Advertisement

ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಸುಸೂತ್ರ: ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ; ಪೂರ್ವಭಾವಿ ಸಭೆ

01:11 PM Jul 24, 2020 | mahesh |

ಮಡಿಕೇರಿ: ಜಿಲ್ಲೆಯಲ್ಲಿ 1,200 ವಿದ್ಯಾರ್ಥಿಗಳು ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲಿದ್ದು, ಸಮನ್ವಯತೆಯಿಂದ ಹಾಗೂ ಸುಸೂತ್ರವಾಗಿ ಪರೀಕ್ಷೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸ್ನೇಹಾ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಬಗ್ಗೆ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಗತ್ಯ ಮುನ್ನೆಚ್ಚರಿಕೆ ವಹಿಸಿ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು.

Advertisement

ಕೋವಿಡ್‌-19 ಹಿನ್ನೆಲೆ ಕಂಟೈನ್ಮೆಂಟ್‌ ವಲಯದಿಂದ ಬರುವ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಆ ವಿದ್ಯಾರ್ಥಿಗಳನ್ನು ಪರೀಕ್ಷೆ ಸಂದರ್ಭ ಅವರಿರುವ ಸ್ಥಳದಿಂದ ಪರೀಕ್ಷಾ ಸ್ಥಳಕ್ಕೆ ಬಂದು ಪರೀಕ್ಷೆ ಬರೆಯುವಂತೆ ಹಾಗೂ ಮತ್ತೆ ಅವರನ್ನು ಮನೆಗೆ ಕಳುಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಿ. ಒಬ್ಬ ವಿದ್ಯಾರ್ಥಿಯೂ ಸಿಇಟಿ ಪರೀಕ್ಷೆಯಿಂದ ವಂಚಿತರಾಗದಂತೆ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು. ಪರೀಕ್ಷಾ ಸಂದರ್ಭ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡುವಂತೆ ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಬಸ್‌ ವ್ಯವಸ್ಥೆ ಮಾಡುವಂತೆ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಾದ ಎಚ್‌. ಗೀತಾ ಅವರಿಗೆ ಸೂಚನೆ ನೀಡಿದರು.

ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಲಿಂಗ ಶೆಟ್ಟಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈ ಬಾರಿ 1,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 4 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಡಿಕೇರಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 504 ವಿದ್ಯಾರ್ಥಿಗಳು, ಸಂತ ಜೋಸೆಫ‌ರ ಕಾಲೇಜಿನಲ್ಲಿ 312 ವಿದ್ಯಾರ್ಥಿಗಳು, ವಿರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 216 ಮತ್ತು ಸೋಮವಾರ ಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 168 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಐಟಿಡಿಪಿ ಇಲಾಖೆಯ ಅಧಿಕಾರಿ ಶಿವಕುಮಾರ್‌, ಡಿವೈಎಸ್‌ಪಿ ದಿನೇಶ್‌ ಕುಮಾರ್‌, ತಹಶೀಲ್ದಾರರಾದ ಗೋವಿಂದ ರಾಜು, ನಂದೀಶ್‌, ತಾ. ಪಂ. ಇಒ ಲಕ್ಷ್ಮೀ ಸುನೀಲ್‌ ಕುಮಾರ್‌, ಪ್ರಾಂಶುಪಾಲರಾದ ವಿಜಯನ್‌, ಮಹಾಲಿಂಗಯ್ಯ, ಬೆಳ್ಳಿಯಪ್ಪ, ಜೆ. ಸೋಮಣ್ಣ, ಶೋಭಾ, ಜ್ಯೋತಿ, ಪ್ರಾದೇಶಿಕ ಸಾರಿಗೆ ಕಚೇರಿಯ ರೀಟಾ ಮತ್ತಿತರರಿದ್ದರು.

ಮಾಹಿತಿ ನೀಡಲು ಮನವಿ
2020ರ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಯ ಸಂಬಂಧ ಸಾಮಾನ್ಯ ಪ್ರವೇಶ ಪರೀಕ್ಷೆ ಜು. 30, 31ರಂದು ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್‌ ಪಾಸಿಟಿವ್‌ ವಿದ್ಯಾರ್ಥಿಗಳು ಕೂಡ ಸಿಇಟಿ ಪರೀಕ್ಷೆ ಬರೆಯುವ ಅವಕಾಶವನ್ನು ಇಲಾಖೆಯು ಕಲ್ಪಿಸಿದೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣವಿರುವ ವಿದ್ಯಾರ್ಥಿಗಳು ಇದ್ದಲ್ಲಿ/ ಕಂಟೈನ್ಮೆಂಟ್‌ ಪ್ರದೇಶದಲ್ಲಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಮುಂಚಿತವಾಗಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಒದಗಿಸಬೇಕಿದೆ. ಈ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿದೆ. ಆದ್ದರಿಂದ ಇಂತಹ ಪ್ರಕರಣಗಳ ಸಂಬಂಧ ಪ.ಪೂ. ಶಿಕ್ಷಣ ಇಲಾಖೆಗೆ ಮುಂಚಿತವಾಗಿ ವಿದ್ಯಾರ್ಥಿಗಳು ತಮ್ಮ ಪೂರ್ಣ ವಿವರ ನೀಡಬೇಕು. ಇ-ಮೇಲ್‌ ವಿಳಾಸ ddpue.madikeri@gmail.comಗೆ ಸಲ್ಲಿಸುವುದು ಹಾಗೂ ಮೊಬೈಲ್‌ ಸಂಖ್ಯೆ 9448794809ಗೆ ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ ಹೆತ್ತವರು ಮಾಹಿತಿ ನೀಡುವಂತೆ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಲಿಂಗ ಶೆಟ್ಟಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next