Advertisement

CET Result: ಬೆಂಗಳೂರಿನ ಕಲ್ಯಾಣ್‌ಗೆ 4 ಪ್ರಥಮ ರ್‍ಯಾಂಕ್‌

01:11 AM Jun 02, 2024 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆಂದು ನಡೆದಿದ್ದ ಯುಜಿಸಿಇಟಿ- 2024ರ ಫ‌ಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ವಿ.ಕಲ್ಯಾಣ್‌ ಬಿ. ಫಾರ್ಮಾ, ಡಿ. ಫಾರ್ಮಾ, ಪಶು ವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌ನಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

Advertisement

ಮಂಗಳೂರು ಎಕ್ಸ್‌ಪರ್ಟ್‌ನ ಎಸ್‌.ಆರ್‌.ನಿಹಾರ್‌ ಬಿಎಸ್ಸಿ ಕೃಷಿ, ಯೋಗ ಮತ್ತು ನ್ಯಾಚುರೋಪಥಿಯಲ್ಲಿ 2 ಪ್ರಥಮ ರ್‍ಯಾಂಕ್‌, ಬಿ. ಫಾರ್ಮಾ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 3ನೇ ರ್‍ಯಾಂಕ್‌ ಗಳಿಸಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಹರ್ಷ ಕಾರ್ತಿಕೇಯ ವುಟುಕುರಿ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

ಪರೀಕ್ಷೆ ಬರೆದಿದ್ದ 3,10,314 ವಿದ್ಯಾರ್ಥಿ ಗಳಲ್ಲಿ 2,15,595 ವಿದ್ಯಾರ್ಥಿಗಳು ಎಂಜಿನಿ ಯರಿಂಗ್‌ ಮತ್ತು ಬಿಎಸ್ಸಿ (ಕೃಷಿ), 2,19,887 ವಿದ್ಯಾರ್ಥಿಗಳು ಪಶು ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ಆದರೆ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ ಎಂದು ಕೆಇಎ ತಿಳಿಸಿದೆ.

ಆರ್ಕಿಟೆಕ್ಚರ್‌ ಕೋರ್ಸಿಗೆ ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ ನಾಟಾ’ (ಎನ್‌ಎಟಿಎ) ಪರೀಕ್ಷೆಯಲ್ಲಿ ಅವರು ಗಳಿಸಲಿರುವ ಅಂಕಗಳನ್ನು ಪರಿಗಣಿಸಿ ರಾಂಕಿಂಗ್‌ ಘೋಷಿಸಲಾಗುವುದು. ಬಿಪಿಟಿ, ಬಿಪಿಒ, ಬಿ.ಎಸ್ಸಿ (ಅಲೈಡ್‌ ಹೆಲ್ತ್‌ ಸೈನ್ಸ್‌) ಕೋರ್ಸುಗಳಿಗೆ ಸಂಬಂಧಿಸಿದ ಫ‌ಲಿತಾಂಶಕ್ಕೂ ಇದೇ ಸೂತ್ರವನ್ನು ಅನುಸರಿಸಲಾಗುವುದು ಎಂದು ಕೆಇಎ ಹೇಳಿದೆ. ಯುಜಿನೀಟ್‌-2024ರ ಫ‌ಲಿತಾಂಶ ಬಂದ ಬಳಿಕ ಅದರಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.ಇದುವರೆಗೂ ಕೆಲವು ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯಲ್ಲಿ ಜನ್ಮ ದಿನಾಂಕ/ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಿಲ್ಲ. ಇಂಥವರ ಫ‌ಲಿತಾಂಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಕೆಇಎಯ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಹೇಳಿದ್ದಾರೆ.

ಎಂಜಿನಿಯರಿಂಗ್‌ ಜತೆಗೆ ಪಶುವೈದ್ಯಕೀಯ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಮತ್ತು ಬಿ.ಎಸ್ಸಿ (ನರ್ಸಿಂಗ್‌) ಕೋರ್ಸುಗಳಿಗೆ ರಾಜ್ಯದ 737 ಕ್ಷೇಂದ್ರಗಳಲ್ಲಿ ಸಿಇಟಿ ನಡೆದಿತ್ತು. ಒಟ್ಟು 3,49,653 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. //kea.kar.nic.inದಲ್ಲಿ ಫ‌ಲಿತಾಂಶವನ್ನು ನೋಡಬಹುದು.

