Advertisement

ಚಬಾಹರ್‌ ಬಂದರು ಲೋಕಾರ್ಪಣೆ: ಪಾಕ್‌, ಚೀನಗೆ ತಕ್ಕ ಪಾಠ

11:11 AM Dec 04, 2017 | |

ಟೆಹರಾನ್‌: ಭಾರತ, ಇರಾನ್‌ ಹಾಗೂ ಅಫ್ಘಾನಿಸ್ಥಾನಗಳ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಹೊಸ ಆಯಾಮ ಕಲ್ಪಿಸುವ ಆಧುನಿಕ ಚಬಾಹರ್‌ ಬಂದರಿನ ಮೊದಲ ಹಂತವನ್ನು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ  ರವಿವಾರ ಉದ್ಘಾಟಿಸಿದರು. ಈ ಸಮಾರಂಭದಲ್ಲಿ 27 ರಾಷ್ಟ್ರಗಳ ಗಣ್ಯರು ಭಾಗವಹಿಸಿದ್ದರು. ಇರಾನ್‌, ಭಾರತ, ಅಫ್ಘಾನಿಸ್ಥಾನ, ಕತಾರ್‌, ಪಾಕಿಸ್ಥಾನದ ಹಲವಾರು ಅಧಿ ಕಾರಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು. 2016ರ ಮೇ ತಿಂಗಳಿನಲ್ಲಿ ಇರಾನ್‌ನ ಟೆಹರಾನ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಘಾನಿಸ್ಥಾನ, ಇರಾನ್‌ ಜತೆ  ತ್ರಿಪಕ್ಷೀಯ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರ ಫ‌ಲವಾಗಿಯೇ ಈ ಹಿಂದೆ ಅಲ್ಪ ಸಾಮ ರ್ಥ್ಯದ ಬಂದರು ಈಗ ಅಭಿವೃದ್ಧಿಗೊಂಡು ದೊಡ್ಡ ಬಂದರಾಗಿ ಮಾರ್ಪಟ್ಟಿದೆ.

Advertisement

ಭಾರತಕ್ಕೇನು ಲಾಭ?
ಅಫ್ಘಾನಿಸ್ಥಾನ, ಇರಾನ್‌ ಸೇರಿದಂತೆ ಮಧ್ಯ ಏಷ್ಯಾ ದೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಭಾರತಕ್ಕೆ ಮತ್ತೂಂದು ಮುಕ್ತ ಮಾರ್ಗ ಸಿಕ್ಕಂತಾಗಿದೆ. ಈವರೆಗೆ ಭೂಮಾರ್ಗದ ಮೂಲಕ ಅಫ್ಘಾನಿಸ್ಥಾನ, ಇರಾನ್‌ಗೆ ಭಾರತವು ತನ್ನ ಸಾಮಗ್ರಿಗಳನ್ನು ಪಾಕಿಸ್ಥಾನದ ಮೂಲಕವೇ ಸರಬರಾಜು ಮಾಡ ಬೇಕಿತ್ತು. ಇನ್ನು ಮುಂದೆ ಪಾಕಿಸ್ಥಾನದ ಹಂಗಿಲ್ಲದೆ ಭಾರತ ನೇರವಾಗಿ ಇರಾನ್‌, ಅಫ್ಘಾನಿಸ್ಥಾನಗಳಿಗೆ ತನ್ನ ಸರಕನ್ನು ಭಾರತ ತಲುಪಿಸಬಹುದು. ಅತ್ತ, ಇರಾನ್‌ ಹಾಗೂ ಅಫ್ಘಾನಿಸ್ಥಾನಗಳಿಗೆ ಭಾರತ ಸೇರಿದಂತೆ ಪೂರ್ವ ಏಷ್ಯಾ ಜತೆಗಿನ ವಾಣಿಜ್ಯ ವ್ಯವಹಾರಗಳಿಗೆ ಪಾಕಿಸ್ಥಾನವನ್ನು ಅವಲಂಬಿಸ ಬೇಕಿಲ್ಲ. ಹಾಗಾಗಿಯೇ, ಹೊಟ್ಟೆ ಉರಿದುಕೊಂಡಿದ್ದ ಪಾಕಿಸ್ಥಾನ, ಈ ಯೋಜನೆಗೆ ಅಪಸ್ವರ ತೆಗೆದಿತ್ತು. ಈ ಊಳಿಗೆ ಚೀನ ಸಹ ದನಿಗೂಡಿಸಿತ್ತು. ಇದರ ನಡುವೆಯೂ ಈ ಯೋಜನೆ ಜಾರಿಯಾಗಿರುವುದು ಇವರಿಬ್ಬರಿಗೂ ಭಾರತ ಸಡ್ಡು ಹೊಡೆದಂತಾಗಿದೆ.

ತಿಳಿಯಲೇಬೇಕಾದ ವಿಚಾರ
ಉದ್ಘಾಟನೆಗೊಂಡಿರುವ ಚಬಾಹರ್‌ ಬಂದರಿನ ಮೊದಲ ಹಂತಕ್ಕೆ ಶಾಹೀದ್‌ ಬೆಹಸ್ತಿ ಬಂದರು ಎಂದು ಹೆಸರು. ಮೊದಲ ಹಂತದ ಯೋಜನೆಗೆ ಖರ್ಚಾಗಿರುವ ಭಾರತದ ಪಾಲು ಅಂದಾಜು 3,226  ಕೋಟಿ ರೂ.  ಶಾಹೀದ್‌ ಬೆಹಸ್ತಿಯ ಹಡಗು ನಿಲ್ಲಿಸುವ ಎರಡು ಬರ್ತ್‌ಗಳು 10 ವರ್ಷಗಳವರೆಗೆ ಭಾರತದಿಂದಲೇ ನಿರ್ವಹಣೆ.  ತನ್ನ ಸಹಭಾಗಿತ್ವದ ಅಂತಾರಾಷ್ಟ್ರೀಯ ಬಂದರು ನಿರ್ವಹಣೆಗಾಗಿಯೇ ಇಂಡಿಯಾ ಗ್ಲೋಬಲ್‌ ಪೋರ್ಟ್ಸ್ ಲಿಮಿಟೆಡ್‌ (ಐಜಿಪಿಎಲ್‌) ಸ್ಥಾಪನೆ

6,452 ಕೋಟಿ ರೂ. ಮೊದಲ ಹಂತದ ಅಭಿವೃದ್ಧಿ ಯೋಜನೆಗೆ ಖರ್ಚಾಗಿರುವ ಹಣ.  
3,226 ಕೋಟಿ ರೂ. ಬಂದರು ಅಭಿವೃದ್ಧಿಯಲ್ಲಿ ಭಾರತ ಮಾಡಿರುವ ಹೂಡಿಕೆ
8.5 ಮಿ. ಟನ್‌ ನಿರೀಕ್ಷಿಸಲಾಗಿರುವ ವಾರ್ಷಿಕ ಸರಕು ಸಾಗಣೆ
549 ಕೋಟಿ ರೂ.  ಬಂದರಿನ ಮೊದಲೆರಡು  ಬರ್ತ್‌ಗಳ ನಿರ್ವಹಣೆಗೆ ಭಾರತ ಮಾಡಬೇಕಿರುವ ಖರ್ಚು
148 ಕೋಟಿ ರೂ.  ಮೊದಲ ಹಂತದ ಬಂದರಿನಿಂದ ಭಾರತ ನಿರೀಕ್ಷಿಸಿರುವ ವಾರ್ಷಿಕ ಆದಾಯ

 

Advertisement

Udayavani is now on Telegram. Click here to join our channel and stay updated with the latest news.

Next