ದೇವನಹಳ್ಳಿ: ತಾವು ರಾಜ್ಯದ ಶಿಕ್ಷಣ ಮಂತ್ರಿಯಾಗಿದ್ದಾಗ ಎಲ್ಲಾ ಬಡ ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲು ಸಿಇಟಿ ಜಾರಿಗೆ ತಂದಿದ್ದರಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿಯಾಗಿದೆ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದರು. ತಾಲೂಕಿನ ಬೆಟ್ಟಕೋಟೆ ಗ್ರಾಮದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವತಿಯಿಂದ ನಿರ್ಮಿಸಿರುವ ಸರ್ಕಾರಿ ಹಿರಿಯ ಪಾಠಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಆದೇಶದ ಫಲಶ್ರುತಿ: ನಾನು ಮುಖ್ಯಮಂತ್ರಿಯಾಗಿದ್ದಾಗ ದೇವನಹಳ್ಳಿ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವುದಕ್ಕೆ ಆದೇಶ ಮಾಡಿದ್ದೇವೆ. ಕೇಂದ್ರ ಸರ್ಕಾರದಲ್ಲಿ ಕೈಗಾರಿಕಾ ಅಭಿವೃದ್ಧಿ ಸಚಿವರಾಗಿದ್ದಾಗ ಕೈಗಾರಿಕೆಗಳ ವತಿಯಿಂದ ಎರಡರಷ್ಟು ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಬೇಕೆಂದು ಆದೇಶ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರು ಸುಮಾರು ನಾಲ್ಕೂವರೆ ಕೋಟಿ ರೂ.ವೆಚ್ಚದಲ್ಲಿ ಈ ಶಾಲೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.
ಉದ್ಘಾಟನೆ ಭಾಗ್ಯ: ಗ್ರಾಮೀಣ ಭಾಗದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದರೆ ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ. ನಮ್ಮ ಆದೇಶ ಇಂದು ನನಸಾಗಿ ನಾನೇ ಉದ್ಘಾಟನೆ ಮಾಡುವ ಭಾಗ್ಯ ಬಂದಿದೆ. ಶಾಲಾ ಕಟ್ಟಡ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಹೆಚ್ಚು ಮಕ್ಕಳು ದಾಖಲಾಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಶಾಲೆಗೆ ಕೀರ್ತಿ ಬರುತ್ತದೆ ಎಂದರು.
ಮಕ್ಕಳಿಗೆ ಶಿಕ್ಷಣ ನೀಡಿ: ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಶಾಲೆಗಳು ಅಭಿವೃದ್ಧಿಯಾದರೆ ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತದೆ. ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳಿಗೆ ಆಸ್ತಿ ಮಾಡುವುದರ ಬದಲಿಗೆ 4 ಅಕ್ಷರದ ಶಿಕ್ಷಣ ನೀಡಿದರೆ ಅದೇ ಸಾವಿರಾರು ಕೋಟಿಯಷ್ಟು ಜ್ಞಾನಾರ್ಜನೆಯ ಮೂಲಕ ಅಕ್ಷರವಂತರಾಗುತ್ತಾರೆ. ಜೀವನದ ಕೊನೆಯವರೆಗೂ ಅವರ ಕೈ ಹಿಡಿಯುತ್ತದೆ ಎಂದರು.
ಜಿಪಂ ಸದಸ್ಯ ಲಕ್ಷ್ಮೀನಾರಾಯಣ್ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ಹೇಮಂತ್ ಮಾರೇಗೌಡ, ಉಪ ವ್ಯವಸ್ಥಾಪಕರಾದ ಪ್ರತಿಭಾ ಕುಲಕರ್ಣಿ, ಜಿಪಂ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ, ಜಿಪಂ ಸದಸ್ಯರಾದ ಕೆ.ಸಿ ಮಂಜುನಾಥ್, ರಾಧಮ್ಮ ಮುನಿರಾಜ್, ತಾಪಂ ಅಧ್ಯಕ್ಷೆ ಭಾರತಿ ಲಕ್ಷ್ಮಣ್‌ಗೌಡ, ಉಪಾಧ್ಯಕ್ಷೆ ನಂದಿನಿ ವೆಂಕಟೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜ್, ಟಿಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ್‌ಮೂರ್ತಿ,
ತಾಪಂ ಸದಸ್ಯ ಮುನೇಗೌಡ, ಚೈತ್ರಾ, ವೆಂಕಟೇಶ್, ಎಪಿಎಂಸಿ ನಾಮಿನಿ ನಿರ್ದೇಶಕ ಜಯರಾಮೇಗೌಡ, ಬೂದಿಗೆರೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌ಗೌಡ, ಖಾದಿ ಬೋರ್ಡ್ ಅಧ್ಯಕ್ಷ ಲಕ್ಷ್ಮಣ್‌ಮೂರ್ತಿ, ಬಿಇಒ ಗಾಯಿತ್ರಿದೇವಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆ ಅಧ್ಯಕ್ಷ ರಾಮಕೃಷ್ಣಪ್ಪ, ಗ್ರಾಪಂ ಅಧ್ಯಕ್ಷೆ ಸೌಮ್ಯಾ ನಂದೀಶ್, ಉಪಾಧ್ಯಕ್ಷೆ ಪಾರ್ವತಮ್ಮ ಮುಂತಾದವರಿದ್ದರು.