ಬೆಂಗಳೂರು: ಎರಡು ಪ್ರತ್ಯೇಕ ಸರ ಕಳವು ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆ ನಿವಾಸಿ ಮನೋಜ್ ಕುಮಾರ್ (27), ಲಗ್ಗೆರೆ ನಿವಾಸಿಗಳಾದ ರಾಮಕೃಷ್ಣ (37) ಹಾಗೂ ನಾಗೇಶ್ (32) ಬಂಧಿತರು. ಆರೋಪಿಗಳಿಂದ 2.40 ಲಕ್ಷ ರೂ. ಮೌಲ್ಯದ 70 ಗ್ರಾಂ ತೂಕದ 2 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಠಾಣೆ ವ್ಯಾಪ್ತಿಯ ಶ್ರೀಗಂಧನಗರದ ಹೆಗ್ಗನಹಳ್ಳಿಯ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಟ್ಯೂಷನ್‌ನಿಂದ ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಆಗ ಶ್ರೀಗಂಧನಗರದ ಬಾಲಾಜಿ ಅಪಾರ್ಟ್‌ಮೆಂಟ್ ಎದುರು ಹೋಗುವಾಗ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಘಟನಾ ಸ್ಥಳದ ಸುತ್ತ-ಮುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿ ಮನೋಜ್ ಕುಮಾರ್‌ನನ್ನು ಬಂಧಿಸಲಾಗಿದೆ. ಆತನಿಂದ 30 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಇಬ್ಬರು ಆರೋಪಿಗಳ ಬಂಧನ: ಮತ್ತೂಂದು ಪ್ರಕರಣದಲ್ಲಿ ಹೆಗ್ಗನಹಳ್ಳಿ ಕ್ರಾಸ್ ಸಂಜೀವಿನಗರದಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬರೇ ಇರುವಾಗ ಬಾಡಿಗೆ ಕೇಳುವ ನೆಪದಲ್ಲಿ ಹೋದ ಇಬ್ಬರು ಅಪರಿಚಿತರು, ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿ ಏಕಾಏಕಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ರಾಮಕೃಷ್ಣ ಮತ್ತು ನಾಗೇಶ್‌ನನ್ನು ಬಂಧಿಸಿ, 40 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.