Advertisement

“ಚೈತನ್ಯ’ಪೂರ್ಣ ಮಹಾನ್‌ ಸಂತ

11:09 AM Mar 08, 2020 | Lakshmi GovindaRaj |

ಕೃಷನಾಮವನ್ನು ಜಪಿಸುತ್ತಲೇ ಹಿಂದೂ ಧರ್ಮದ ಪ್ರಭೆಯನ್ನು ಜಗದಗಲ ಹಬ್ಬಿಸಿದವರಲ್ಲಿ ಚೈತನ್ಯ ಮಹಾಪ್ರಭುಗಳು ಪ್ರಮುಖರು. ವೈಷ್ಣವ ಪಂಥದ ಪ್ರತಿಪಾದಕರು. ಫಾಲ್ಗುಣದ ಪೌರ್ಣಿಮೆ ಎಂದರೆ ಹೋಳಿಹಬ್ಬದ ಸಂಭ್ರಮದ ಹೊತ್ತಿನಲ್ಲೇ ಅವರ 535ನೇ ಜಯಂತಿ ಆಚರಣೆಗೊಳ್ಳುತ್ತಿದೆ…

Advertisement

1407 ಶಕಾಬ್ದ ಫಾಲ್ಗುಣ ಮಾಸದ ಶುಕ್ಲ ಪೌರ್ಣಿಮೆ. ಕ್ರಿಶ್ಚಿಯನ್‌ ಕ್ಯಾಲೆಂಡರ್‌ ಪ್ರಕಾರ, 1486ರ ಫೆ.18ನೇ ತಾರೀಖು. ಫಾಲ್ಗುಣದ ಪೌರ್ಣಿಮೆ ಎಂದರೆ, ಹೋಳಿಹಬ್ಬದ ಸಂಭ್ರಮ. ಆದರೆ ಆ ವರ್ಷ, ಹೋಳಿಯ ಸಂಭ್ರಮದ ಜೊತೆಗೆ ಚಂದ್ರಗ್ರಹಣದ ವಿಶೇಷ ಕೂಡ. ಹಾಗಾಗಿ, ಭಾಗೀರಥಿಯಲ್ಲಿ ಮುಳುಗೇಳುತ್ತಿದ್ದ ಮಂದಿ ಒಂದೇ ಸಮನೆ ಹರಿಬೋಲ್‌ ಕೂಗುತ್ತಿದ್ದರು.

ಬಂಗಾಳದ ನದಿಯಾ ಗ್ರಾಮದಲ್ಲಿ, ಆ ಹೊತ್ತಿನಲ್ಲಿ ಜಗನ್ನಾಥ ಮಿಶ್ರನ ಮಡದಿ ಶಚೀದೇವಿ ಮನೆಯಂಗಳದಲ್ಲಿದ್ದ ಬೇವಿನ ವೃಕ್ಷದ ಕೆಳಗಿದ್ದ ಪರ್ಣಕುಟಿಯಲ್ಲಿ ಚಂದಿರನಂತೆ ಹೊಳೆವ ಮಗುವೊಂದನ್ನು ಹಡೆದಳು. ಆಕೆಯ ತಂದೆ ಹತ್ತೂರಿಗೆಲ್ಲ ಪ್ರಸಿದ್ಧರಾಗಿದ್ದ ಜ್ಯೋತಿಷಿ ನೀಲಾಂಬರ ಚಕ್ರವರ್ತಿಗಳು, ಮಗುವಿನ ಜಾತಕ ಬರೆದು ಹೇಳಿದರು: “ಈ ಮಗು ಮನೆಗಷ್ಟೇ ಅಲ್ಲ, ದೇಶಕ್ಕೇ ಹೆಸರುವಾಸಿಯಾಗುತ್ತಾನೆ. ಮಹಾನ್‌ ವ್ಯಕ್ತಿಯಾಗಿ ಕೀರ್ತಿ ತರುತ್ತಾನೆ.

