ಬೆಂಗಳೂರು: ಬ್ಯಾಗ್ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ ರೋಲ್ಡ್‌ಗೋಲ್ಡ್ ಸರ ಹಾಗೂ ನಗದು ಕಸಿದುಕೊಂಡು ಪರಾರಿಯಾಗು ತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಸಂಚಾರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ಚಾಮುಂಡಿ ನಗರ ನಿವಾಸಿಗಳಾದ ವಿಜಯ್ ಅಲಿಯಾಸ್ ನಾಯಿ ಪಲ್ಯ (26) ಮತ್ತು ಸೆಂಥಿಲ್(42) ಬಂಧಿತರು.
ಆರೋಪಿಗಳು ನೂರುಲ್ಲಾ ಎಂಬಾತ ನಿಂದ ಸರ ಹಾಗೂ ನಗದು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಉತ್ತರ ಭಾರತ ಮೂಲದ ನೂರುಲ್ಲಾ ಮಂಗಳವಾರ ಬೆಳಗ್ಗೆ 11 ಗಂಟೆಗೆ ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ. ಈ ವೇಳೆ ಆಟೋದಲ್ಲಿ ಬಂದ ಆರೋಪಿಗಳು ನೂರುಲ್ಲಾ ಮೇಲೆ ಹಲ್ಲೆ ನಡೆಸಿ ಆತನ ಕುತ್ತಿಗೆಯಲ್ಲಿದ್ದ ರೋಲ್ಡ್‌ಗೋಲ್ಡ್ ಸರ ಮತ್ತು ಬೆಳ್ಳಿಯ ಸರ, 500 ರೂ. ನಗದು ಕಸಿದುಕೊಂಡು ಆಟೋದಲ್ಲಿ ಪರಾರಿ ಯಾಗುತ್ತಿದ್ದರು. ಅದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕೂಗಳತೆ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಗಡಿ ರಸ್ತೆ ಸಂಚಾರ ಠಾಣೆ ಎಎಸ್‌ಐ ರಾಮಚಂದ್ರ ಮತ್ತು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಸಂಧ್ಯಾಗೆ ಮಾಹಿತಿ ನೀಡಿದ್ದಾರೆ.
ಬಳಿಕ ಎಎಸ್‌ಐ ರಾಮಚಂದ್ರ ಆರೋಪಿಗಳ ಆಟೋವನ್ನು ಹಿಂಬಾಲಿಸಿ ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ಆಗ ವಿಜಯ್, ತನ್ನ ಬಳಿಯಿದ್ದ ಸರಗಳನ್ನು ಸೆಂಥಿಲ್‌ಗೆ ಕೈಗೆ ಎಸೆದು ಪರಾರಿಯಾಗುವಂತೆ ಸೂಚಿಸಿದ್ದ. ಆಗ ಕೂಡಲೇ ಕಾರ್ಯಪ್ರವೃತ್ತರಾದ ಮಹಿಳಾ ಕಾನ್‌ಸ್ಟೆàಬಲ್ ಸಂಧ್ಯಾ, ಸೆಂಥಿ ಲ್‌ನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಒಪ್ಪಿಸಿದ್ದಾರೆ.
ಆರೋಪಿಗಳ ಪೈಕಿ ವಿಜಯ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕಳವು, ಹಲ್ಲೆ, ದರೋಡೆ ಪ್ರಕರಣಗಳು ದಾಖಲಾಗಿದ್ದು, ರೌಡಿಪಟ್ಟಿ ತೆರೆಯಲಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಎಎಸ್‌ಐ ರಾಮಚಂದ್ರ ಮತ್ತು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಸಂಧ್ಯಾ ಅವರ ಕರ್ತವ್ಯ ಪ್ರಜ್ಞೆಗೆ ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಶ್ಲಾಘನೆ ವ್ಯಕ್ತಪಡಿಸಿದ್ದು, ಇಬ್ಬರನ್ನು ಪ್ರಶಂಸಿದ್ದಾರೆ.