ಹುಬ್ಬಳ್ಳಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದಿದ್ದ ಚೇತನ ಪಿಯು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಪರ್ಣಾ ಮುಳಗುಂದ ಸಿಇಟಿಯಲ್ಲಿ ರಾಜ್ಯಕ್ಕೆ 12ನೇ ರ್‍ಯಾಂಕ್ ಗಳಿಸಿದ್ದಾರೆ.
ಕಾಲೇಜು ಪ್ರಾಚಾರ್ಯರಾದ ಪ್ರೊ| ಸುಜಾತಾ ದಢೂತಿ ಮಾಧ್ಯಮದವರೊಂದಿಗೆ ಮಾತನಾಡಿ, ಅಪರ್ಣಾ ಮುಳಗುಂದ ಬ್ಯಾಚುಲರ್ ಅಫ್ ನ್ಯಾಚುರೋಪತಿ ಸೈನ್ಸ್‌ನಲ್ಲಿ ರಾಜ್ಯಕ್ಕೆ 12ನೇ ರ್‍ಯಾಂಕ್, ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ 18ನೇ ರ್‍ಯಾಂಕ್, ವೆಟರ್ನರಿ ಸೈನ್ಸ್‌ನಲ್ಲಿ 21ನೇ ರ್‍ಯಾಂಕ್, ಬಿ-ಫಾರ್ಮಾದಲ್ಲಿ 44ನೇ ರ್‍ಯಾಂಕ್, ಎಂಜಿನಿಯರಿಂಗ್‌ನಲ್ಲಿ 202ನೇ ರ್‍ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ ಎಂದರು.
ಅಪರ್ಣಾ ಮುಳಗುಂದ ಮಾತನಾಡಿ, ನಾನು ಸಿಇಟಿಯಲ್ಲಿ ರ್‍ಯಾಂಕ್ ಪಡೆದಿದ್ದರೂ ನೀಟ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಮೆಡಿಕಲ್ ಮಾಡುವ ಆಸೆಯಿದೆ. ಏಮ್ಸ್ ಪರೀಕ್ಷೆ ಕೂಡ ಬರೆಯಲಿದ್ದೇನೆ. ನನ್ನ ಸಾಧನೆಗೆ ಬೋಧಕರ ಪರಿಣಾಮಕಾರಿ ಬೋಧನೆ ಕಾರಣ. ಅವರು ಉತ್ತಮವಾಗಿ ಓದುವಂತೆ ಪ್ರೋತ್ಸಾಹಿಸಿದರು. ನೀಟ್‌ನೊಂದಿಗೆ ಸಿಇಟಿಗೂ ಅಧ್ಯಯನ ಮಾಡಿ ಪರೀಕ್ಷೆ ಬರೆದೆ. ನನ್ನ ಸಾಧನೆಗೆ ಪಾಲಕರ ಪ್ರೋತ್ಸಾಹ ಕೂಡ ಕಾರಣವಾಗಿದೆ. ನಮ್ಮ ತಂದೆ ಅಚ್ಯುತ ಮುಳಗುಂದ ಎಂಜಿನಿಯರ್ ಆಗಿದ್ದು, ತಾಯಿ ಅನಿತಾ ಮುಳಗುಂದ ಗೃಹಿಣಿಯಾಗಿದ್ದಾರೆ ಎಂದು ತಿಳಿಸಿದರು.
ದ್ಯಾವಪ್ಪನವರ ವಳಸಂಗ ಎಜುಕೇಶನಲ್ ಆ್ಯಂಡ್ ಅಕಾಡೆಮಿಕ್ ಟ್ರಸ್ಟ್ ಅಧ್ಯಕ್ಷ ಪ್ರೊ| ಜಿ.ವಿ. ವಳಸಂಗ ಮಾತನಾಡಿ, ನಮ್ಮ ಕಾಲೇಜು ರ್‍ಯಾಂಕ್ ಪರಂಪರೆಯನ್ನು ಮುಂದುವರಿಸಿದೆ. ಅಪರ್ಣಾ ಮುಳಗುಂದ ಉತ್ತಮ ಸಾಧನೆ ಮಾಡಿದ್ದಾರೆ. ಜೂ. 5ಕ್ಕೆ ನೀಟ್ ಫಲಿತಾಂಶ ಪ್ರಕಟಗೊಳ್ಳಲಿದ್ದು, ನಮ್ಮ ವಿದ್ಯಾರ್ಥಿಗಳು ನೀಟ್‌ನಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಪ್ರೊ| ಮಹೇಶ ದ್ಯಾವಪ್ಪನವರ, ಪ್ರೊ| ಸುನೀಲ್ ಕಣಬಸ ಇದ್ದರು.