ಇದು ಕುಟುಂಬಕ್ಕೆ ಸೇರಿದ್ದಲ್ಲ, ವಿಶ್ವಕುಟುಂಬಕ್ಕೆ ಸೇರಿದ ಶಿಶು’! ಅಂತೆಯೇ ಆ ಮಗುವಿಗೆ ಅವರಿಟ್ಟ ಹೆಸರು ವಿಶ್ವಂಭರ. ಹಾಲಿಗಿಂತ ಬೆಳ್ಳಗಿದ್ದ ಆ ಹುಡುಗನಿಗೆ ಊರ ಹುಡುಗಿಯರು ಪ್ರೀತಿಯಿಂದ ಇಟ್ಟ ಹೆಸರು ಗೌರ್‌ ಹರಿ. ಬೇವಿನ ವೃಕ್ಷದ ಬುಡದಲ್ಲಿ ಹುಟ್ಟಿದ ಮಗುವನ್ನು ತಾಯಿ ಮುದ್ದಿನಿಂದ ಕರೆದದ್ದು “ನಿಮಾಯ್‌’ ಎಂದು. ನಿಮಾಯ್‌ ಚಿಕ್ಕವನಿದ್ದಾಗ ಅಳುವೋ ಅಳು. ಮನೆಮಂದಿ ಅವನೆದುರು ಹರಿಬೋಲ್‌ ಎಂದೊಡನೆ ಅಳು ಮಾಯ! ಮಗುವಿನ ಅಳು ನಿಲ್ಲಿಸುವ ಸಲುವಾಗಿ ಮನೆಯಲ್ಲಿ ನಿತ್ಯ ಹರಿಸಂಕೀರ್ತನೆ!

ಅದೊಂದು ದಿನ, ಮಗುವಿನ ಮೈಮೇಲಿದ್ದ ಚಿನ್ನ ಕದಿಯುವ ಆಸೆಯಿಂದ ಕಳ್ಳರಿಬ್ಬರು ಅವನನ್ನು ಕದ್ದೊಯ್ದರು. ಕತ್ತಲ ರಾತ್ರಿಯಲ್ಲಿ ಮಗುವನ್ನು ಹಿಡಿದುಕೊಂಡು ಓಡೀ ಓಡಿ ಕೊನೆಗೆ ಬೆಳಕು ಹರಿವ ಸಮಯಕ್ಕೆ ಸುರಕ್ಷಿತ ತಾಣಕ್ಕೆ ಬಂದೆವೆಂದು ಭಾವಿಸಿ ಸಿಕ್ಕ ಮನೆಯೊಂದರ ಕಟ್ಟೆಯಲ್ಲಿ ಕೂತರೆ, ಅದು ಹೊತ್ತು ತಂದ ಮಗು ನಿಮಾಯ್‌ನ ಮನೆಯೇ ಆಗಿತ್ತು! ಇದ್ಯಾವ ಪರಿಯ ವಿಚಿತ್ರ ಎಂದು ವಿಸ್ಮಿತರಾದ ಕಳ್ಳರು ಮಗುವನ್ನು, ಅವನೆಲ್ಲ ಆಭರಣಗಳ ಜೊತೆಗೆ ಜಗುಲಿಯಲ್ಲೇ ಮಲಗಿಸಿ ಪರಾರಿಯಾದರು.

Advertisement

ಮತ್ತೂಮ್ಮೆ ಒಬ್ಬ ಸನ್ಯಾಸಿ, ಜಗನ್ನಾಥ ಮಿಶ್ರನ ಮನೆಗೆ ಅತಿಥಿಯಾಗಿ ಬಂದಿದ್ದ. ತನ್ನ ಅಡುಗೆಯನ್ನು ತಾನೇ ತಯಾರಿಸಿಕೊಳ್ಳುವೆನೆಂಬ ಹಟದ ಸನ್ಯಾಸಿ ತಯಾರಿಸಿದ ಅನ್ನಕ್ಕೆ ಪೂಜೆಗೆ ಮೊದಲೇ ಕೈಹಾಕಿದ ನಿಮಾಯ್‌. ಕೆಲಸ ಕೆಟ್ಟಿತೆಂದು ಸನ್ಯಾಸಿ ಮತ್ತೂಮ್ಮೆ ಅಡುಗೆ ಮಾಡಿದ. ಆದರೆ, ಕೃಷ್ಣನಿಗೆ ನೈವೇದ್ಯವರ್ಪಿಸಲೆಂದು ಆತ ಭಕ್ತಿಯಿಂದ ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದಾಗಲೇ ನಿಮಾಯ್‌ ಮತ್ತೆ ಅನ್ನದ ಪಾತ್ರೆಯನ್ನು ಬರಿದಾಗಿಸಿದ!

