ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ಕೈಯಲ್ಲಿ ನಕಲಿ ವಾಕಿಟಾಕಿ ಹಿಡಿದು 50 ವರ್ಷ ವಯೋ ಮಾನದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಂಡು ಸರಕಳವು ಮಾಡುತ್ತಿದ್ದ ಕುಖ್ಯಾತ ಸರಕಳ್ಳ ಚಂದ್ರಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸೈಯದ್ ಅಬೂಬಕರ್ ಬಂಧಿತ ಆರೋಪಿ. ಆರೋಪಿ ಸೈಯದ್ ಬಂಧನದಿಂದ ಸುಮಾರು 35ಕ್ಕೂ ಹೆಚ್ಚು ಸರಗಳವು ಪ್ರಕರಣಗಳು ಬಯಲಿಗೆ ಬಂದಿದ್ದು 40 ಲಕ್ಷಕ್ಕೂ ಹೆಚ್ಚು ರೂ.ಮೌಲ್ಯದ ಸರಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ. ಜತೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸರಗಳವು ನಡೆಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದಾರೆ.
ನಾಗರಬಾವಿ ಹೊರವರ್ತುಲ ರಸ್ತೆ, ಇನ್ನಿತರೆ ರಸ್ತೆಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ನಕಲಿ ವಾಕಿಟಾಕಿಯನ್ನು ಹಿಡಿದುಕೊಂಡು ಪೊಲೀಸರಂತೆ ಸಂಚರಿಸುತ್ತಿದ್ದ ಆರೋಪಿ ಸೈಯದ್, ಸುಮಾರು 50 ವರ್ಷ ವಯೋಮಾನದ ಮಹಿಳೆಯರು ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ಅವರ ಬಳಿ ತೆರಳುತ್ತಿದ್ದ. ಈ ದಾರಿಯಲ್ಲಿ ಸರಗಳ್ಳತನ ನಡೆದಿದೆ. ನೀವು ಹೀಗೆಲ್ಲ ಓಡಾಡಬಾರದು ನಿಮ್ಮ ಸರವನ್ನು ಬಿಚ್ಚಿ ಬ್ಯಾಗ್ ನಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡುತ್ತಿದ್ದ.
ಈತನನ್ನು ಪೊಲೀಸ್ ಎಂದು ನಂಬಿ ಮಹಿಳೆಯರು ಸರಬಿಚ್ಚಿ ಬ್ಯಾಗ್‌ಗೆ ಹಾಕಿಕೊಳ್ಳುವಾಗ ಸಹಾಯ ಮಾಡುವ ನೆಪದಲ್ಲಿ ಪಡೆದುಕೊಂಡು ಕೆಲವೇ ಕ್ಷಣಗಳಲ್ಲಿ ಬೈಕ್‌ಹತ್ತಿಕೊಂಡು ಪರಾರಿಯಾಗುತ್ತಿದ್ದ. ಆರೋಪಿಗೆ ಪೊಲೀಸ್ ಸಮವಸ್ತ್ರ ಯಾರು ಓದಗಿಸಿದರು, ಇನ್ನೂ ಹಲವರ ತಂಡ ಕಟ್ಟಿಕೊಂಡಿದ್ದಾನೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇಬ್ಬರ ಸರ ಕಸಿದ ದುಷ್ಕರ್ಮಿ: ಕೇವಲ ಅರ್ಧ ಗಂಟೆಯಲ್ಲಿ ಇಬ್ಬರು ಮಹಿಳೆಯರ ಸರ ಕದ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ದಕ್ಷಿಣ ವಿಭಾಗದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಶ್ರೀನಿವಾಸ ನಗರದ 4ನೇ ಮುಖ್ಯರಸ್ತೆಯ 2ನೇ ತಿರುವಿನ ನಿವಾಸಿ ಜಯಲಕ್ಷ್ಮಿ ಎಂಬುವವರು ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ತರಕಾರಿ ತೆಗೆದುಕೊಂಡು ರಸ್ತೆಬದಿ ನಡೆದುಕೊಂಡು
ಹೋಗುತ್ತಿದ್ದಾಗ ಪಲ್ಸರ್ ಬೈಕ್‌ನಲ್ಲಿ ಹಿಂಬಾಲಿಸಿ ದುಷ್ಕರ್ಮಿ ಅವರ ಕೊರಳಿನಲ್ಲಿದ್ದ ಸರಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದಾದ ಬಳಿಕ 30 ನಿಮಿಷಗಳಲ್ಲಿ ಬನಶಂಕರಿ 3ನೇ ಹಂತದ ಬಾಲಾಜಿ ಲೇಔಟ್‌ನ 2ನೇ ತಿರುವಿನ ನಿವಾಸಿ ಶಾರದಾ ಎಂಬುವವರ ಮನೆಮುಂದೆ ನಿಂತಿದ್ದಾಗಲೇ ಸರಕಿತ್ತುಕೊಂಡು ಪರಾರಿಯಾಗಿದ್ದ. ಹನುಮಂತನಗರದಲ್ಲಿ ಜಯಲಕ್ಷ್ಮಿ ಅವರ ಸರ ಕಿತ್ತ ದುಷ್ಕರ್ಮಿಯೇ ಆ ನಂತರ ಶಾರದಾ ಅವರ ಸರ ಕಿತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಎರಡೂ ಘಟನೆಗಳ ಬಗ್ಗೆ ಪ್ರತ್ಯೇಕ ದೂರು ದಾಖಲಿಸಿಕೊಂಡಿರುವ ಹನುಮಂತನಗರ ಹಾಗೂ ಸಿ.ಕೆ ಅಚ್ಚುಕಟ್ಟು ಠಾಣೆ ಪೊಲೀಸರು, ಘಟನಾ ಸ್ಥಳಗಳ ಸಿಸಿಟಿವಿ ಪೂಟೇಜ್ ರಿಶೀಲಿಸಿದ್ದು ದುಷ್ಕರ್ಮಿ ಬಂಧನಕ್ಕೆ ಬಲೆಬೀಸಿದ್ದಾರೆ.