Advertisement

ದಾಳಿಂಬೆ ಬೆಳೆಗಾರರಿಗೆ ಕೋವಿಡ್ ಕಂಟಕ

12:12 PM Apr 16, 2020 | Naveen |

ಚಡಚಣ: ಕೋವಿಡ್ ಮಹಾಮಾರಿಗೆ ದೇಶ ಸಂಪೂರ್ಣ ಸ್ತಬ್ದವಾಗಿರುವುದರಿಂದ ದಾಳಿಂಬೆ ಬೆಳೆದ ರೈತನ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬರಗಾಲಕ್ಕೆ ಹೆಸರಾದ ವಿಜಯಪುರ ಜಿಲ್ಲೆಯಲ್ಲಿ ಸಾಲಸೂಲ ಮಾಡಿ ಬೆಳೆದಿರುವ ದಾಳಿಂಬೆ ಮಾರಾಟ ಮಾಡಲಾಗದೇ ರೈತರು ಕಂಗಾಲಾಗಿದ್ದಾರೆ.

Advertisement

ಚಡಚಣ ತಾಲೂಕಿನ ಜಿಗಜೇವಣಿ ಗ್ರಾಮದ ಸಿದ್ದರಾಮ ಅಳ್ಳಿಮಳ , ಮಲ್ಲಪ ಅಳ್ಳಿಮಳ, ಮಲ್ಲಿಕಾರ್ಜುನ ಕಾಪಸೆ, ಗುರಪ್ಪ ಕುಂಬಾರ ಹಾಗೂ ಶ್ರೀಶೈಲ್‌ ಕುಂಬಾರ 5 ಎಕರೆ ದಾಳಿಂಬೆ ಬೆಳೆದಿದ್ದಾರೆ. ಬೆಳೆದು ನಿಂತ ದಾಳಿಂಬೆ ಮಾರಾಟವಾಗದೆ ರೈತರು ಆರ್ಥಿಕ ಸಂಕಷ್ಟಕ್ಕಿಡಾಗಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳ್ಳುವವರಿಗೆ ಕರೆ ಮಾಡಿ ಕೇಳಿದರೂ ಕೊರೊನಾದಿಂದಾಗಿ ಮಾರಾಟ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ನಿಮ್ಮ ದಾಳಿಂಬೆ ಮಾರಾಟ ಮಾಡುವದಾದರು ಹೇಗೆ ಎಂದು ಪ್ರಶ್ನಿಸುತ್ತಾರೆ ಎಂಬುದು ರೈತರ ಅಳಲು. ಗ್ರಾಮೀಣ ಬ್ಯಾಂಕ್‌ದಿಂದ ತಲಾ 6 ಲಕ್ಷ ಸಾಲ ಮಾಡಿ ಇಬ್ಬರೂ ದಾಳಿಂಬೆ ಬೆಳೆದಿದ್ದೇವೆ. ಹೊಲದಲ್ಲಿರುವ ಬಾವಿ ಹಾಗೂ ಕೊಳವೆ ಬಾವಿ ಬತ್ತಿ ಬರಿದಾಗಿದ್ದರಿಂದ ಬೇರೆ ಕಡೆಗಳಿಂದ ಪ್ರತಿ ಟ್ಯಾಂಕರ್‌ಗೆ 700 ರೂ. ನಂತೆ ವೆಚ್ಚಮಾಡಿ ಬೆಳೆಗಳಿಗೆ ನೀರುಣಿಸುವಂತಾಗಿದೆ. ಪ್ರತಿ ಎಕರೆಗೆ 3 ಟನ್‌ ಗೂ ಅಧಿ ಕ ಬೆಳೆ ಬಂದಿದ್ದು, ಇನ್ನೇನು ಮಾರಾಟ ಮಾಡಿ ಸಾಲದಿಂದ ಮುಕ್ತಿ ಹೊಂದುತ್ತೇವೆ ಎನ್ನುವಷ್ಟರಲ್ಲಿ ಮಹಾಮಾರಿ ಕೋವಿಡ್ ವಕ್ಕರಿಸಿದ್ದು, ಮಾರಾಟ ಸಂಪೂರ್ಣ ಸ್ತಬ್ಧವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಸಾಲದಿಂದ ಮುಕ್ತಿ ಹೊಂದುವ ಚಿಂತೆ ನಮ್ಮಲ್ಲಿ ಕಾಡತೊಡಗಿದೆ ಎಂದು ಅಳಲು ತೋಡಿಕೊಂಡರು. ಈ ಭಾಗದ ರೈತರು ಅನುಭವಿಸುವ ತೊಂದರೆ ಅರಿತು, ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿ  ಗಳು ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕೋವಿಡ್ ನಿಂದ ನಾವು ಬೀದಿಗೆ ಬಂದಿದ್ದೇವೆ. ಹಣಕೊಟ್ಟು ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸಿ ಮಕ್ಕಳಂತೆ ಪೋಷಿಸುತ್ತಿದ್ದು, ಸಕಾಲದಲ್ಲಿ ಬೆಳೆದ ಬೆಳೆ ಮಾರಾಟವಾಗಿದ್ದರೆ ಸುಮಾರು 8 ಲಕ್ಷ ಲಾಭವಾಗುತ್ತಿತ್ತು. ಮಾಡಿದ ಸಾಲದಿಂದ ಮುಕ್ತಿಹೊಂದುತ್ತಿದ್ದೇವು. ಆದರೆ, ಬೆಳೆದ ಬೆಳೆ ಮಾರಾಟವಾಗದೇ ಇರುವುದರಿಂದ ಮುಂದೆ ಹೇಗೆ ಎಂಬುದು ಅರ್ಥವಾಗುತ್ತಿಲ್ಲ.
ಸಿದ್ಧರಾಮ ಅಳ್ಳಿಮಳ,
ಜಿಗಜೇವಣಿ ಗ್ರಾಮದ ರೈತ.