ಇದ್ಯಾಕೋ ಅತಿಯಾಯಿತೆಂದು ಸನ್ಯಾಸಿ ಹಟಬಿಡದೆ ಮೂರನೇ ಬಾರಿ ಅನ್ನ ತಯಾರಿಸಿ, ದೇವರಿಗೆ ಸಮರ್ಪಣೆ ಮಾಡಲು ಕೂತರೆ, ಕಾವಲು ಕಾಯಬೇಕಿದ್ದ ಮನೆಯವರೆಲ್ಲರೂ ಗಾಢ ನಿದ್ರೆಗೆ ಜಾರಿದರು. ಮತ್ತೂಮ್ಮೆ ಗಡಿಗೆಯಿಂದ ಅನ್ನ ತಿನ್ನದೆ ಬಿಡಲಿಲ್ಲ ನಿಮಾಯ್‌! ಓಡಿಸಲು ಬಂದ ಸನ್ಯಾಸಿಗೆ ಅಲ್ಲಿ ಕಂಡದ್ದು ಬಾಲಕನಲ್ಲ; ಅಂಬೆಗಾಲಿಡುವ ಶಿಶುವಲ್ಲ; ಸಾಕ್ಷಾತ್‌ ಶ್ರೀಕೃಷ್ಣ! ಇದುವರೆಗೆ ನಡೆದ ಘಟನೆಗಳ ಅರ್ಥವಾಗಲು ಆ ಕಾವಿಧಾರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಈತನಿಗೆ ಕಲಿಸುವುದೇನೂ ಬಾಕಿ ಇಲ್ಲ…: ದೇವರಾದರೇನು, ಕೃಷ್ಣನೂ ಸಾಂದೀಪನಿ ಮುನಿಗಳ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡಲಿಲ್ಲವೆ? ಹಾಗೆಯೇ ಐದು ವರ್ಷಕ್ಕೆಲ್ಲ ನಿಮಾಯ್‌ನನ್ನು ಶಾಲೆಗೆ ಸೇರಿಸಿದರು. ಎರಡು ವರ್ಷಗಳಲ್ಲಿ ಬಂಗಾಳಿ ಭಾಷೆಯಲ್ಲಿ ಅಸ್ಖಲಿತ ಪ್ರಭುತ್ವ ಸಿದ್ಧಿಸಿಬಿಟ್ಟಿತು ಪುಟ್ಟ ಬಾಲಕನಿಗೆ. ವರ್ಷ ಎಂಟಾಗುವಷ್ಟರಲ್ಲಿ ಗಂಗಾದಾಸ ಪಂಡಿತರ ಸಾಲೆಯಲ್ಲಿ ಸಂಸ್ಕೃತ ಕಲಿಯಲು ಸೇರಿದ್ದಾಯಿತು. ಎರಡೇ ವರ್ಷಗಳಲ್ಲಿ ಸಂಸ್ಕೃತ ಸಾಹಿತ್ಯ, ವ್ಯಾಕರಣ, ಶಾಸ್ತ್ರ ಎಲ್ಲವನ್ನೂ ಓದಿಕೊಂಡದ್ದಾಯಿತು.

