Advertisement

ರಾಜಧಾನಿಯಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ

06:33 AM Feb 10, 2019 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಪುನಃ ಬ್ಲ್ಯಾಕ್‌ ಪಲ್ಸರ್‌ ಸದ್ದು ಆರಂಭವಾಗಿದ್ದು ಸರಗಳ್ಳರು ಸಕ್ರಿಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಕೇವಲ ಅರ್ಧಗಂಟೆಯಲ್ಲಿ ಮೂವರು ಮಹಿಳೆಯರ ಸರಗಳವು ನಡೆದಿದೆ.

Advertisement

ಈ ಕುರಿತು ಪಶ್ಚಿಮ ವಿಭಾಗದಲ್ಲಿ ಎರಡು ಪ್ರಕರಣ ಹಾಗೂ ದಕ್ಷಿಣ ವಿಭಾಗದಲ್ಲಿ ಒಂದು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ. ಒಂದೇ ತಂಡ ಮೂರು ಕೃತ್ಯಗಳನ್ನು ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಫೆ.8ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಚಾಮರಾಜಪೇಟೆ ಐದನೇ ಕ್ರಾಸ್‌ ಬಳಿ ಮಾಧ್ವ ಮಠಕ್ಕೆ ರೂಪಾ ಜೋಶಿ (65) ಎಂಬುವವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಈ  ಪೈಕಿ ಒಬ್ಟಾತ ಬೈಕ್‌ನಿಂದ ಇಳಿದು ಸುನಿತಾ ಎಂದರೆ ಯಾರು ಎಂದು ರೂಪಾ ಅವರನ್ನು ಪ್ರಶ್ನಿಸಿದ್ದಾರೆ.

ನನಗೆ ಗೊತ್ತಿಲ್ಲ ಎಂದು ರೂಪಾ ಅವರು ಹೇಳುತ್ತಿರುವಾಗಲೇ ಅವರ ಕುತ್ತಿಗೆಗೆ ಕೈ ಹಾಕಿದ ದುಷ್ಕರ್ಮಿ 25ರಿಂದ ಮೂವತ್ತು ಗ್ರಾಂ ತೂಕದ ಚಿನ್ನದ ಸರ ಹಾಗೂ ಚಂದ್ರಹಾರ ಕಿತ್ತುಕೊಂಡು ಬೈಕ್‌ ಹತ್ತಿ ಪರಾರಿಯಾಗಿದ್ದಾನೆ. ಈ ಕುರಿತು ರೂಪಾ ಅವರ ಪತಿ ತಿರುಪತಿ ಜೋಶಿ ಅವರು ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

9.15ರ ಸುಮಾರಿಗೆ ಕಸ್ತೂರ ಬಾ ನಗರಕ್ಕೆ ಆಗಮಿಸಿರುವ ಚೋರರು ಸ್ಕೂಟಿ ನಿಲ್ಲಿಸಿ ಪೋನ್‌ನಲ್ಲಿ ಮಾತನಾಡುತ್ತಿದ್ದ ಸರಸ್ವತಿ (52)  ಎಂಬುವವರ ಕುತ್ತಿಗೆಗೆ ಕೈ ಹಾಕಿದ್ದಾರೆ. ಅವರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಸರಸ್ವತಿ ಅವರ ತೀವ್ರ ಪ್ರತಿರೋಧದ ನಡುವೆಯೂ 15 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾರೆ.

Advertisement

9.30ರ ಸುಮಾರಿಗೆ ವಿಜಯನಗರಕ್ಕೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 5ನೇ ಮುಖ್ಯ ರಸ್ತೆಯಲ್ಲಿ ವಸುಮತಿ (57) ಎಂಬುವವರನ್ನು ಹಿಂಬಾಲಿಸಿದ್ದಾರೆ. ಒಬ್ಬ ದುಷ್ಕರ್ಮಿ ವಸುಮತಿ ಸಮೀಪ ತೆರಳಿ, ದಾರಿಯಲ್ಲಿ ಯಾರೂ ಓಡಾಡದಿದ್ದನ್ನು ಗಮನಿಸಿ ಕೆಲವೇ ಕ್ಷಣಗಳಲ್ಲಿ ವಸುಮತಿ ಅವರ ಕೊರಳಿನಲ್ಲಿದ್ದ  50 ಗ್ರಾಂ ತೂಕದ ಸರ ಕಿತ್ತುಕೊಂಡು ಬೈಕ್‌ ಹತ್ತಿ ಪರಾರಿಯಾಗಿದ್ದಾರೆ. 