Advertisement

ಕೌನ್ಸೆಲಿಂಗ್‌ ದಿನಾಂಕ ಶೀಘ್ರ ಪ್ರಕಟ
ಯುಜಿ ನೀಟ್‌ ಪರೀಕ್ಷೆಯ ಫ‌ಲಿತಾಂಶ ಮತ್ತು ಎಂಸಿಸಿ ಕೌನ್ಸೆಲಿಂಗ್‌ ವೇಳಾಪಟ್ಟಿಯನ್ನು ಗಣನೆಗೆ ತೆಗೆದುಕೊಂಡು, ಬಳಿಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಜಂಟಿ ಕೌನ್ಸೆಲಿಂಗ್‌ ನಡೆಸಲಿರುವ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ.

ವಿವಾಕ್ಕೀಡಾಗಿದ್ದ
ಸಿಇಟಿ ಪರೀಕ್ಷೆ
ಈ ಬಾರಿ ಸಿಇಟಿ ಪರೀಕ್ಷೆಯಲ್ಲಿ ಎಲ್ಲ ನಾಲ್ಕು ವಿಷಯಗಳಲ್ಲೂ ಪಠ್ಯಕ್ಕೆ ಹೊರತಾದ 50 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಷಯ ತಜ್ಞರ ನಿರ್ದೇಶನದ ಮೇರೆಗೆ ಈ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಿಲ್ಲ. ಜತೆಗೆ ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ. ಈ ವರ್ಷ ದ್ವಿತೀಯ ಪಿಯುಸಿಗೆ ಎರಡು ಪರೀಕ್ಷೆಗಳನ್ನು ಮಾಡಿದ್ದು, ಅವುಗಳಲ್ಲಿ ಅತೀ ಹೆಚ್ಚು ಅಂಕ ಪಡೆದಿರುವುದನ್ನೇ ರಾಂಕ್‌ ಪಟ್ಟಿಗೆ ಪರಿಗಣಿಸಲಾಗಿದೆ.

ಮತ್ತೆ ಎಡವಟ್ಟು?
ಸಿಇಟಿ ಪರೀಕ್ಷೆಯಲ್ಲಿ ಸಿಲೆಬಸ್‌ ಹೊರತಾದ 50 ಪ್ರಶ್ನೆ ಕೇಳಿ ಎಡಟ್ಟು ಮಾಡಿಕೊಂಡಿದ್ದ ಪ್ರಾಧಿಕಾರ ಇದೀಗ ಫ‌ಲಿತಾಂಶ ಪ್ರಕಟಣೆಯಲ್ಲಿಯೂ ಪ್ರಮಾದ ಎಸಗಿದೆ ಎಂಬ ಆರೋಪ ಕೇಳಿ ಬಂದಿದೆ. ಫ‌ಲಿತಾಂಶ ಪ್ರಕಟಗೊಂಡ ತಕ್ಷಣವೇ ಪೋಷಕರೊಬ್ಬರು ನನ್ನ ಮಗನ ಪಿಯು ಪರೀಕ್ಷೆಯ ಅಂಕಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಆತ ಜೀವಶಾಸ್ತ್ರ ಪರೀಕ್ಷೆ ಪರೀಕ್ಷೆ ಬರೆದೇ ಇರಲಿಲ್ಲ. ಆದರೆ ಜೀವಶಾಸ್ತ್ರ ಪರೀಕ್ಷೆಯ ಅಂಕಗಳನ್ನು ನಮೂದಿಸಲಾಗಿದೆ ಎಂದು ಹೇಳಿದ್ದಾರೆ.

