ಬೆಳಗಾವಿ: ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ, ಕಂದಾಯ ಬಡಾವಣೆಗಳ ನೋಂದಣಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ಎಲ್ಲ ಕಡೆ ಕಂದಾಯ ಬಡಾವಣೆಗಳ ನೋಂದಣಿಯನ್ನು ಸ್ಥಗಿತ ಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಸದನದಲ್ಲಿ ಪ್ರಕಟಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಕಂದಾಯ ಬಡಾವಣೆ ಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗುವುದು. ಈ ಸಂಬಂಧ ಸಮಿತಿ ರಚಿಸಿ ಅದರ ಬಗ್ಗೆ ನಿಗಾವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ವಿಷಯಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ನೀಡಿರುವ ಲಿಖೀತ ಉತ್ತರದಲ್ಲೂ, ಕಂದಾಯ ನಿವೇಶನಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ವ್ಯವಸ್ಥಿತ ಬದಲಾಣೆ ತರಲು ಇಲಾಖೆಯು ಬದ್ಧವಾಗಿದ್ದು, ಇಲಾಖೆಯಲ್ಲಿ ಇದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸರಕಾರದ ನಿಯಮಗಳನ್ನು ಉಲ್ಲಂಘಿಸಿ ನೋಂದಣಿ ಮಾಡಿರುವ ಉಪ ನೋಂದಣಾಧಿಕಾರಿಗಳ ವಿರುದ್ಧ ಇಲಾಖಾ ಹಂತದಲ್ಲಿ ವಿಚಾರಣೆ ಕೈಗೊಳ್ಳಲಾಗುತ್ತದೆ. ಅಲ್ಲದೆ, ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುಂದ್ರಾಂಕಗಳ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಇದಕ್ಕೂ ಮೊದಲು ವಿಷಯ ಪ್ರಸ್ತಾವಿಸಿದ ಎಸ್.ಆರ್. ವಿಶ್ವನಾಥ್, ರಾಜ್ಯದಲ್ಲಿ ಅಕ್ರಮವಾಗಿ, ನಿಯಮಬಾಹಿರವಾಗಿ ನಿರ್ಮಿಸಿರುವ ಕಂದಾಯ ಬಡಾವಣೆಗಳನ್ನು ನೋಂದಣಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕೆ ಮುಖ್ಯ ಕಾರಣ ಸಬ್ ರಿಜಿಸ್ಟ್ರಾರ್‌ಗಳು. ಒಂದಿಬ್ಬರ ವಿರುದ್ಧ ಕ್ರಮ ಕೈಗೊಂಡರೆ ಬೇರೆಯವರು ಎಚ್ಚೆತ್ತುಕೊಳ್ಳುತ್ತಾರೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಒಬ್ಬ ಸಬ್ ರಿಜಿಸ್ಟ್ರಾರ್ ದಿನಕ್ಕೆ 15 ಲಕ್ಷ ರೂ. ಇಲ್ಲದೆ ಹೋಗುವುದಿಲ್ಲ ಎಂದು ಸರಕಾರದ ಗಮನ ಸೆಳೆದರು.