ಕನಕಪುರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನೆದೇವತೆ ಕೆಂಕೆರಮ್ಮನ ದೇವಾ ಲಯದಲ್ಲಿ ಹಾಡುಹಗಲೇ ಖದೀಮನೊಬ್ಬ ಭಕ್ತರ ಸೋಗಿನಲ್ಲಿ ಬಂದು ದೇವಿಯ ಮಾಂಗಲ್ಯ ಸರ ಕಳವು ಮಾಡಿದ್ದಾನೆ.
ನಗರದ ಸಂಗಮ ರಸ್ತೆಯಲ್ಲಿರುವ ಕೆಂಕೆರಮ್ಮನ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ದೇವಿಯ ಕೊರಳಿನಲ್ಲಿದ್ದ ಎಂಟು ಗ್ರಾಂ ಚಿನ್ನದ ಮಾಂಗಲ್ಯ ಹಾಗೂ ಬೆಳ್ಳಿ ಸರ ಕಳ್ಳತನವಾಗಿದೆ. ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಂಕೆರಮ್ಮನ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ ಹಲವಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಅದೇ ರೀತಿ ಕಳೆದ ಸೋಮವಾರ ಕೆಲವು ಭಕ್ತರು ಬೆಳಗ್ಗೆ 8ರ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರು ಸ್ವಲ್ಪ ಹೊತ್ತು ಕುಳಿತಿದ್ದು ಹೋಗುತ್ತಾರೆ ಎಂದು ಕೊಂಡ ದೇವಾಲಯದ ಪ್ರಧಾನ ಅರ್ಚಕ ವಿನಯ್ ಬೆಳಗಿನ ಉಪಹಾರಕ್ಕೆಂದು ದೇವಾಲಯದ ಪಕ್ಕದಲ್ಲಿರುವ ತಮ್ಮ ಮನೆಗೆ ತೆರಳಿದರು.
ಈ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದ ಭಕ್ತರ ಸೋಗಿನಲ್ಲಿ ಬಂದಿದ್ದ ಖದೀಮ ಎಲ್ಲಾ ಭಕ್ತರು ದೇವಾಲಯದಿಂದ ದರ್ಶನ ಪಡೆದು ತೆರಳಿದ ನಂತರ ಯಾರು ಇಲ್ಲದಿರುವ ಸಮಯ ನೋಡಿಕೊಂಡು ಕೆಂಕೆರಮ್ಮ ದೇವಿಯ ಕೊರಳಿನಲ್ಲಿದ್ದ ಎಂಟು ಗ್ರಾಂ ಚಿನ್ನದ ಮಾಂಗಲ್ಯ ಮತ್ತು ಬೆಳ್ಳಿ ಸರ ಕಿತ್ತು ಪರಾರಿಯಾಗಿದ್ದಾನೆ.
ಅರ್ಚಕ ವಿನಯ್ ಬೆಳಗಿನ ಉಪಹಾರ ಮುಗಿಸಿಕೊಂಡು ಬಂದ ನೋಡಿದಾಗ ದೇವಿಯ ಮಾಂಗಲ್ಯ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಭಕ್ತರ ಸೋಗಿನಲ್ಲಿ ಖದೀಮನೊಬ್ಬ ಬಂದು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಅರ್ಚಕ ವಿನಯ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟೀವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.