ಬೆಂಗಳೂರು: ಕಳೆದ 4 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕುಖ್ಯಾತ ಸರಗಳ್ಳ ಹಾಗೂ ಆತನ ಸಹಚರ ಪುಟ್ಟೇನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಮಿಳುನಾಡು ಮೂಲದ ಜೆ.ಪಿ. ನಗರದ ನಿವಾಸಿ ಸಂತೋಷ್ (30), ಆತನ ಸಹಚರ ಅರಕೆರೆ ನಿವಾಸಿ ರವಿ (32) ಬಂಧಿತರು. ಆರೋಪಿ ಸಂತೋಷ್‌ನಿಂದ 1.5 ಕೋಟಿ ರೂ. ಮೌಲ್ಯದ 2 ಕೆ.ಜಿ .510 ಗ್ರಾಂ ತೂಕದ 51 ಚಿನ್ನದ ಸರಗಳು, 2 ದ್ವಿಚಕ್ರವಾಹನ, 2 ಟಾಟಾ ಏಸ್ ಜಪ್ತಿ ಮಾಡಲಾಗಿದೆ.
ಆರೋಪಿಗಳ ಬಂಧನದಿಂದ ಪುಟ್ಟೇನಹಳ್ಳಿ ಸೇರಿ ನಗರದ 32 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 51 ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ .ಆರೋಪಿಗಳಾದ ಸಂತೋಷ್ ಆರ್‌ಟಿಒ ಇಲಾಖೆಯ ವೆಬ್ ಸೈಟ್‌ಗೆ ಹೋಗಿ ತನ್ನ ಪಲ್ಸರ್ ಬೈಕ್‌ನ ಬಣ್ಣ ಹೊಂದಿರುವ ಬೈಕ್‌ಗಳ ನಂಬರ್ ಸಂಗ್ರಹಿಸುತ್ತಿದ್ದ. ಆ ನಂಬರ್‌ಗಳನ್ನು ತನ್ನ ಬೈಕ್‌ಗೆ ಅಳವಡಿಸುತ್ತಿದ್ದ. ಬಳಿಕ ತಾನು ಸರಗಳ್ಳತನ ಮಾಡಲಿರುವ ಏರಿಯಾಗಳನ್ನು ಗುರುತಿಸುತ್ತಿದ್ದ. ತನ್ನ ಟಾಟಾ ಏಸ್‌ನಲ್ಲಿ ಬೈಕ್ ಅನ್ನು ತುಂಬಿ ತಾನು ಸರಗಳ್ಳತನ ಮಾಡಲು ಸಂಚು ರೂಪಿಸಿದ್ದ ಪ್ರದೇಶದಿಂದ 25-30 ಕಿ.ಮೀ ದೂರದಲ್ಲಿ ಟಾಟಾ ಏಸ್ ನಿಲುಗಡೆ ಮಾಡುತ್ತಿದ್ದ.
ಬಳಿಕ ಆ ವಾಹನದಿಂದ ಬೈಕ್ ಹೊರ ತೆಗೆದು ಹೆಲ್ಮೆಟ್ ಧರಿಸಿಕೊಂಡು ಸಂಚು ರೂಪಿಸಿದ ಪ್ರದೇಶಗಳಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ನಡೆಸುತ್ತಿದ್ದ. ಕೃತ್ಯ ಎಸಗಿದ ಬಳಿಕ ನೇರವಾಗಿ ಟಾಟಾ ಏಸ್ ವಾಹನ ನಿಲುಗಡೆ ಮಾಡಿದ ಪ್ರದೇಶಕ್ಕೆ ವಾಪಸ್ಸಾಗಿ ಬೈಕ್ ಅನ್ನು ಟಾಟಾ ಏಸ್‌ನೊಳಗೆ ತುಂಬಿ ಮನೆಗೆ ಹಿಂತಿರುಗುತ್ತಿದ್ದ. ಬೈಕ್‌ನಲ್ಲಿ ಸುತ್ತಾಡುವ ವೇಳೆ, ಊಟ ಮಾಡಲು ಹೋಟೆಲ್‌ಗೆ ಹೋಗುವ ಸಂದರ್ಭದಲ್ಲೂ ಹೆಲ್ಮೆಟ್ ತೆಗೆಯುತ್ತಿರಲಿಲ್ಲ. ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದ ಆರೋಪಿ ಸಂತೋಷ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇನ್ನು ಕದ್ದ ಚಿನ್ನದ ಸರಗಳನ್ನು ತನ್ನ ಸ್ನೇಹಿತ ರವಿಗೆ ಕೊಡುತ್ತಿದ್ದ. ರವಿ ತನ್ನ ಪರಿಚಿತ ಪಾನ್ ಬ್ರೋಕರ್‌ಗೆ ಈ ಚಿನ್ನದ ಸರಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಚಿನ್ನ ವಿಲೇವಾರಿ ಮಾಡಿದ್ದಕ್ಕಾಗಿ ಸಹಚರ ರವಿಗೂ ಒಂದಿಷ್ಟು ಹಣ ಕೊಡುತ್ತಿದ್ದ.
