ಬೆಂಗಳೂರು: ರಾಜಧಾನಿಯ 84 ಕೇಂದ್ರ ಸಹಿತವಾಗಿ ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಏ.29 ಮತ್ತು 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. 97,716 ಹುಡುಗರು ಹಾಗೂ 96,585 ಹುಡುಗಿಯರು ಸೇರಿ 1,94,311 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದಾರೆ.
431 ವೀಕ್ಷಕರು, 862 ವಿಶೇಷ ಜಾಗೃತ ದಳದ ಸದಸ್ಯರು, 431 ಪ್ರಶ್ನೆ ಪತ್ರಿಕೆ ಪಾಲಕರು, ಸುಮಾರು 9,700 ಕೊಠಡಿ ಮೇಲ್ವಿಚಾರಕರು ಹಾಗೂ ಒಟ್ಟಾರೆ 28,245 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಿಇಟಿ ಪರೀಕ್ಷೆಯ ಮೇಲುಸ್ತುವಾರಿಗೆ ನೇಮಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಖಜಾನೆಗೆ ಬಿಗಿ ಭದ್ರತೆ: ಪರೀಕ್ಷಾ ದಿನಗಳಂದು ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮತ್ತು ಪ್ರಶ್ನೆ ಪತ್ರಿಕೆ ಇಟ್ಟಿರುವ ಖಜಾನೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡುವ ಸಂಬಂಧ ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪ್ರಾಧಿಕಾರ ಕೋರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ.
ಕನ್ನಡ, ಇಂಗ್ಲಿಷ್‌ನಲ್ಲಿ ಪ್ರಶ್ನೆ ಮತ್ತು ಉತ್ತರ: ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆ ಹಾಗೂ ಉತ್ತರಗಳು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುತ್ತವೆ. ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳಲ್ಲಿ ಏನಾದರೂ ಸಂದೇಹವಿದ್ದಲ್ಲಿ, ಇಂಗ್ಲಿಷ್ ಭಾಷೆಯಲ್ಲಿರುವ ಪ್ರಶ್ನೆಯನ್ನು ನೋಡಿಕೊಳ್ಳಬಹುದು. ಇಂಗ್ಲಿಷ್ ಭಾಷೆಯ ಪ್ರಶ್ನೆಗಳನ್ನು ಅಂತಿಮ ಎಂದು ಪರಿಗಣಿಸಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ವೇಳಾಪಟ್ಟಿ: ಏ.29ರ ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, ಏ.30ರಂದು ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 1ರಂದು ಬೆಂಗಳೂರು ಕೇಂದ್ರದಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಕನ್ನಡಭಾಷಾ ಪರೀಕ್ಷೆ 50 ಅಂಕದ್ದಾಗಿದ್ದು, ಉಳಿದೆಲ್ಲ ಪರೀಕ್ಷೆ ತಲಾ 60 ಅಂಕಗಳಿಗೆ ಇರುತ್ತದೆ.
ಎಚ್ಚರ ವಹಿಸಿ: ಒಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ಪ್ರವೇಶ ಪತ್ರದ ಸಂಖ್ಯೆ, ಹೆಸರು ಮತ್ತು ಪ್ರಶ್ನೆಪತ್ರಿಕೆಯ ವರ್ಷನ್ ಕೋಡ್ ಇರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ, ನೀಡಿರುವ ಒಎಂಆರ್ ಉತ್ತರ ಪತ್ರಿಕೆಯಲ್ಲಿ ಎಲ್ಲ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಶೇಡ್ ಮಾಡಬೇಕು ಎಂದು ಅಭ್ಯರ್ಥಿಗಳಿಗೆ ಪ್ರಾಧಿಕಾರ ತಿಳಿಸಿದೆ.
ಒಎಂಆರ್ ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡಲು ನೀಲಿ ಅಥವಾ ಕಪ್ಪು ಶಾಯಿಯ ಬಾಲ್‌ಪೆನ್ ಉಪಯೋಗಿಸಬೇಕು. ಪರೀಕ್ಷಾ ಕೊಠಡಿಗೆ ಪ್ರವೇಶ ಪಡೆಯಲು ಸಿಇಟಿ ಪ್ರವೇಶ ಪತ್ರದ ಜತೆಗೆ ಯಾವುದಾದರೊಂದು ಭಾವಚಿತ್ರ ಇರುವ ಗುರುತಿನ ಚೀಟಿ ಇರಬೇಕು.
ಕೈಗಡಿಯಾರ ಕಟ್ಟಿಕೊಂಡು ಅಥವಾ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್, ಟ್ಯಾಬ್ಲೆಟ್ ಹಾಗೂ ಕ್ಯಾಲ್ಕುಲೇಟರ್ ಸಹಿತವಾಗಿ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷೆಗೂ ಅರ್ಧಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು. ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್
//kea.kar.nic.in/ ಅನ್ನು ಸಂಪರ್ಕಿಸಬಹುದಾಗಿದೆ.