Advertisement

ಸರ ಕದಿಯಲೆಂದೇ ಮೈಸೂರಿನಿಂದ ಬರುತ್ತಿದ್ದರು!

12:27 PM Nov 24, 2017 | |

ಬೆಂಗಳೂರು: ಮೋಜಿನ ಜೀವನಕ್ಕಾಗಿ ಮೈಸೂರಿನಿಂದ ನಗರಕ್ಕೆ ಬಂದು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮಂಡಿಮೊಹಲ್ಲಾದ ಮಹಮ್ಮದ್‌ ಫ‌ರಾಜ್‌ ಖಾನ್‌ ಅಲಿಯಾಸ್‌ ದೇವಿ (25), ನೂರ್‌ ಅಹಮದ್‌ (26), ಕನಕನಗರದ ಸೈಯದ್‌ ಹಬೀಬ್‌ (21) ಮತ್ತು ಅಂಜನಾಪುರದ ಸೈಯದ್‌ ತಬ್ರೇಜ್‌ (25) ಬಂಧಿತರು. ಇವರಿಂದ 14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ.

Advertisement

ಸರ ಕದಿಯಲೆಂದೇ ಮೈಸೂರಿನಿಂದ ಬೆಂಗಳೂರಿಗೆ ತಂಡ ಕಟ್ಟಿಕೊಂಡು ಬರುತ್ತಿದ್ದ ಈ ನಾಲ್ವರು ಆರೋಪಿಗಳು, ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಸರ ಕದಿಯುತ್ತಿದ್ದರು. ನಂತರ ಕದ್ದ ಸರಗಳನ್ನು ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರ ಸೇರಿದಂತೆ ಬೇರೆ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 23 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಮೋಜಿನ ಜೀವನ ನಡೆಸುತ್ತಿದ್ದ ಮೊಹಮ್ಮದ್‌ ಫ‌ರಾಜ್‌ಖಾನ್‌, ಮತ್ತೂಬ್ಬ ಆರೋಪಿ ನೂರ್‌ ಅಹಮದ್‌ ಜತೆ ನಗರಕ್ಕೆ ಬಂದು ಕೋಣನಕುಂಟೆಯ ಎಂಕೆಎಸ್‌. ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಇನ್ನಿಬ್ಬರು ಆರೋಪಿಗಳನ್ನು ಸರಗಳ್ಳತನಕ್ಕಾಗಿ ತಮ್ಮ ಜತೆಯಲ್ಲಿರಿಸಿಕೊಂಡಿದ್ದರು. 

ಕುಮಾರಸ್ವಾಮಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಸರಗಳ್ಳತನ ಪ್ರಕರಣದ ಪತ್ತೆಗಾಗಿ ಇನ್ಸ್‌ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಸರಗಳ್ಳತನ ಪ್ರಕರಣದಲ್ಲಿ ಸಣ್ಣ ಸುಳಿವು ಸಿಕ್ಕಿರುವುದನ್ನೇ ಬೆನ್ನತ್ತಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ನಗರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣ ಮತ್ತು ಬೇರೆ ಜಿಲ್ಲೆಗಳಲ್ಲಿ ನಡೆದಿದ್ದ ಸರಗಳ್ಳತನ ಒಟ್ಟು 14 ಸರಗಳ್ಳತನ ಪ್ರಕರಣ ಮತ್ತು 1 ಡಕಾಯಿತಿ ಪ್ರಕರಣ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

ನಾಲ್ಕು ಜನರ ಆರೋಪಿಗಳ ತಂಡ ಎರಡು ತಂಡಗಳಾಗಿ ನಗರದ ಕುಮಾರಸ್ವಾಮಿ ಲೇಔಟ್, ಸುಬ್ರಹ್ಮಣ್ಯಪುರ, ಗಿರಿನಗರ, ಬಸವನಗುಡಿ ಇತರೆಡೆಗಳಲ್ಲಿ ಬೈಕ್‌ನಲ್ಲಿ ಸುತ್ತಾಡುತ್ತಿದ್ದರು. ಒಂಟಿ ಮಹಿಳೆಯರು ಹೆಚ್ಚಾಗಿ ಒಡಾಡುವ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಮಹಿಳೆಯರನ್ನು ಕಂಡರೆ ಕ್ಷಣಾರ್ಧದಲ್ಲಿ ತಮ್ಮ ಕೈಚಳಕ ತೋರಿ ಪರಾರಿಯಾಗುತ್ತಿದ್ದರು ಎಂದು ಅವರು ವಿವರಿಸಿದರು.

Advertisement

ನಗರದ ಹೊರ ಜಿಲ್ಲೆಗಳಾದ ಮಂಡ್ಯ, ಮೈಸೂರು, ನಂಜನಗೂಡು, ಚಾಮರಾಜನಗರಗಳಲ್ಲೂ ಆರೋಪಿಗಳು ಬೈಕ್‌ನಲ್ಲಿ ಸುತ್ತಾಡುತ್ತಾ ಮಹಿಳೆಯರ ಸರ ಕಸಿದು ಪರಾರಿಯಾಗಿರುವ ಬಗ್ಗೆ ಆಯಾ ಪ್ರದೇಶದ ಠಾಣಾ ವ್ಯಾಪ್ತಿಯಲ್ಲಿ ದೂರುಗಳು ದಾಖಲಾಗಿವೆ. ಕಳವು ಮಾಡಿದ ಸರಗಳನ್ನು ಮಂಡ್ಯ ಮತ್ತು ಮೈಸೂರಿನಲ್ಲಿ ಮಾರಾಟ ಮಾಡಿ ಅಥಾವ ಅಡವಿಟ್ಟು ಮತ್ತೆ ನಗರಕ್ಕೆ ಬಂದು ಸಭ್ಯರಂತೆ ವರ್ತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿದ್ದು ಹೇಗೆ?: ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಲೇಔಟ್‌ನ ಇಸ್ರೋ ಪಾರ್ಕ್‌ ಬಳಿ ಇಬ್ಬರು ಆರೋಪಿಗಳು ಅನುಮಾನ್ಪದವಾಗಿ ಓಡಾಡುತ್ತಿದ್ದರು. ಅಪರಾಧ ವಿಭಾಗದ ಪೇದೆಗಳನ್ನು ಕಂಡು ಪರಾರಿಯಾಗಲು ಯತ್ನಿಸಿದರು. ಕೂಡಲೇ ಬೆನ್ನತ್ತಿದ್ದ ಪೇದೆಗಳು ಆರೋಪಿಗಳನ್ನು ವಿಚಾರಿಸಿದಾಗ ನಕಲಿ ವಿಳಾಸ ತಿಳಿಸಿದ್ದಾರೆ. ಬಳಿಕ ಗುರುತಿನ ಚೀಟಿ ಇತರೆ ದಾಖಲೆಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಕೂಡಲೇ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಸರಕಳವು ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next