ಸುಳಿವು ನೀಡಿದ ಸಿಸಿ ಕ್ಯಾಮೆರಾ : ಅರಕೆರೆ ಮುಖ್ಯರಸ್ತೆಯ ನಿವಾಸಿ ಲಕ್ಷ್ಮೀದೇವಿ ಜು.4ರಂದು ಮಧ್ಯಾಹ್ನ 1.20ರಲ್ಲಿ ಅರಕೆರೆ ಮೈಕೋಲೇಔಟ್‌ನ ನಂದಿನಿ ಹಾಲಿನ ಬೂತ್‌ನಿಂದ ಹಾಲು ತೆಗೆದುಕೊಂಡು ಸೋದರನ ಜತೆ ಅರಕೆರೆ ಡ್ರೀಮ್ ಡಿಸೈನರ್ ಬೋಟಿಕ್ ಎದುರು ಹೋಗುತ್ತಿದ್ದರು. ಬೈಕ್‌ನಲ್ಲಿ ಲಕ್ಷ್ಮೀದೇವಿಯನ್ನು ಹಿಂಬಾಲಿಸಿಕೊಂಡು ಬಂದ ಆರೋಪಿ ಸಂತೋಷ್, ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಲಪಟಾಯಿಸಿ ಪರಾರಿಯಾಗಿದ್ದ. ಈ ಬಗ್ಗೆ ಲಕ್ಷ್ಮೀದೇವಿ ನೀಡಿದ ದೂರಿನ ಮೇರೆಗೆ ಪುಟ್ಟೇನಹಳ್ಳಿ ಪೊಲೀಸರು ನಗರಾದ್ಯಂತ 150 ಕಿ.ಮೀ.ಗೂ ಹೆಚ್ಚಿನ ಕಡೆ ಸುತ್ತಾಡಿ 900 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಪುಟ್ಟೇನಹಳ್ಳಿಯ ಒಂದು ಸಿಸಿ ಕ್ಯಾಮೆರಾದಲ್ಲಿ ಆರೋಪಿ ಸಂತೋಷ್ ದೇಹದ ಮಾದರಿ, ಹೆಲ್ಮೆಟ್ ಹಾಗೂ ನೀಲಿ ಬಣ್ಣದ ಅಂಗಿ ಧರಿಸಿರುವುದು ಸೆರೆಯಾಗಿತ್ತು. ಜತೆಗೆ ಹೆಲ್ಮೆ ಟ್ ಮೇಲೆಯಿದ್ದ ಬಿಳಿ ಬಣ್ಣದ ಗೆರೆಯನ್ನು ಪೊಲೀಸರು ಗಮನಿಸಿದ್ದರು. ಆ.12ರಂದು ಕೊತ್ತನೂರು ದಿಣ್ಣೆಯ ಬಿಬಿಟಿಸಿ ಬಸ್ ನಿಲ್ದಾಣದ ಬಳಿ ಆರೋಪಿ ಸಂತೋಷ್ ಸುತ್ತಾಡುತ್ತಿರುವ ಬಗ್ಗೆ ಬಂದ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದರು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿಗೂ, ಈತನಿಗೂ ಹೋಲಿಕೆ ಮಾಡಿದಾಗ ಹೋಲಿಕೆಯಾಗಿತ್ತು. ನಂತರ ಸಂತೋಷ್‌ನನ್ನು ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದ.
ಡಿಗ್ರಿ ಪಡೆದಿದ್ದ ಆರೋಪಿ : ಆರೋಪಿ ಸಂತೋಷ್ ಬಿ.ಕಾಂ. ವ್ಯಾಸಂಗ ಮಾಡಿದ್ದ. ಬಳಿಕ ಮನೆಗಳ ಒಳಾಂಗಣ ವಿನ್ಯಾಸ (ಇಂಟಿರಿಯರ್) ಕೆಲಸ ಮಾಡುತ್ತಿದ್ದ. ಆದರೆ, ಅದರಿಂದ ಬರುತ್ತಿದ್ದ ಹಣ ಆತನ ವಿಲಾಸಿ ಜೀವನಕ್ಕೆ ಸಾಲುತ್ತಿರಲಿಲ್ಲ. ಹೀಗಾಗಿ ಸರಗಳ್ಳತನಕ್ಕೆ ಇಳಿದಿದ್ದ. ಕೃತ್ಯದಿಂದ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಆತನ ಕುಟುಂಬಸ್ಥರು ತಮಿಳುನಾಡಿನಲ್ಲಿ ನೆಲೆಸಿದ್ದು, ಆರೋಪಿಯ ಕೃತ್ಯದ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸಂತೋಷ್ ಕಳೆದ 4 ವರ್ಷಗಳಿಂದ ಕೃತ್ಯ ಎಸಗುತ್ತಿದ್ದರೂ, ಇದೇ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಆತನನ್ನು ಪತ್ತೆಹಚ್ಚಲು ಪೊಲೀಸರು ಹಗಲಿರುಳೆನ್ನದೇ ಶ್ರಮ ವಹಿಸಿದ್ದಾರೆ.
-ಪ್ರತಾಪ್ ರೆಡ್ಡಿ, ನಗರ ಪೊಲೀಸ್ ಆಯುಕ್ತ