ಕೋವಿಡ್ ಮುಂಜಾಗ್ರತಾ ಕ್ರಮಕ್ಕೆ ದೇಶವೇ ಲಾಕ್‌ಡೌನ್‌ ಆಗಿರುವ ಪರಿಣಾಮ ರೈತರ ಬೆಳೆದ ಬೆಳೆ ಸಕಾಲದಲ್ಲಿ ಮಾರಾಟವಾಗದೆ ಸಮಸ್ಯೆಗಳಾಗಿವೆ. ನಿಮ್ಮ ಬೆಳೆ ಮಾರಾಟಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಜಿಲ್ಲಾ ತೋಟಗಾರಿಕೆ ಇಲಾಖೆ ಸಂಪರ್ಕಿಸಬೇಕು. ಅಧಿಕಾರಿಗಳು ಸ್ಪಂದಿಸದಿದ್ದರೆ ನಾನು ರೈತರಿಗೆ ಅನಕೂಲ ಮಾಡಿ ಕೊಡುತ್ತೇನೆ.
ಡಾ| ದೇವಾನಂದ ಚವ್ಹಾಣ, ಶಾಸಕರು

ಸರ್ಕಾರ ರೈತರು ಬೆಳೆದ ಹಣ್ಣು ಖರೀದಿಸಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿದೆ. ರೈತರು ನೇರವಾಗಿ ಎಪಿಎಂಸಿಗಳಿಗೆ ತರು ಸಹ ಸೂಕ್ತ ವ್ಯವಸ್ಥೆ ಇದ್ದು, ಹೆಚ್ಚಿನ ಮಾಹಿತಿಗೆ ಮೊ. 9448999232ನ್ನು ಸಂಪರ್ಕಿಸಬಹುದು. ರೈತರು ಬೆಳೆದ ದಾಳಿಂಬೆ ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
ಸಂತೋಷ ಇನಾಮದಾರ,
ಜಿಲ್ಲಾ ತೋಟಗಾರಿಕೆ ಇಲಾಖೆ ವಿಜಯಪುರ

Advertisement

ಶಿವಯ್ಯ ಐ.ಮಠಪತಿ

Advertisement

Udayavani is now on Telegram. Click here to join our channel and stay updated with the latest news.

Next