Advertisement

ರಾಜಧಾನಿಯಲ್ಲಿ  ಸರಗಳ್ಳರ ಕೈಚಳಕ: ನಾಲ್ಕು ಕಡೆ ಕಳವು

12:46 PM Aug 10, 2017 | Team Udayavani |

ಬೆಂಗಳೂರು: ಬೆಂಗಳೂರು ನಗರದ ಪಶ್ಚಿಮ ಮತ್ತು ಉತ್ತರ ವಿಭಾಗದ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರು ತಮ್ಮಕೈಚಳಕ
ತೋರಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 200 ಗ್ರಾಂ ತೂಕದ ನಾಲ್ಕು ಸರಗಳನ್ನು ಕಸಿದು ಪರಾರಿಯಾಗಿದ್ದಾರೆ.
ರಾಜರಾಜೇಶ್ವರಿನಗರದ ರಾಘವೇಂದ್ರ ಮಠದ ಬಳಿ ಬುಧವಾರ ಬೆಳಗ್ಗೆ 7 ಗಂಟೆಗೆ ಯೋಗ ಶಾಲೆಗೆ ಹೋಗುತ್ತಿದ್ದ ಶಾಂತಲಕ್ಷಿ(63) ಎಂಬುವರನ್ನು ಆಕ್ಟೀವಾ ಹೊಂಡಾದಲ್ಲಿ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು 70 ಗ್ರಾಂ ಸರ ಕಸಿದಿದ್ದಾರೆ. ಚಂದ್ರಲೇಔಟ್‌ ಠಾಣಾ ವ್ಯಾಪ್ತಿಯ ಮಾನಸ ನಗರ ನಿವಾಸಿ ಗೌರಮ್ಮ ಎಂಬುವರು ಗಾರ್ಮೆಂಟ್ಸ್‌ ಕೆಲಸ ಮುಗಿಸಿಕೊಂಡು ಮಂಗಳವಾರ ರಾತ್ರಿ 8.30ರ ವೇಳೆಯಲ್ಲಿ ಮನೆಗೆ ವಾಪಸ್‌ ಬರುವಾಗ ಬೈಕ್‌ನಲ್ಲಿ ಹಿಂಬಾಲಿಸಿದ ಕಳ್ಳರು ವಿಳಾಸ ಕೇಳುವ ನೆಪದಲ್ಲಿ 20 ಗ್ರಾಂ ಸರ ಕಿತ್ತು ಪರಾರಿಯಾಗಿದ್ದಾರೆ. ಆರ್‌ಎಂಸಿ ಯಾರ್ಡ್‌ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ 10 ಗಂಟೆಗೆ ದಿಚಕ್ರ ವಾಹನದಲ್ಲಿ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ದುಷ್ಕರ್ಮಿಗಳು ಅಪಾರ್ಟ್‌ಮೆಂಟ್‌ನಿಂದ ಹೊರಬಂದಿದ್ದ ಜಯಲಕ್ಷ್ಮೀ ಎಂಬುವರ 70 ಗ್ರಾಂ ತೂಕದ ಸರ ಕಸಿದು ಕೊಂಡಿದ್ದಾರೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಸೊಸೆಯನ್ನು ಕರೆತರಲು ಜಯಲಕ್ಷ್ಮಿಅವರು
ಅಪಾರ್ಟ್‌ಮೆಂಟ್‌ನಿಂದ ಹೊರಬಂದಿದ್ದರು. ಇನ್ನೂ ಆರ್‌.ಟಿ.ನಗರ ವ್ಯಾಪ್ತಿಯ ಗಿಡ್ಡಪ್ಪ ಬ್ಲಾಕ್‌ ನಿವಾಸಿ ಸವಿತಾ ಎಂಬುವರು ಮಂಗಳ 
ವಾರ ಮಧ್ಯಾಹ್ನ 3 ಗಂಟೆಯಲ್ಲಿ ಶಾಲೆಯಿಂದ ಮಗುವನ್ನು ಕರೆದುಕೊಂಡು ಬರುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ಇಬ್ಬರು ಬೈಕ್‌
ಸವಾರರು ಗಮನ ಬೇರೆಡೆ ಸೆಳೆದು 50 ಗ್ರಾಂ ತೂಕದ ಸರ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ನಾಲ್ಕು ಠಾಣೆಯಲ್ಲಿ
ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಕೃತ್ಯದ ಮಾದರಿ ಗಮನಿಸಿದರೆ ಒಂದೇ ತಂಡ ಕಳ್ಳತನ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಸರಗಳ್ಳತನ ವಿರುದ್ಧ ಜಾಗೃತಿ ಮೂಡಿಸಲು “ಡೋರ್‌ ಟು ಡೋರ್‌’ ಅಭಿಯಾನ
ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಒಂದೆಡೆ ಒಬ್ಬಂಟಿಮಹಿಳೆಯರು ರಸ್ತೆಯಲ್ಲಿ ಓಡಾಡುವುದು
ಕಷ್ಟಕರವಾಗಿದ್ದರೆ, ಮತ್ತೂಂದೆಡೆ ಈ ಕೃತ್ಯವೆಸಗುವ ದುಷ್ಕರ್ಮಿಗಳನ್ನು ಹಿಡಿಯುವುದು ಸಹ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಉತ್ತರ ವಿಭಾಗ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಹೊಸ ಅಭಿಯಾನ ಆರಂಭಿಸಿದ್ದಾರೆ. ಎಲ್ಲೆಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿವೆಯೇ ಅಂತಹ ಸ್ಥಳಗಳಲ್ಲಿ “ಡೋರ್‌ ಟು ಡೋರ್‌’ ಅಭಿಯಾನ ನಡೆಸುತ್ತಿದ್ದಾರೆ. ಮನೆ, ಮನೆಗೆ ಮತ್ತು ಸಾರ್ವಜನಿಕ ಸ್ಥಳಕ್ಕೆ ತೆರಳಿ ಮಹಿಳೆಯರು, ವೃದ್ಧರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ಯಶವಂತಪುರ, ನಂದಿನಿಲೇಔಟ್‌, ಮಹಾಲಕ್ಷ್ಮೀ ಲೇಔಟ್‌, ಆರ್‌.ಎಂ.ಸಿ ಯಾರ್ಡ್‌, ಮಲ್ಲೇಶ್ವರ, ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಕರಪತ್ರಗಳನ್ನು ವಿತರಿಸಿದರು. ಅಲ್ಲದೇ
ಮಹಿಳಾ ಸಿಬ್ಬಂದಿ ಮೂಲಕ ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಉದ್ಯಾನ, ಯೋಗಾಸನ ಕೇಂದ್ರ, ಶಾಲಾ ಕಾಲೇಜು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸರಗಳ್ಳರದಿಂದ ಎಚ್ಚರಿಕೆ ವಹಿಸುವದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
“ಆಭರಣ ಪ್ರದರ್ಶನ ಮಾಡಬಾರದು. ಹಾಗೇ ಮಾಡುವುದರಿಂದ ಸರಗಳ್ಳರಿಗೆ ಅವಕಾಶ ತೋರಿಸಿಕೊಟ್ಟಂತಾಗುತ್ತದೆ. ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ನಮ್ಮ-100ಗೆ ಕರೆಮಾಡಬೇಕು. ಒಂಟಿಯಾಗಿ ಓಡಾಡುವುದಕ್ಕಿಂತ ಜತೆಯಾಗಿ ಓಡಾಡುವುದು ಒಳಿತು. ವಾಯುವಿಹಾರಕ್ಕೆ ನೆರಹೊರೆಯವರ ಜತೆ ಹೋಗಬೇಕು ಎಂದು ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next