ಬೆಂಗಳೂರು: ” ಜೋಕೆ.. ಬಲು ಜೋಕೆ.. ಸರಗಳ್ಳರಿದ್ದಾರೆ ಜೋಕೆ.. ಓಕೆ.. ಎಲ್ಲ ಓಕೆ… ನೀವು ಹುಶಾರಾಗಿದ್ರೆ ಓಕೆ ..’ ಇವು ಯಾವುದೇ ಸಿನಿಮಾದ ಹಾಡಿನ ಸಾಲುಗಳಲ್ಲ. ಕೆಲವು ವರ್ಷಗಳಿಂದ ಸಿಲಿಕಾನ್ ಸಿಟಿ ಜನರಿಗೆ ತಲೆನೋವಾಗಿ ಪರಿಣಮಿಸಿರುವ ಸರಗಳ್ಳರ ಹಾವಳಿ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸುಬ್ರಹ್ಮಣ್ಯ ಶಾನುಭೋಗ ರಚಿಸಿರುವ ಜಾಗೃತಿ ಗೀತೆಯ ಸಾಲುಗಳು.
ಸರಗಳ್ಳರ ಹಾವಳಿ, ಅವರ ಅಪರಾಧ ಶೈಲಿ, ಮಹಿಳೆಯರು ಸರಗಳ್ಳರ ಬಗ್ಗೆ ಹೇಗೆ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿಕೊಡುವ ಸಲುವಾಗಿ ಪೊಲೀಸ್ ಸಿಬ್ಬಂದಿ ಸುಬ್ರಹ್ಮಣ್ಯ ಸ್ವತ: ರಚಿಸಿ ಹಾಡಿರುವ ” ಜೋಕೆ.. ಸರಗಳ್ಳರಿದ್ದಾರೆ ಜೋಕೆ’ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗಸ್ಟ್ 15ರಂದು ಯೂಟ್ಯೂಬ್‌ಗ ಅಪ್ಲೋಡ್ ಮಾಡಲಾದ ಈ ಗೀತೆಯನ್ನು ಇದುವೆರಗೆ 21 ಸಾವಿರಕ್ಕೂ ಅಧಿಕ ಜನ ವಿಕ್ಷೀಸಿದ್ದಾರೆ. ಅಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿಯೂ ಸಾವಿರಾರು ಮಂದಿ ವೀಕ್ಷಿಸಿದ್ದು, ಪೊಲೀಸ್ ಸಿಬ್ಬಂದಿಯ ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಸುಬ್ರಹ್ಮಣ್ಯ ಅವರ ಜಾಗೃತಿ ಗೀತೆ ಗಾಯನಕ್ಕೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜತೆಗೆ, ರಾಜಧಾನಿಯ ಪೊಲೀಸ್ ಸಿಬ್ಬಂದಿಯೂ ತಮ್ಮ ಸಹದ್ಯೋಗಿಯ ಈ ಗೀತೆಯನ್ನು ಶೇರ್ ಮಾಡಿಕೊಂಡು, ಇದೊಂದು ವಿನೂತನ ಪ್ರಯತ್ನ ಹಾಗೂ ಜನರ ರಕ್ಷಣೆಗೆ ಬೆಂಗಳೂರು ಪೊಲೀಸರು ಸದಾ ಸಿದ್ಧ ಎಂಬ ಸಂದೇಶವಿರುವುದು ಹೆಮ್ಮೆ ಎಂದು ಬಣ್ಣಿಸುತ್ತಿದ್ದಾರೆ.
ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಈ ಜಾಗೃತಿ ಗೀತೆ ಮಾಡಲು ಮುಂದಾದ ಸುಬ್ರಹ್ಮಣ್ಯ ಅವರಿಗೆ ಸಾಥ್ ನೀಡಿದ್ದು ಸಂಗೀತ ನಿರ್ದೇಶಕ ಬಿ.ಆರ್.ಹೇಮಂತ್ ಕುಮಾರ್. ಕೋಲಾರ ಚಿತ್ರ ಸೇರಿದಂತೆ ಹಲವು ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹೇಮಂತ್ ಕುಮಾರ್, ಸುಬ್ರಹ್ಮಣ್ಯ ಅವರು ರಚಿಸಿದ ಗೀತೆಗೆ ಸ್ವರ ಸಂಯೋಜನೆ ಹಾಗೂ ಸಂಗೀತ ನೀಡಿದರು.ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಸಮಾಜ ಸೇವಕಿ ಚಂದ್ರಕಲಾ ಅವರು ನೀಡಿದ್ದಾರೆ. ಕ್ರಿಯೇಟಿವ್ ಮ್ಯೂಸಿಕ್ ಸ್ಟುಡಿಯೋ ಹಾಡಿನ ರೆಕಾರ್ಡಿಂಗ್‌ಗೆ ನೆರವು ನೀಡಿದೆ.
ಕೋಲಾರ ಜಿಲ್ಲೆಯ ಶಾನುಭೋಗನಹಳ್ಳಿಯವರಾದ ಸುಬ್ರಹ್ಮಣ್ಯ 2007ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿದ್ದು. ಬಾಲ್ಯದಿಂದಲೇ ಹಾಡುಗಾರಿಕೆಯಲ್ಲಿ ವಿಶೇಷ ಆಸಕ್ತಿಯಿತ್ತು. ಹೀಗಾಗಿ ಇಲಾಖೆ ಸೇವೆಯ ನಡುವೆಯೇ ಕಳೆದ 7 ವರ್ಷಗಳಿಂದ ಅಪರಾಧ ತಡೆ ಕುರಿತು, ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮನಃ ಪರಿವರ್ತನೆ ಕುರಿತು ಹಲವು ಗೀತೆಗಳನ್ನು ಬರೆದು ತಾವೇ ಹಾಡಿದ್ದಾರೆ.
ಸರಗಳ್ಳರ ಕಡಿವಾಣಕ್ಕೆ ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತಿದೆ. ಸರಕಳ್ಳರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪುಬಹುದು ಎಂಬ ಉದ್ದೇಶದಿಂದ ಸಿಬ್ಬಂದಿ ಸುಬ್ರಹ್ಮಣ್ಯ ಮಾಡಿದ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಜನರೂ ಮತ್ತಷ್ಟು ಎಚ್ಚರಿಕೆಯಿಂದ ಇರಲು ಅನುಕೂಲವಾಗಲಿದೆ ಎಂದು ಬೈಯಪ್ಪನಹಳ್ಳಿ ಇನ್ಸ್‌ಪೆಕ್ಟರ್ ಜಿ.ಪಿ ರಮೇಶ್ ತಿಳಿಸಿದರು.
ಸರಗಳ್ಳರ ಬಗ್ಗೆ ಜಾಗೃತಿ ಮೂಡಿಸಲು ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಮಾಡಿದ ವಿಡಿಯೋ ಗೀತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಗೀತೆಯಿಂದ ಜನರು ಸರಗಳ್ಳರ ಬಗ್ಗೆ ಎಚ್ಚೆತ್ತುಕೊಂಡರೆ ನಮ್ಮ ಶ್ರಮ ಸಾರ್ಥಕ.
-ಸುಬ್ರಹ್ಮಣ್ಯ, ಬೈಯಪ್ಪನಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ
* ಮಂಜುನಾಥ್ ಲಘುಮೇನಹಳ್ಳಿ