ಕರಾವಳಿಯ ಸಾಧಕರು
ನಿಹಾರ್‌ ಬಿಎನ್‌ವೈಎಸ್‌, ಬಿಎಸ್‌ಸಿ ಅಗ್ರಿಗಳಲ್ಲಿ ಪ್ರಥಮ; ಬಿ.ವಿ.ಎಸ್‌ಸಿ ಮತ್ತು ಬಿಎಸ್‌ಸಿ ನರ್ಸಿಂಗ್‌ಗಳಲ್ಲಿ 3ನೇ, ಬಿ ಫಾರ್ಮಾ ಮತ್ತು ಡಿಫಾರ್ಮಾಗಳಲ್ಲಿ 5ನೇ ರ್‍ಯಾಂಕ್‌ ಗಳಿಸಿದ್ದಾರೆ. ಮಿಹಿರ್‌ ಗಿರೀಶ್‌ ಕಾಮತ್‌ ಬಿಎಸ್‌ಸಿ ಅಗ್ರಿಯಲ್ಲಿ 2ನೇ ರ್‍ಯಾಂಕ್‌ ಪಡೆದಿದ್ದಾರೆ.

ಸಂಜನಾ ಸಂತೋಷ್‌ ಕಟ್ಟಿ ಬಿಎನ್‌ವೈಎಸ್‌ನಲ್ಲಿ ದ್ವಿತೀಯ, ಬಿಎಸ್‌ಸಿ ಅಗ್ರಿಯಲ್ಲಿ 4ನೇ, ಬಿ.ವಿ.ಎಸ್‌ಸಿ ಮತ್ತು ಬಿಎಸ್‌ಸಿ ನರ್ಸಿಂಗ್‌ಗಳಲ್ಲಿ 6ನೇ, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 8ನೇ ರ್‍ಯಾಂಕ್‌ ಗಳಿಸಿದ್ದಾರೆ. ಸ್ವಸ್ತಿಕ್‌ ಅಖೀಲ್‌ ಶರ್ಮಾ ಬಿಎನ್‌ವೈಎಸ್‌ನಲ್ಲಿ 6ನೇ ರ್‍ಯಾಂಕ್‌ ಗಳಿಸಿದ್ದಾರೆ. ಆಕಾಶ್‌ ಶ್ರೀಶೈಲ್‌ ಕಂಕನವಾಡಿ ಬಿಎಸ್‌ಸಿ ಅಗ್ರಿಯಲ್ಲಿ 8ನೇ ರ್‍ಯಾಂಕ್‌ ಪಡೆದಿದ್ದಾರೆ. ಸುಹಾಸ್‌ ಎಂ. ಬಿ.ವಿ.ಎಸ್‌ಸಿ ಮತ್ತು ಬಿಎಸ್‌ಸಿ ನರ್ಸಿಂಗ್‌ಗಳಲ್ಲಿ 9ನೇ, ಬಿಎನ್‌ವೈಎಸ್‌ನಲ್ಲಿ 10ನೇ ರ್‍ಯಾಂಕ್‌ ಪಡೆದಿದ್ದಾರೆ. ಪ್ರಣವ್‌ ಟಾಟಾ ಆರ್‌. ಬಿಎಸ್‌ಸಿ ಅಗ್ರಿಯಲ್ಲಿ 9ನೇ ರ್‍ಯಾಂಕ್‌ ಪಡೆದಿದ್ದಾರೆ. ಇವರೆಲ್ಲರೂ ಎಕ್ಸ್‌ಪರ್ಟ್‌ನ ಕೊಡಿ ಯಾಲಬೈಲ್‌ ಮತ್ತು ವಳಚ್ಚಿಲ್‌ ಕ್ಯಾಂಪಸ್‌ಗಳ ವಿದ್ಯಾರ್ಥಿಗಳು.
ಎಕ್ಸಲೆಂಟ್‌ ಮೂಡುಬಿದಿರೆಯ ನಿಖೀಲ್‌ಗೌಡ ಬಿ.ವಿ. ಎಸ್‌ಸಿ ಮತ್ತು ಬಿಎಸ್‌ಸಿ ನರ್ಸಿಂಗ್‌ನಲ್ಲಿ 8ನೇ ಹಾಗೂ ಬಿಫಾರ್ಮಾ ಮತ್ತು ಡಿಫಾರ್ಮಾಗಳಲ್ಲಿ 10ನೇ ರ್‍ಯಾಂಕ್‌ ಪಡೆದಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಕರಾವಳಿಯ ಯಾರಿಗೂ ಉನ್ನತ ರ್‍ಯಾಂಕ್‌ ಒಲಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next