Advertisement

ವಿಶ್ವೇಶ್ವರಿಗೆ ಸಿಜಿಕೆ ಪುರಸ್ಕಾರ

04:19 PM Jun 30, 2017 | |

ಧಾರವಾಡ: ಧರ್ಮ ಜ್ಯೋತಿ, ಸಮಾನ ಮನಸ್ಕರ ವಿಚಾರ ವೇದಿಕೆ ಮತ್ತು ಸಂಸ ಥಿಯೇಟರ್‌ ಸಹಯೋಗದಲ್ಲಿ ರಂಗಾಯಣದ ಸಾಂಸ್ಕೃತಿಕ ಸಮುತ್ಛಯದಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ಬೀದಿರಂಗ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ ಅವರಿಗೆ ಸಿಜಿಕೆ ರಂಗ ಪುರಸ್ಕಾರ-2017 ನೀಡಲಾಯಿತು. 

Advertisement

ಪುರಸ್ಕಾರ ಸ್ವೀಕರಿಸಿದ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಆಧುನಿಕ ರಂಗಭೂಮಿಯ ಸಂದರ್ಭದ ಎಂಬತ್ತರ ದಶಕದಲ್ಲಿ ಹೆಣ್ಣು ಮಕ್ಕಳು ರಂಗಭೂಮಿಯಲ್ಲಿ ಸಕ್ರಿಯವಾಗಿಲ್ಲದ ಕಾಲಘಟ್ಟದಲ್ಲಿ ರಂಗಭೂಮಿ ಪ್ರವೇಶಿಸಿ ಇಂದು ಈ ಮಟ್ಟಕ್ಕೆ ತಲುಪಲು ಗುರು-ಹಿರಿಯರು-ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಕಲಾವಿದರಿಗೆ ಯಾವುದೇ ಜಾತಿ-ಮತ-ಧರ್ಮಗಳ ಹಂಗಿಲ್ಲ.

ಸಮಾಜವನ್ನು ನಿರಂತರ ಜಾಗೃತಿಯಲ್ಲಿಡಲು ರಂಗಭೂಮಿ ಉತ್ತಮ ಮಾಧ್ಯಮವಾಗಿದೆ ಎಂದರು. ರಂಗನಟ ವಿಲಾಸ ಶೇರಖಾನ ಮಾತನಾಡಿ, ಆರಂಭಿಕ ಕಾಲದಲ್ಲಿ ನಾಟಕ ಪ್ರದರ್ಶನಗಳಿಗೆ ನಿರಂತರ ಬರುತ್ತಿದ್ದ ಆಸಕ್ತರನ್ನು ಗುರುತಿಸಿ ಆಗಿನ ನಿರ್ದೇಶಕರು ತಮ್ಮ ನಾಟಕಗಳಲ್ಲಿ ಪಾತ್ರ ನೀಡಿ, ಕಲಾವಿದರನ್ನು ತಯಾರು ಮಾಡುತ್ತಿದ್ದರು.

ಅದರಂತೆ, ಕಲಾವಿದರು ಸಹ ಒಪ್ಪಿಸಿದ ಕೆಲಸವನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದರು. ಆದರೀಗ ಬದಲಾದ ಕಾಲಮಾನದಲ್ಲಿ ಪಾತ್ರ ಮಾಡಲು ಕರೆದರೆ ಪೇಮೆಂಟ್‌ ಎಷ್ಟು ಕೋಡ್ತೀರಿ? ಎಂದು ಕೇಳುವಂತಾಗಿದೆ. ಇಂತಹ ಪರಿಸ್ಥಿತಿ ತಿಳಿಯಾಗಿ ಎಲ್ಲರೂ ಒಗ್ಗೂಡಿ, ಉತ್ತಮ ಪ್ರದರ್ಶನಗಳತ್ತ ಗಮನ ಹರಿಸಬೇಕಾಗಿದೆ ಎಂದರು. ಲಕ್ಷ್ಮಣ ಬಕ್ಕಾಯಿ, ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಇದ್ದರು.

ಗಾಯಕಿ ಜಯಶ್ರೀ ಜಾತಿಕರ್ತ ಪ್ರಾರ್ಥಿಸಿದರು. ಯೋಗೇಶ ಪಾಟೀಲ ನಿರೂಪಿಸಿದರು. ಜೋಸೆಪ್‌ ಮಲ್ಲಾಡಿ ವಂದಿಸಿದರು. ಪೌರಾಣಿಕ ಕಾಲಮಾನದಿಂದ ಆಧುನಿಕ ಕಾಲದವರೆಗಿನ ಮಹಿಳಾ ಲೋಕದ ತಲ್ಲಣಗಳ ವಿಷಯಾಧಾರಿತ ಶಶಿಕಾಂತ ಯಡಹಳ್ಳಿ ವಿರಚಿತ ಗಣಕರಂಗ ಪ್ರಸ್ತುತಪಡಿಸಿದ ಸೀತಾಂತರಾಳ ನಾಟಕವು ವೈ.ಡಿ.ಬದಾಮಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next