ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಏಕರೂಪದ ಪ್ರವೇಶ, ಶುಲ್ಕ, ಪರೀಕ್ಷೆ ಹಾಗೂ ನೇಮಕಾತಿ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಂದು ವಿಶ್ವವಿದ್ಯಾಲಯದಲ್ಲಿ ಒಂದೊಂದು ಪದ್ಧತಿ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ, ಏಕರೂಪ ವ್ಯವಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲಾಗುವುದು ಎಂದರು.
ಪದವಿ ಪಠ್ಯಕ್ರಮ ಪರಿಷ್ಕಣೆಗೂ ತಜ್ಞರ ಸಮಿತಿ ರಚಿಸಿ ಒಂದು ತಿಂಗಳಲ್ಲಿ ವರದಿ ಪಡೆದು ಹೊಸ ಪಠ್ಯವನ್ನು ಸಹ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗುವಂತೆ ನೋಡಿಕೊಳ್ಳಲಾಗುವುದು. ಸಿಇಟಿ ಪರೀಕ್ಷೆ ಆನ್‌ಲೈನ್ ಮೂಲಕವೇ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ 3800 ಉಪನ್ಯಾಸಕರು, 395 ಪ್ರಾಂಶುಪಾಲರ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ ಪಡೆಯಲಾಗಿದೆ. ಆದಷ್ಟು ಶೀಘ್ರ ಪರೀಕ್ಷಾ ಪ್ರಾಧಿಕಾರ ಮೂಲಕ ಆಯ್ಕೆ ಮಾಡಲಾಗುವುದು. ಈ ಪೈಕಿ ಉಪನ್ಯಾಸಕರ ಹುದ್ದೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರಿಗೂ ಮೆರಿಟ್ ಆಧಾರದ ಮೇಲೆ ಶೇ.50 ರಷ್ಟು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಖಾಸಗಿ, ಸರ್ಕಾರಿ ಸೇರಿ 64 ವಿಶ್ವವಿದ್ಯಾಲಯಗಳಿದ್ದು ಪ್ರತಿ ವಿಶ್ವವಿದ್ಯಾಯ ಕನಿಷ್ಠ ಐದು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ವಿಶ್ವವಿದ್ಯಾಲಯಗಳು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಕುಡಿತ ಸೇರಿದಂತೆ ಸಾಮಾಜಿಕ ಪಿಡುಗು ನಿವಾರಿಸಿ ಸಾಕ್ಷರತೆ ಬಗ್ಗೆ ಜಾಗೃತಿ ಮೂಡಿಸಿ ಎಲ್ಲರಿಗೂ ಶಿಕ್ಷಣ ವ್ಯವಸ್ಥೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಉಚಿತ ತರಬೇತಿ
ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ, ಪರೀಕ್ಷೆ ಬರೆಯುವುದು ಸೇರಿ ಇಂಜಿನಿಯರಿಂಗ್, ಡಿಪ್ಲೋಮಾ ಸೇರಿ ರಾಜ್ಯದ ಪದವೀಧರರಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಉಚಿತ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಪ್ರತಿ ವಿಶ್ವವಿದ್ಯಾಲಯದಲ್ಲಿ ಒಂದು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲಾಗುವುದು. ರೈಲ್ವೆ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯದಲ್ಲಿಯೂ 700 ರಿಂದ 800 ಹುದ್ದೆ ತುಂಬಲಾಗುತ್ತಿದೆ. ಎಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಪದವೀಧರರು ಇದಕ್ಕೆ ಅರ್ಹರು. ಆದರೆ, ರಾಜ್ಯದಲ್ಲಿ ಯಾರೂ ಅರ್ಜಿ ಹಾಕುತ್ತಿಲ್ಲ. ಹೊರರಾಜ್ಯದವರು ಅರ್ಜಿ ಹಾಕುತ್ತಿದ್ದಾರೆ. ರಾಜ್ಯದ ಪ್ರತಿಭೆಗಳಿಗೆ ಪರೀಕ್ಷೆ ಎದುರಿಸಲು ಆತಂಕವಿದೆ ಅದನ್ನು ನಿವಾರಿಸುವ ಕೆಲಸ ಮಾಡಲಾಗುವುದು ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.