ಬೆಂಗಳೂರು: ಭವಿಷ್ಯದಲ್ಲಿ ಐಪಿಎಸ್ ಕನಸು ಕಂಡವಳು ಪ್ರೇಮಿಯ ಜತೆ ಸೇರಿ ಸರಗಳ್ಳತನ ಮಾಡಿ ಜೈಲು ಸೇರಿದ್ದಾಳೆ! ಈ ಮೊದಲು ಹೆಲ್ಮೆಟ್ ಧರಿಸಿ ಗಂಡಸರಷ್ಟೇ ಸರ ಅಪಹರಣ ಮಾಡುತ್ತಿದ್ದರು. ಇದೀಗ ಯುವತಿಯೊಬ್ಬಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವ ಉದ್ದೇಶದೊಂದಿಗೆ ತನ್ನ ಪ್ರೇಮಿಯ ಜತೆ ಸೇರಿಕೊಂಡು ಸರಗಳ್ಳತನ ಮಾಡಿ ಚಂದ್ರ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಕುಂಬಳಗೋಡು ಸಮೀಪದ ದೊಡ್ಡ ಆಲದಮರದ ರಾಮೋಹಳ್ಳಿ ನಿವಾಸಿಗಳಾದ ಹರೀಶ್ (22) ಮತ್ತು ಆತನ ಸ್ನೇಹಿತೆ ಕೀರ್ತನಾ (ಹೆಸರು ಬದಲಾಯಿಸಲಾಗಿದೆ) (18) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಮತ್ತೂಬ್ಬನನ್ನು ಬಂಧಿಸಿ, ಆರೋಪಿಗಳಿಂದ 46 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಕಾಲೇಜು ಯುವತಿಯರು ಮತ್ತು ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಕಳವು ಮಾಡುತ್ತಿದ್ದ ಪ್ರೇಮಿ ಗಳು, ಬಳಿಕ ನಗರದ ಕೇರಳ ಮೂಲದ ಫೈನಾನ್ಸ್ ಹಾಗೂ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಲ್ಲಿ ಅಡಮಾನ ಇಟ್ಟು ಹಣ ಸಂಪಾದಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕುಂಬಳಗೋಡು ಠಾಣೆ ಹಾಗೂ ಚಂದ್ರ ಲೇಔಟ್ ಠಾಣೆ ವ್ಯಾಪ್ತಿಯ ನಾಗರಬಾವಿ ವರ್ತುಲ ರಸ್ತೆಗಳು, ಕೆಂಗೇರಿ ಠಾಣೆ ವ್ಯಾಪ್ತಿ ಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.
ಹರೀಶ್ ಕ್ಯಾಬ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ತನ್ನ ಮನೆ ಸಮೀಪದ ಕೀರ್ತನಾಳನ್ನು ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಆತನ ದುಡಿಮೆಯಿಂದ ಜೀವನ ನಡೆಸುವುದು ದುಸ್ತರ ವಾಗಿತ್ತು. ಜತೆಗೆ ಪ್ರಿಯತಮೆಯ ಆಸೆಗಳನ್ನು ಈಡೇರಿಸಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಇಬ್ಬರೂ ಸರಗಳ್ಳತನ ಮಾಡಲು ಸಂಚು ರೂಪಿಸಿದ್ದರು. ಕೆಲ ತಿಂಗಳ ಹಿಂದೆ ಹರೀಶ್ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಜತೆ ಸೇರಿ ಕುಂಬಳಗೋಡು ಸಮೀಪದಲ್ಲಿ ಸರಗಳ್ಳತನ ಮಾಡಿ, ಕೆಂಗೇರಿಯಲ್ಲಿರುವ ಫೈನಾನ್ಸ್ ಒಂದರಲ್ಲಿ ಅಡಮಾನ ಇಟ್ಟಿದ್ದರು. ಅದರಿಂದ ಸಾಕಷ್ಟು ಸಂಪಾದಿಸಿದ್ದರು. ಬಳಿಕ ಅದನ್ನೆ ಪ್ರವೃತ್ತಿಯನ್ನಾಗಿಸಿಕೊಂಡ ಹರೀಶ್, ಕೀರ್ತನಾ ಜತೆ ಸೇರಿಕೊಂಡು ಸರಗಳ್ಳತನಕ್ಕೆ ಇಳಿದಿದ್ದ ಎಂದು ಪೊಲೀಸರು ಹೇಳಿದರು.
