡಿದ ಹಣಕ್ಕೆ ಚಿಲ್ಲರೆ ಪಡೆಯದೆ ಹಾಗೆ ಬಿಟ್ಟು ಹೋಗುತ್ತಾರೆ ಎನ್ನುತ್ತಾರೆ.
ಕನಿಷ್ಠ 10 ಸಾವಿರ ಗುರಿ: ಬಾಗೂರು ರಸ್ತೆಯಲ್ಲಿನ ಇತರ ಟೀ ಅಂಗಡಿಗಳತ್ತ ಗ್ರಾಹಕರು ಸುಳಿಯುತ್ತಿಲ್ಲ, ಶೇಖ್‌ಅಹಮದ್ ಸಾಮಾಜಿಕ ಕಳಕಳಿಯನ್ನು ಕಂಡು ಎಲ್ಲರೂ ಇದೇ ಟೀ ಅಂಗಡಿ ಯಲ್ಲಿ ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ನಿತ್ಯ 5 ರಿಂದ 6 ಸಾವಿರ ವ್ಯಾಪಾರ ಮಾಡುತ್ತಿದ್ದು, ಇದರಲ್ಲಿ 800-900 ರೂ. ಲಾಭ ಮಾಡುತ್ತಿದ್ದ ಚಾಯ್‌ವಾಲಾ ಲಾಭ ವನ್ನು ಸಂತ್ರಸ್ತರ ನಿಧಿಗೆ ನೀಡದೇ ಇಂದಿನ ವ್ಯಾಪಾರದ ಸಂಪೂರ್ಣ ಹಣ ನೆರೆ ಸಂತ್ರಸ್ತರಿಗೆ ನೀಡುತ್ತಿದ್ದು ಕನಿಷ್ಠ 10 ಸಾವಿರ ರೂ. ಜಿಲ್ಲಾಡಳಿತಕ್ಕೆ ತಲುಪಲಿದೆ.
ಅಳಿಲು ಸೇವೆ: ಪೊಲೀಸ್ ಇಲಾಖೆ ಸಿಬ್ಬಂದಿ, ರಕ್ಷಣಾ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ರಾತ್ರಿ ಹಗಲೆನ್ನದೆ ಸೇವೆ ನೀಡುತ್ತಿದ್ದಾರೆ. ಇದನ್ನು ಗಮನಿಸಿದ ಚಾಯ್‌ವಾಲಾ ತನ್ನ ಕೈಲಾದ ಸೇವೆ ಮಾಡುವ ಉದ್ದೇಶದಿಂದ ಒಂದು ದಿವಸದ ವ್ಯಾಪಾರದಲ್ಲಿ ಬಂದ ಸಂಪೂರ್ಣ ಹಣವನ್ನು ದೇಣಿಗೆ ಯಾಗಿ ನೀಡಲು ಮುಂದಾಗಿದ್ದಾನೆ. ಒಂದು ವೇಳೆ ಇಂದಿನ ವ್ಯಾಪಾರ ಕಡಿಮೆಯಾದರೆ ತನ್ನ ಕಿಸೆಯಿಂದ ಹಣ ತೆಗೆದು 8 ರಿಂದ 10 ಸಾವಿರ ನಿಡುವ ಉದ್ದೇಶ ಹೊಂದಿದ್ದಾರೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