ಉಳಿದ ಹುಡುಗರಿಗೆ ಏಳೆಂಟು ವರ್ಷಗಳಲ್ಲೂ ತಲೆಗೆ ಹತ್ತದ ವಿದ್ಯೆಯನ್ನು ಎರಡೇ ವರ್ಷಗಳಲ್ಲಿ ಕರಗತ ಮಾಡಿಕೊಂಡ ಈ ಹುಡುಗನಿಗೆ ಹೆಚ್ಚಿಗೆ ಕಲಿಸುವುದೇನೂ ಬಾಕಿಯಿಲ್ಲ ಎಂದು ಗಂಗಾದಾಸರು ಹೇಳಿದ್ದಾಯಿತು. ಮುಂದೇನು? ಇದೆಯಲ್ಲ ಸ್ವಾಧ್ಯಾಯ! ಮನೆಯಲ್ಲಿ ನೂರಾರು ಅಮೂಲ್ಯ ಗ್ರಂಥಗಳ ಭಂಡಾರವೇ ಇದ್ದುದರಿಂದ ನಿಮಾಯ್‌ಗೆ ಮನೆಯಲ್ಲಿದ್ದೇ ಕಲಿಯುವ ಅವಕಾಶ ಸಿಕ್ಕಿತು. ಒಂದೆರಡು ವರ್ಷಗಳಲ್ಲೇ ವೇದಸಾಹಿತ್ಯವನ್ನು ಅರೆದುಕುಡಿದಾಯಿತು. 14ನೇ ವಯಸ್ಸಿಗೆ ವಿಶ್ವಂಭರನಿಗೆ, ನದಿಯಾ ಗ್ರಾಮದ ಪ್ರಗಲ್ಮ ವಿದ್ವಾಂಸ ವಲ್ಲಭಾಚಾರ್ಯರ ಮಗಳು ಲಕ್ಷ್ಮೀದೇವಿಯೊಂದಿಗೆ ಮದುವೆ.

ದುಃಖದ ದೋಣಿಯಲ್ಲಿ…: ಶಾಲೆಯಲ್ಲಿ ಸಾಂಪ್ರದಾಯಿಕವಾಗಿ ಕಲಿಯಬೇಕಾದ್ದೆಲ್ಲ ಕಲಿತಾಯಿತು. ಮದುವೆಯಾಗಿ ಸಂಸಾರ ನಿಭಾಯಿಸುವ ನೊಗ ಹೆಗಲಿಗೆ ಬಿತ್ತು. ಮಡದಿಯೊಂದಿಗೆ ಹೊಸ ಊರಿಗೆ ಹೊರಟ ವಿಶ್ವಂಭರ, ಕೊನೆಗೆ ನೆಲೆಕಂಡದ್ದು ಪದ್ಮಾ ನದಿಯ ತೀರದಲ್ಲಿ, ಪೂರ್ವ ಬಂಗಾಳದಲ್ಲಿ. ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಶ್ವಂಭರನ ಪಾಂಡಿತ್ಯದ ಪ್ರಭೆಯೂ, ಕೀರ್ತಿಯೂ ಹರಡಿದವು. ಆದರೆ, ಪ್ರಸಿದ್ಧಿಯನ್ನೂ ಧನವನ್ನೂ ಸಂಪಾದಿಸಿ ನೆಲೆಯೂರುವ ಅದೃಷ್ಟ ವಿಶ್ವಂಭರನಿಗಿರಲಿಲ್ಲ. ಮೆಚ್ಚಿನ ಮಡದಿ ಹಾವು ಕಚ್ಚಿ ತೀರಿಕೊಂಡಳು. ವಾಪಸು ಮನೆಗೆ ಬಂದ ವಿಶ್ವಂಭರ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವುದರ ಜೊತೆಗೆ, ಕಣ್ಣೀರ ಕಡಲಾಗಿದ್ದ ತಾಯಿಯನ್ನೂ ಸಂತೈಸಬೇಕಾಯಿತು. ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದು ವಿಶ್ವಂಭರ ಎರಡನೇ ಮದುವೆಯಾದ.

