Advertisement
ಚೈತ್ರಾ ಸಹಿತ ಎಲ್ಲರ ಹೇಳಿಕೆಗಳನ್ನೂ ವೀಡಿಯೋ ಚಿತ್ರೀಕರಿಸಿ ಕೊಳ್ಳಲಾಗಿದೆ. ಇಡೀ ವಂಚನೆಯ ಸಂಚನ್ನು ಗಗನ್, ಹಾಲಶ್ರೀ ಸ್ವಾಮೀಜಿ, ಶ್ರೀಕಾಂತ್ ಪೂಜಾರಿ ಹಾಗೂ ತಾನು ಸೇರಿ ರೂಪಿಸಿದ್ದು, ಇತರರಿಗೆ ಹಣದ ಆಮಿಷವೊಡ್ಡಿ ಸಹಾಯ ಪಡೆದುಕೊಂಡಿದ್ದೇವೆ ಅಷ್ಟೇ ಎಂದು ಚೈತ್ರಾ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಗೋವಿಂದಬಾಬು ರಾಜಕೀಯ ಪ್ರವೇಶಕ್ಕೆ ವೇದಿಕೆ ಸೃಷ್ಟಿಸಿಕೊಳ್ಳಲು ಕಾಯುತ್ತಿದ್ದರು. ಅವರಲ್ಲಿ ಕೋಟ್ಯಂತರ ರೂ. ಇರುವ ಬಗ್ಗೆ ಮಾಹಿತಿಯೂ ಇತ್ತು. ಹೀಗಾಗಿ ಅವರಿಂದ ಒಂದಷ್ಟು ಹಣ ಪಡೆದು ವಂಚಿಸಿದರೆ, ಪೊಲೀಸರಿಗೆ ದೂರು ನೀಡುವುದಿಲ್ಲ. ಒಂದು ವೇಳೆ ದೂರು ನೀಡಿದರೂ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಭಾವಿಸಿದ್ದೆವು. ದೊಡ್ಡವರು ಯಾರೂ ಇಲ್ಲ ಎಂದು ಚೈತ್ರಾ ಹೇಳಿದ್ದಾಳೆ. ಇತರ ಆರೋಪಿಗಳು ಕೂಡ ತಮ್ಮ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳಿಂದ ಇದುವರೆಗೆ 2.76 ಕೋಟಿ ರೂ. ಜಪ್ತಿ ಮಾಡಲಾಗಿದೆ. ಈಗ ಸ್ವಾಮೀಜಿಯ ಇನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಮೀಜಿ 46 ಲಕ್ಷ ರೂ. ಇಟ್ಟಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದು, ಒಂದೆರಡು ದಿನಗಳ ಬಳಿಕ ಅದನ್ನು ಜಪ್ತಿ ಮಾಡಲಾಗುತ್ತದೆ. ಆರೋಪಿಗಳು ಗೋವಿಂದಬಾಬು ಪೂಜಾರಿಯಿಂದ ಪಡೆದಿದ್ದ 5 ಕೋಟಿ ರೂ. ಪೈಕಿ 50 ಲಕ್ಷ ರೂ.ಅನ್ನು ಖರ್ಚು ಮಾಡಿಕೊಂಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.