Advertisement

CET ಆನ್‌ಲೈನ್‌ನಲ್ಲಿ: ಪೂರ್ವ ಸಿದ್ಧತೆ ಅಗತ್ಯ

01:25 AM Jul 15, 2024 | Team Udayavani |

ಶಾಲಾ-ಕಾಲೇಜುಗಳ ವಾರ್ಷಿಕ ಪರೀಕ್ಷೆ, ಉನ್ನತ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆ, ಸರಕಾರಿ ಇಲಾಖೆ, ನಿಗಮ, ಮಂಡಳಿಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಪರೀಕ್ಷೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ದಿನೇದಿನೆ ಹತ್ತು ಹಲವು ಪ್ರಶ್ನೆಗಳು ಮತ್ತು ಅನುಮಾನಗಳು ಜನರನ್ನು ಕಾಡತೊಡಗಿರುವಂತೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಹಲವು ಮಹತ್ತರ ಹೆಜ್ಜೆಗಳನ್ನು ಇರಿಸಿದೆ. ಕಳೆದೆರಡು ದಿನಗಳ ಕಾಲ ರಾಜ್ಯದ ವಿವಿಧ ನಿಗಮಗಳ ಹುದ್ದೆಗಳ ಭರ್ತಿಗಾಗಿ ನಡೆದ ನೇಮಕಾತಿ ಪರೀಕ್ಷೆ ವೇಳೆ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಕೆಮರಾಗಳನ್ನು ಅಳವಡಿಸಿ, ಯಾವುದೇ ಅಕ್ರಮಗಳು ನಡೆಯದಂತೆ ನಿಗಾ ಇರಿಸಿದ್ದ ಪ್ರಾಧಿಕಾರ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಪ್ರವೇಶಾತಿಗಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಗಂಭೀರ ಚಿಂತನೆ ನಡೆಸಿದೆ.

Advertisement

ರಾಜ್ಯದಲ್ಲಿ ಆಡಳಿತದ ವಿವಿಧ ಹಂತದಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿಲ್ಲ. ಪರೀಕ್ಷಾ ವ್ಯವಸ್ಥೆಯಂತೂ ಇನ್ನೂ ದಶಕಗಳಷ್ಟು ಹಳೆಯದಾಗಿದ್ದು, ಈ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಲೇ ಬಂದಿದೆ. ಆದರೆ ಕಂಪ್ಯೂಟರ್‌ ಆಧಾರಿತ ಪರೀಕ್ಷಾ ವ್ಯವಸ್ಥೆಗೆ ಭಾರೀ ವೆಚ್ಚ ತಗಲುವುದರಿಂದ ಮತ್ತು ಭಾರೀ ಪ್ರಮಾಣದ ಮೂಲಸೌಕರ್ಯದ ಅಗತ್ಯವಿರುವುದರಿಂದ ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನೀಟ್‌ ವಿವಾದದ ಬೆನ್ನಲ್ಲೇ ಎನ್‌ಟಿಎ ಆನ್‌ಲೈನ್‌ ಪರೀಕ್ಷೆಗೆ ಒಲವು ತೋರಿರುವಂತೆಯೇ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮತ್ತು ಕೆಇಎ ಕೂಡ ರಾಜ್ಯ ಮಟ್ಟದಲ್ಲಿ ನಡೆಸಲಾಗುವ ಸಿಇಟಿಯನ್ನು ಕಂಪ್ಯೂಟರ್‌ ಆಧಾರಿತವಾಗಿ ನಡೆಸಲು ಮುಂದಾಗಿದೆ.

ಸದ್ಯ ಕೆಇಎಯ ಈ ಚಿಂತನೆ ಪ್ರಾಥಮಿಕ ಹಂತದಲ್ಲಿದ್ದು ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ಸಾಧಕ-ಬಾಧಕಗಳ ಬಗೆಗೆ ಪರಾಮರ್ಶೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕೆಇಎ ಈ ಚಿಂತನೆ ಅನುಷ್ಠಾನಕ್ಕೆ ಬಂದಲ್ಲಿ ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರ ಮೈಲುಗಲ್ಲಾಗಲಿದೆ. ಆದರೆ ರಾಜ್ಯದಲ್ಲಿನ ಪ್ರಸ್ತುತ ಸ್ಥಿತಿಗತಿ, ಅರ್ಥಿಕ ಸಂಪನ್ಮೂಲದ ಕ್ರೋಡೀಕರಣ, ಮೂಲಸೌಕರ್ಯಗಳ ಒದಗಣೆ, ವಿದ್ಯಾರ್ಥಿಗಳ ಮನಃಸ್ಥಿತಿ ಇವೆಲ್ಲದರ ಕುರಿತಂತೆ ಸರಕಾರ ಅವಲೋಕನ ನಡೆಸಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಕಂಪ್ಯೂಟರ್‌ ಆಧಾರಿತ ಪರೀಕ್ಷಾ ವ್ಯವಸ್ಥೆ ಜಾರಿಯಿಂದ ಪ್ರಶ್ನೆಪತ್ರಿಕೆ ಸೋರಿಕೆ, ನಕಲು, ಮೌಲ್ಯಮಾಪನದಲ್ಲಿನ ಗೊಂದಲ ಸಹಿತ ಎಲ್ಲ ತೆರನಾದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಹಾಗೆಂದು ಈ ವಿಷಯದಲ್ಲಿ ಅವಸರದ ತೀರ್ಮಾನಕ್ಕೆ ಬರಬಾರದು.

ಸರಕಾರ, ಕಂಪ್ಯೂಟರ್‌ ಸಹಿತ ಅಗತ್ಯ ಮೂಲಸೌಕರ್ಯಗಳೆಲ್ಲವನ್ನು ಒದಗಿಸಲು ಸಶಕ್ತವಾಗುವುದರ ಜತೆಯಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು, ಸಿಬಂದಿ ಮತ್ತು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕಿರುವುದು ಅತೀ ಅಗತ್ಯ. ಅದರಲ್ಲೂ ಮುಖ್ಯವಾಗಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಗುರುತರ ಸವಾಲಂತೂ ಇದ್ದೇ ಇದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆಗಳನ್ನು ನಡೆಸಿ, ಅವರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವಾಗ ಬೇಕು. ಇತ್ತ ಉನ್ನತ ಶಿಕ್ಷಣ ಇಲಾಖೆ ಮತ್ತು ಕೆಇಎ ಆದ್ಯತೆಯ ಮೇಲೆ ಗಮನ ಹರಿಸಬೇಕು. ಇವೆಲ್ಲವೂ ಕಾರ್ಯಸಾಧ್ಯವಾದ ಬಳಿಕವಷ್ಟೇ ಕೆಇಎ ಪೂರ್ಣಹಂತದಲ್ಲಿ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು ನಡೆಸಿದಲ್ಲಿ ಅದು ನಿರೀಕ್ಷಿತ ಯಶ ಕಾಣುವುದರ ಜತೆಯಲ್ಲಿ ಸರಕಾರದ ಉದ್ದೇಶವೂ ಈಡೇರೀತು.

Advertisement

Udayavani is now on Telegram. Click here to join our channel and stay updated with the latest news.

Next