ಬೆಂಗಳೂರು: ಇಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ-2024)ಯನ್ನು ಏಪ್ರಿಲ್ 18 ಮತ್ತು 19ಕ್ಕೆ ಮರು ನಿಗದಿ ಮಾಡಲಾಗಿದೆ. ಏ.20ಕ್ಕೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಈ ಮೊದಲು ಏ.20 ಮತ್ತು 21ರಂದು ಪರೀಕ್ಷೆ ನಡೆಸಲು ತೀರ್ಮಾನಿಸಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಏಪ್ರಿಲ್ 21ರಂದು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪರೀಕ್ಷೆ ನಿಗದಿಯಾಗಿರುವುದರಿಂದ ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ದಿನಾಂಕವನ್ನು ಪರಿಷ್ಕರಿಸಲಾಗಿದೆ ಎಂದು ಕೆಇಎ ತಿಳಿಸಿದೆ.
ಏ.18ರ ಬೆಳಗ್ಗೆ 10.30ರಿಂದ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ ಗಣಿತ, 19ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ತಲಾ 60 ಅಂಕಗಳಿಗೆ ನಡೆಯಲಿದೆ. ಹಾಗೆಯೇ, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.20ರಂದು ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ ಮತ್ತು ಮಂಗಳೂರು ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ಸಿಇಟಿ ಅರ್ಜಿ ಸಲ್ಲಿಕೆ ಆರಂಭ: ಪರೀಕ್ಷೆ ಬರೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಜ.10 (ಬುಧವಾರ) ರಿಂದ ಫೆ.10ರ ಮಧ್ಯೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನ್ಯಾಚುರೋಪಥಿ ಮತ್ತು ಯೋಗ, ಬಿ.ಫಾರ್ಮಾ, ಫಾರ್ಮಾ-ಡಿ, ದ್ವಿತೀಯ ವರ್ಷದ ಬಿ.ಫಾರ್ಮಾ, ಕೃಷಿ ಕೋರ್ಸ್‌ಗಳು, ಪಶು ಸಂಗೋಪನೆ, ಬಿ.ಎಸ್ಸಿ (ನರ್ಸಿಂಗ್), ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಈ ಸೂಚನೆ ಅನ್ವಯಿಸಲಿದೆ.
ಯುಜಿನೀಟ್ -2024 ಫಲಿತಾಂಶಗಳ ಪ್ರಕಟಣೆಯ ನಂತರ ಕೆಇಎ ನಲ್ಲಿ ನೋಂದಾಯಿಸಲಾಗಿರುವ ಅಭ್ಯರ್ಥಿಗಳಿಗೆ ನೀಟ್ ಅಂಕ ಮತ್ತು ರೋಲ್ ನಂಬರ್ ದಾಖಲಿಸಲು ಇಂಟಫೇìಸ್ ನೀಡಲಾಗುವುದು ಎಂದು ಕೆಇಎ ತಿಳಿಸಿದೆ.