ವಿಶ್ವಂಭರನ ಪಟ್ಟು: ವಿಶ್ವಂಭರನ ಕೀರ್ತಿ ನಾಲೆಸೆಗೂ ಹಬ್ಬುವಂಥ ಘಟನೆಯೊಂದು ನದಿಯಾ ಗ್ರಾಮದಲ್ಲಿ ನಡೆಯಿತು. ಕಾಶ್ಮೀರದ ಪಂಡಿತ ಕೇಶವ ಮಿಶ್ರ, ಬಂಗಾಳಕ್ಕೆ ಬಂದ. ಸೋಲಿಸುವವರೇ ಇಲ್ಲವಾದ್ದರಿಂದ ಅವನಿಗಿದ್ದ ಬಿರುದು ಮಹಾ ದಿಗ್ವಿಜಯಿ. ಅವನ ಜೊತೆ ವಾದಿಸಿ ಸೋತರೆ ತಮ್ಮ ಬಿರುದುಬಾವಲಿಗಳನ್ನೆಲ್ಲ ಕಳಚಿಟ್ಟು, ಸೋತೆವೆಂದು ತಾಮ್ರಪತ್ರ ಬರೆಯಬೇಕೆಂಬ ಭಯಕ್ಕೆ ನದಿಯಾ ಗ್ರಾಮದ ದೊಡ್ಡ ವಿದ್ವಾಂಸರೆಲ್ಲ ಅತ್ತಿತ್ತಲಿನ ಊರುಗಳಿಗೆ ದಿಕ್ಕಾಪಾಲಾಗಿ ಓಡಿಬಿಟ್ಟಿದ್ದರು! ಉಳಿದವನೊಬ್ಬನೇ ವಿಶ್ವಂಭರ. ಸರಿ, ಚರ್ಚೆಗೆ ವೇದಿಕೆ ಸಿದ್ಧಗೊಂಡಿತು.

ವಾದ ಶುರುವಾದ ಕೆಲ ಸಮಯದಲ್ಲೇ ಕೇಶವಮಿಶ್ರ ಸೋಲೊಪ್ಪಬೇಕಾದ ವಾತಾವರಣ ನಿರ್ಮಾಣವಾಯಿತು. ದಿಗ್ವಿಜಯಿಯನ್ನು ಮಣ್ಣುಮುಕ್ಕಿಸಿದ ವಿಶ್ವಂಭರನ ಕೀರ್ತಿ ಬಂಗಾಳವೆಲ್ಲ ಪಸರಿಸಿಬಿಟ್ಟಿತು. ಆತನೀಗ ವಿಶ್ವಂಭರ ಮಾತ್ರವಲ್ಲ, ಚೈತನ್ಯ. ಕೃಷ್ಣಚೈತನ್ಯ. ಅಲ್ಲಿಂದ ಮುಂದಕ್ಕೆ ಚೈತನ್ಯರ ಬದುಕಿನದು ನಿಲ್ಲದ ಓಟ. ತನ್ನ 16ನೇ ವಯಸ್ಸಿನಲ್ಲಿ ಚೈತನ್ಯರು ಗಯೆಗೆ ಹೋದರು. ಈಶ್ವರಪುರಿಗಳ ಆಸರೆಯಲ್ಲಿ ಕೆಲದಿನಗಳನ್ನು ಕಳೆದರು. ತನ್ನ 24ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದು ಕಾವಿಯುಟ್ಟರು. ಗಯೆಯಿಂದ ವಾಪಸಾದ ಯುವಕನಲ್ಲಿ ಎದ್ದುಕಾಣುವಂಥ ಬದಲಾವಣೆಗಳಾಗಿದ್ದವು.

ಎಂಥವರನ್ನೂ ಸೆಳೆಯುವ ಅವರ್ಣನೀಯ ಮುಖಕಾಂತಿ, ಸ್ಫುಟ ಮಾತು, ಅಪ್ರತಿಮ ಬುದ್ಧಿಮತ್ತೆ. ಚೈತನ್ಯರು ಹೋದಲ್ಲೆಲ್ಲ ಜನಸಾಗರ. ಮುಗಿಲುಮುಟ್ಟುವ ಕೃಷ್ಣಸಂಕೀರ್ತನೆ. ಹಾಡು, ಕುಣಿತ, ಭಕ್ತಿಪರವಶತೆ. ಕೃಷ್ಣನೇ ಸರ್ವೋತ್ತಮನೆಂಬ ತತ್ತದ ಪ್ರಸಾರ. ಜಗಾಯ್‌, ಮಧಾಯ್‌ರಂಥ ಲೋಕಕಂಟಕ ಡಕಾಯಿತರನ್ನೂ ಭಕ್ತಿಮಾರ್ಗಕ್ಕೆ ತಿರುಗಿಸಿ, ಅವರಿಂದಲೂ ಹರಿನಾಮ ಸಂಕೀರ್ತನೆಯನ್ನು ನುಡಿಸಿದ ಚೈತನ್ಯರ ಶಕ್ತಿ ಕಂಡು ಬಂಗಾಳಕ್ಕೆ ಬಂಗಾಳವೇ ಮೂಗ ಮೇಲೆ ಬೆರಳಿಟ್ಟಿತು.

