ಕುಂದಾಪುರ: ಕಾಲಿಗೆ ಸರಪಳಿ ಬಿಗಿದು ಬೀಗ ಹಾಕಿ ಪಂಚಗಂಗಾವಳಿ ನದಿಯಲ್ಲಿ 24 ಕಿ.ಮೀ. ದೂರ ಈಜುವ ಮೂಲಕ ಖಾರ್ವಿಕೇರಿಯ ಯುವಕ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಸಂಪತ್ ಡಿ. ಖಾರ್ವಿ ಸಾಧನೆ ಮಾಡಿದ್ದಾರೆ.
ರವಿವಾರ ಅಪರಾಹ್ನ 2 ಗಂಟೆಗೆ ಬಸ್ರೂರು ರೈಲ್ವೇ ಸೇತುವೆಯ ಒಂದು ಕಡೆಯಿಂದ ಪಂಚಗಂಗಾವಳಿ ನದಿಯಲ್ಲಿ ಈಜಲು ಆರಂಭಿಸಿ 24 ಕಿ.ಮೀ. ದೂರದಲ್ಲಿರುವ ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿಯನ್ನು ಸಂಜೆ 5.05ಕ್ಕೆ ತಲುಪಿದರು.
ಗಂಗೊಳ್ಳಿ ಎಸ್‌ಐ ವಾಸಪ್ಪ ನಾಯಕ್ ಅವರು ಕಾಲಿನ ಸರಪಳಿಯ ಬೀಗ ತೆಗೆದರು. ಇನ್ನೊಂದು ಬೀಗವನ್ನು ಬೀಗ ಹಾಕಿದ ಡಾ| ವಿಜಯಶಂಕರ್ ಅವರೇ ತೆಗೆದರು. ಯುವ ಬ್ರಿಗೇಡ್‌ನವರು ಸಮ್ಮಾನಿಸಿದರು. ಸಂಪತ್ ಅವರು ಖಾರ್ವಿಕೇರಿಯ ದೇವರಾಯ ಖಾರ್ವಿ-ಸಂಜೀವಿ ದಂಪತಿಯ ಪುತ್ರರಾಗಿದ್ದಾರೆ.
ಅವರೊಂದಿಗೆ ರಕ್ಷಣೆಗಾಗಿ ದೇವರಾಯ ಖಾರ್ವಿ, ರಂಜಿತ್, ಹರೀಶ್, ಸುಬ್ರಹ್ಮಣ್ಯ ಈಜುತ್ತ ಸಾಗಿದರು. ಈ ಸಂದರ್ಭ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿ, ಸರಕಾರಿ ಆಸ್ಪತ್ರೆಯ ವೈದ್ಯ ಡಾ| ವಿಜಯ ಶಂಕರ್, ಕೋಣಿ ಮಾನಸಜ್ಯೋತಿ ವಿಶೇಷ ಶಾಲೆಯ ಶೋಭಾ ಮಧ್ಯಸ್ಥ, ದೈಹಿಕ ಶಿಕ್ಷಣ ಶಿಕ್ಷಕ ಆನಂದ ಪೂಜಾರಿ, ತಲ್ಲೂರು ಪಂ. ಸದಸ್ಯ ಸುನಿಲ್ ಖಾರ್ವಿ, ಅಶೋಕ್ ಖಾರ್ವಿ ಮೊದಲಾದವರು ಶುಭ ಹಾರೈಸಿದರು. ಪಂಚಗಂಗಾವಳಿ ನದಿಯುದ್ದಕ್ಕೂ ಜನ ಸ್ವಾಗತಿಸಿದರು.
3 ತಿಂಗಳಿಂದ ಅಭ್ಯಾಸ
ಸಂಪತ್ ಖಾರ್ವಿ ಅವರು ಎಳವೆ ಯಿಂದಲೇ ತಂದೆಯಿಂದ ಈಜು ತರಬೇತಿ ಪಡೆದಿದ್ದರು. ಚಿಕ್ಕಪ್ಪಂದಿರಾದ ದೇವೇಂದ್ರ ಖಾರ್ವಿ, ದಯಾನಂದ ಖಾರ್ವಿ ಅವರ ಮಾರ್ಗದರ್ಶನ ನೀಡಿದ್ದರು. ಈ ಸಾಹಸಕ್ಕಾಗಿ 3 ತಿಂಗಳಿಂದ ಸತತ ಅಭ್ಯಾಸ ನಡೆಸಿದ್ದರು.
24 ಕಿ.ಮೀ. ದೂರವನ್ನು ಸರಪಳಿ ಹಾಕಿ ಈಜುವ ವಿಶ್ವಾಸವಿತ್ತು. ಮುಂದಿನ ದಿನಗಳಲ್ಲಿ ಕೈಗೆ, ಕಾಲಿಗೆ ಸರಪಳಿ ಅಥವಾ ಕೊಳ ಹಾಕಿ ಈಜುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್,ಗಿನ್ನೆಸ್ ರೆಕಾರ್ಡ್ಸ್ ಮಾಡುವ ಹಂಬಲ ಹೊಂದಿದ್ದೇನೆ.
-ಸಂಪತ್ ಡಿ. ಖಾರ್ವಿ, ಸಾಹಸಿ ಈಜುಪಟು