ಬೆಂಗಳೂರು: ವೃದ್ಧರನ್ನು ಗುರಿಯಾಗಿಸಿ ಪ್ರಜ್ಞೆ ತಪ್ಪಿಸಿ ಮೈಮೇಲಿದ್ದ ಚಿನ್ನಾಭರಣ ದೋಚುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಕಾರ್ತಿಕ್(37) ಮತ್ತು ಹೊರಮಾವು ನಿವಾಸಿ ಮಂಜುಶ್ರೀ(32)ಬಂಧಿತರು. ಆರೋಪಿಗಳಿಂದ 6.5 ಲಕ್ಷ ರೂ.ನ 115 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಮಲ್ಲೇಶ್ವರದ ಹಳ್ಳಿಮನೆ ಹೋಟೆಲ್ ಹತ್ತಿರದಲ್ಲಿ ಜಗನ್ನಾಥ ಗುಪ್ತ ಎಂಬವರು ಕಾಂಡಿಮೆಂಟ್ಸ್ ಮತ್ತು ಚಾಟ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜಗನ್ನಾಥಗೆ ಆರೋಪಿ ಕಾರ್ತಿಕ್ ಪರಿಚಯವಾಗಿದ್ದು, ಅವರ ವಿಶ್ವಾಸ ಗಳಿಸಿದ್ದಾನೆ.
ಸೆ.22ರಂದು ಮಧ್ಯಾಹ್ನ 12 ಗಂಟೆಯಲ್ಲಿ ಆರೋಪಿ ಟೀ ಕುಡಿಯುವ ಸಲುವಾಗಿ ಜಗನ್ನಾಥ್ ಗುಪ್ತ ಅವರನ್ನು ಕರೆದುಕೊಂಡು ಅಂಗಡಿಯ ಮುಂಭಾಗದಲ್ಲಿರುವ ಟೀ ಅಂಗಡಿಯ ಪಕ್ಕದ ಕಲ್ಲಿನ ಮೇಲೆ ಕೂರಿಸಿ, ಈತನೇ ಟೀ ತೆಗೆದುಕೊಂಡು, ಅವರಿಗೆ ಗೊತ್ತಾಗದ ಹಾಗೇ ನಿದ್ದೆ ಮಾತ್ರೆಯನ್ನು ಬೆರೆಸಿ ಇಬ್ಬರು ಟೀ ಕುಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಜಗನ್ನಾಥ್ ಗುಪ್ತ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಆ ಸಮಯದಲ್ಲಿ ಜಗನ್ನಾಥ ಅವರ ಕತ್ತಿನಲ್ಲಿದ್ದ 35 ಗ್ರಾಂ ತೂಕದ ಡಾಲರ್ ಸಮೇತ ಇದ್ದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ.
ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.