ಕೃಷ್ಣನೇ ಜಗದೋದ್ಧಾರಕ: ಬಂಗಾಳದಿಂದ ಪುರಿ, ಅಲ್ಲಿಂದ ಇಡಿಯ ದಕ್ಷಿಣ ಭಾರತ ಸಂಚಾರ, ವೃಂದಾವನದ ಭೇಟಿ, ಮರಳಿ ಪುರಿಗೆ ಬಂದು ತನ್ನ ಬದುಕಿನ ಕೊನೆಯ ಎರಡು ದಶಕಗಳನ್ನು ಕಳೆದರು. 15ನೇ ಶತಮಾನದಲ್ಲಿ ಹಿಂದೂ ಧರ್ಮವೇ ಪರಕೀಯ ಮತಗಳ ಆಕ್ರಮಣದಿಂದ ದಿಕ್ಕೆಟ್ಟು ನಶಿಸಿಹೋಗುವ ಅಪಾಯವನ್ನು ಎದುರಿಸುತ್ತಿದ್ದಾಗ ಜಾತಿ-ಮತ-ಪಂಥಗಳನ್ನೆಲ್ಲ ಮೀರಿ ಎಲ್ಲರನ್ನೂ ಭಕ್ತಿಮಾರ್ಗದ ಮೂಲಕ ಏಕತ್ರಗೊಳಿಸಿದ ಶ್ರೇಯಸ್ಸು ಚೈತನ್ಯರಿಗೆ ಸಲ್ಲಬೇಕು. ಹೇಗೆ ಹಿಂದೂ ಧರ್ಮ ತನ್ನ ಅಂತಸ್ಸತ್ವವನ್ನು ಮರೆತು ಬೀದಿಪಾಲಾಗಿತ್ತೋ, ಅಂತೆಯೇ ವೃಂದಾವನ ತನ್ನ ಗತವೈಭವವನ್ನೆಲ್ಲ ಮರೆತು ನಿಬಿಡ ಅರಣ್ಯವಾಗಿ ಬದಲಾಗಿತ್ತು.

ಚೈತನ್ಯರು ಅಲ್ಲಿ ವ್ಯಾಪಕ ಉತನನ ನಡೆಸಿ ಮಣ್ಣಿನಡಿ ಹುದುಗಿಹೋಗಿದ್ದ ಹಲವಾರು ದೇವಸ್ಥಾನಗಳನ್ನು ಬೆಳಕಿಗೆ ತಂದರು. ವೃಂದಾವನದಲ್ಲಿ ಹಳೆಯ ವೈಭವ ಮರಳಿಬರುವಂತಾಗಲೆಂದು ತನ್ನ ಆರು ಶಿಷ್ಯಂದಿರನ್ನು ವೃಂದಾವನದಲ್ಲಿರಲು ಆದೇಶಿಸಿದರು. ಆ ಶಿಷ್ಯರೇ ಮುಂದೆ ವೈಷ್ಣವ ಮತವನ್ನು ದೇಶಾದ್ಯಂತ ಪ್ರಚುರಪಡಿಸಿದ ಆರು ಗೋಸ್ವಾಮಿಗಳು.  ಚೈತನ್ಯ ಮಹಾಪ್ರಭುಗಳ ದೇಹಾಂತವಾದದ್ದು 1534ರ ಜೂನ್‌ 14ರಂದು, ಅವರ 48ನೇ ವಯಸ್ಸಿನಲ್ಲಿ. ದೇಹ ಮಣ್ಣಾದರೇನು, ಚೈತನ್ಯರ ಚೈತನ್ಯ, ವೈಷ್ಣವರ ಎದೆಗಳಲ್ಲಿ ಸದಾ ಮಿನುಗುವ ಬೆಳಕಿನ ನೀಲಾಂಜನ.

* ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next