ಪ್ರೇಮಿಗಳಂತೆ ಹೋಗಿ ಕೃತ್ಯ: ಹರೀಶ್ ಮತ್ತು ಕೀರ್ತನಾ, ಶಾಲಾ, ಕಾಲೇಜುಗಳು ಮತ್ತು ಖಾಸಗಿ ಕಂಪನಿಗಳ ಸಮೀಪದಲ್ಲಿರುವ ಐಸ್ ಕ್ರೀಂ ಅಂಗಡಿ ಹಾಗೂ ರಸ್ತೆ ಬದಿಯ ಪಾನಿಪುರಿ ವ್ಯಾಪಾರ ಸ್ಥಳಗಳಲ್ಲಿ ಪ್ರೇಮಿಗಳ ಸೋಗಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬರುತ್ತಿದ್ದ ಯುವತಿಯರು ಹಾಗೂ ಮಹಿಳೆಯರ ಚಲನವಲನಗಳ ಮೇಲೆ ನಿಗಾವಹಿಸುತ್ತಿದ್ದ ಆರೋಪಿಗಳು, ಬಳಿಕ ನಡೆದು ಹೋಗುತ್ತಿದ್ದ ಯುವತಿಯರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿದ್ದು, ಬೈಕ್ ನ ಹಿಂಬದಿ ಕುಳಿತಿದ್ದ ಕೀರ್ತನಾ ಸರ ಕಸಿದುಕೊಳ್ಳುತ್ತಿದ್ದಳು. ಬಳಿಕ ಇಬ್ಬರು ಜ್ಞಾನಭಾರತಿ ಕ್ಯಾಂಪಸ್ ಮೂಲಕ ಕುಂಬಳಗೋಡುಗೆ ಪರಾರಿಯಾಗುತ್ತಿದ್ದರು. ಕಳವು ಚಿನ್ನದ ಸರಗಳನ್ನು ಚಿನ್ನಾಭರಣ ಮಳಿಗೆಯೊಂದರಲ್ಲಿ ಅಡಮಾನ ಇಟ್ಟಿದ್ದರು.
ನಾಗರಬಾವಿ ಸಮೀಪದಲ್ಲಿ ಆರೋಪಿಗಳು, ಇಬ್ಬರು ಯುವತಿಯರ ಸರಗಳನ್ನು ಕಸಿದುಕೊಂಡಿದ್ದರು. ಈ ಸಂಬಂಧ ಯುವತಿಯರು ದೂರು ನೀಡಿದ್ದರು. ಆರೋಪಿಗಳ ಕೃತ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗತ್ತು. ಅದರ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಐಪಿಎಸ್ ಮಾಡ್ತೇನೆ; ಸರಿಯಾಗಿ ಮಾತಾಡ್ಸಿ ಸರ್!: ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಕೀರ್ತನಾ, “ನನ್ನೊಂದಿಗೆ ಸರಿಯಾಗಿ ಮಾತನಾಡಿ ಸರ್. ನಾನು ಭವಿಷ್ಯದಲ್ಲಿ ಐಪಿಎಸ್ ಮಾಡಬೇಕೆಂದಿದ್ದೇನೆ. ನನಗೆ ಯಾರೂ ಇಲ್ಲ. ತರಬೇತಿ ಪಡೆಯಲು ಶುಲ್ಕ ಕಟ್ಟಲು ಹಣ ಇಲ್ಲದರಿಂದ ಈ ರೀತಿ ಮಾಡುತ್ತಿದ್ದೇನೆ’ ಎಂದು ಹೇಳುತ್ತಿದ್ದಂತೆ ಒಂದು ಕ್ಷಣ ಅಚ್ಚರಿಗೊಂಡ ಪೊಲೀಸರು, ಕೂಡಲೇ ಆಕೆ ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಕೀರ್ತನಾ, 8ನೇ ತರಗತಿಯಲ್ಲಿ ಅನುತ್ತೀರ್ಣವಾಗಿರುವುದು ಗೊತ್ತಾಗಿದೆ. ಭವಿಷ್ಯದಲ್ಲಿ ತನ್ನ ಪ್ರೇಯಸಿ ಜತೆ ಉತ್ತಮ ಜೀವನ ನಡೆಸಲು ಸರಗಳ್ಳತನವನ್ನು ಪ್ರವೃತ್ತಿಯನ್ನಾಗಿಕೊಂಡಿದ್ದೆ ಎಂದು ಹರೀಶ್ ಕೂಡ ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.