ಕೆಳಗೆ ಬೀಳಿಸಿ ಸರ ಎಳೆದಾಡಿದ ದುಷ್ಕರ್ಮಿ!: ದುಷ್ಕರ್ಮಿಯ ಹಠಾತ್‌ ಕೃತ್ಯದ ನಡುವೆಯೂ 100 ಗ್ರಾಂ ಚಿನ್ನದ ಸರ ಕಾಪಾಡಿಕೊಳ್ಳುವಲ್ಲಿ ಸರಸ್ವತಿ ಅವರು ಯಶಸ್ವಿಯಾಗಿದ್ದಾರೆ. ಏಕಾಏಕಿ ಕುತ್ತಿಗೆಗೆ ಕೈ ಹಾಕಿದ ದುಷ್ಕರ್ಮಿ ನಿರ್ದಾಕ್ಷಿಣ್ಯವಾಗಿ ಸರ ಕಿತ್ತುಕೊಳ್ಳಲು ಯತ್ನಿಸಿದ ಎಂದು ಸರಸ್ವತಿ ಘಟನೆಯ ವಿವರನ್ನು ಉದಯವಾಣಿ ಜತೆ ಹಂಚಿಕೊಂಡರು.

ಸ್ಕೂಟಿ ತೆಗೆದುಕೊಂಡು ಮನೆಯಿಂದ ಸ್ವಲ್ಪ ದೂರ ಹೋಗಿದ್ದ ಪೋನ್‌ ಬಂದಿದ್ದರಿಂದ ರಸ್ತೆಬದಿ ನಿಲ್ಲಿಸಿ ಮಾತನಾಡುತ್ತಿದ್ದೆ. ಹಿಂದಿನಿಂದ ಯಾರೊ ಕುತ್ತಿಗೆ ಮೇಲೆ ಕೈ ಇಟ್ಟಂತಾಗಿ ನಿಂತಾಗ  ಸುಮಾರು 25 ವಯೋಮಾನದ ಯುವಕ ಸರ ಹಿಡಿದುಕೊಂಡ, ಕೂಡಲೇ ಮೊಬೈಲ್‌ ಬಿಟ್ಟು ಎರಡೂ ಸರಗಳನ್ನು  ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡೆ.

ಆದರೆ, ದುಷ್ಕರ್ಮಿ ಬಲವಾಗಿ ಎಳೆದಾಡಿದ್ದರಿಂದ ಗಾಡಿಯಿಂದ ಕೆಳಗೆ ಬಿದ್ದಿ ಎಷ್ಟೇ ಪ್ರಯತ್ನಿಸಿದರೂ 15 ಗ್ರಾಂ ಚಿನ್ನ ಕಿತ್ತಕೊಂಡ, 100 ಗ್ರಾಂ ಚಿನ್ನದ ಸರಕ್ಕೆ ಎಳೆದಾಡುತ್ತಿದ್ದಾಗಲೇ ಪರಿಚಯದವರು ಸ್ಥಳಕ್ಕೆ ಬಂದರು. ಆರೋಪಿ ಓಡಿ ಹೋಗಿ ದೂರದಲ್ಲಿ ನಿಂತಿದ್ದ ಸಹಚರನ ಪಲ್ಸರ್‌ ಬೈಕ್‌ ಹತ್ತಿ ಪರಾರಿಯಾದ. ಒಂದು ಚೈನ್‌ ಉಳಿದುಕೊಂಡಿತು. ಆತನಿಂದ ಚೈನ್‌ ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನದಿಂದ ಕುತ್ತಿಗೆಯಲ್ಲಿ ಸರದ ಮಾರ್ಕ್‌ ಬಿದ್ದಿದೆ ಎಂದು ಬೇಸರವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next