Advertisement

ಸೀಜರ್‌ನ ರಿವೆಂಜ್‌ ಸ್ಟೋರಿ

07:30 AM Apr 13, 2018 | |

ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ “ಸೀಜರ್‌’ ಚಿತ್ರ ಈ ವಾರ ತೆರೆಕಾಣುತ್ತಿದೆ. ಹಾಗೆ ನೋಡಿದರೆ ಈ ಚಿತ್ರ ಯಾವತ್ತೋ ಬಿಡುಗಡೆಯಾಗಬೇಕಿತ್ತು. ಸಾಕಷ್ಟು ಎಡರು ತೊಡರುಗಳನ್ನು ಎದುರಿಸಿಕೊಂಡು ಬಂದ “ಸೀಜರ್‌’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ವಿನಯ್‌ ಕೃಷ್ಣ ಈ ಸಿನಿಮಾದ ನಿರ್ದೇಶಕರು. ತ್ರಿವಿಕ್ರಮ್‌ ನಿರ್ಮಾಣದ ಈ ಚಿತ್ರದಲ್ಲಿ ಪಾರುಲ್‌ ಯಾದವ್‌ ನಾಯಕಿ. 

Advertisement

ನಿರ್ದೇಶಕ ವಿನಯ್‌ ಕೃಷ್ಣ ಕಾರು ಸೀಜ್‌ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. “ಚಿತ್ರದ ಕಥೆ ತುಂಬಾ ವಿಭಿನ್ನವಾಗಿದೆ. ಈ ತರಹದ ಸಬೆjಕ್ಟ್ ಎಲ್ಲೂ ಬಂದಿಲ್ಲ. ಹಾಗಾಗಿ, ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ಆರಂಭದಲ್ಲಿ ಚಿಕ್ಕದಾಗಿ
ಆರಂಭಗೊಂಡ ಈ ಸಿನಿಮಾದಲ್ಲಿ ನಂತರ ದೊಡ್ಡ ದೊಡ್ಡ ನಟರು ಸೇರಿಕೊಂಡರು.

ರವಿಚಂದ್ರನ್‌, ಪ್ರಕಾಶ್‌ ರೈ … ಹೀಗೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ಸೀಜರ್‌ ವೃತ್ತಿಗೆ ಯಾಕೆ ಬರುತ್ತಾನೆಂಬುದು ತುಂಬಾ ಕುತೂಹಲಕರವಾಗಿದೆ’ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, ಚಿತ್ರ ಕನ್ನಡವಷ್ಟೇ ಅಲ್ಲದೇ, ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆಯಂತೆ. ಇನ್ನು, ಚಿತ್ರದ ಪ್ರಚಾರದಿಂದ ದೂರ ಉಳಿದ ನಾಯಕಿ ಪಾರುಲ್‌ ಯಾದವ್‌ ಮೇಲೂ ನಿರ್ದೇಶಕ ವಿನಯ್‌ ಕೃಷ್ಣ ಗರಂ ಆಗಿದ್ದಾರೆ. “ಚಿತ್ರದ ಪ್ರಚಾರಕ್ಕೆ ಫೋನ್‌ ಮಾಡಿದರೆ ನಾಟ್‌ ರೀಚಬಲ್‌. ಅವರಿಗೆ ನಮ್ಮ ಕಡೆಯಿಂದ ಒಂದೆರಡು ಲಕ್ಷ ಸಂಭಾವನೆ ಬಾಕಿ ಇತ್ತು ನಿಜ. ಅದನ್ನು ಕೊಡಲೆಂದು ಅವರಿದ್ದ ಹೋಟೆಲ್‌ಗೆ ಹೋಗಿ ಫೋನ್‌ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ.
ಹೀಗಾದರೆ ನಾವೇನು ಮಾಡೋಕ್ಕಾಗುತ್ತೆ. ಚಿತ್ರದ ಪ್ರಮೋಶನ್‌ಗೆ ಪ್ರತಿ ಬಾರಿಯೂ ಕರೆಯುತ್ತಲೇ ಇದ್ದೇವೆ. ಆರಂಭದಲ್ಲಿ ಏನೇನೋ ಬೇರೆ ಕಾರಣ ಹೇಳುತ್ತಿದ್ದ ಪಾರುಲ್‌, ಈಗ ಚಿತ್ರತಂಡದವರು ಸಂಭಾವನೆ ಬಾಕಿ ಉಳಿಸಿಕೊಂಡಿದ್ದಾರೆನ್ನುತ್ತಾ ಪ್ರಚಾರದಿಂದ ದೂರ
ಉಳಿಯುತ್ತಿದ್ದಾರೆ’ ಎಂಬುದು ವಿನಯ್‌ ಕೃಷ್ಣ ಮಾತು.

ನಿರ್ಮಾಪಕ ತ್ರಿವಿಕ್ರಮ ಅವರಿಗೆ “ಪರಿ’ ನಂತರ ಒಳ್ಳೆಯ ಸಿನಿಮಾವೊಂದನ್ನು ಮಾಡಬೇಕೆಂದು ಕಥೆಗಾಗಿ ಹುಡುಕುತ್ತಿದ್ದರಂತೆ. ಆಗ ಸಿಕ್ಕಿದ್ದೇ “ಸೀಜರ್‌’. “ಕನ್ನಡ ಚಿತ್ರರಂಗದಲ್ಲಿ ಒಂದು ಗುಣಮಟ್ಟದ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದು “ಸೀಜರ್‌’ ಮೂಲಕ ಈಡೇರಿದೆ. ಸೌಂಡಿಂಗ್‌ನಿಂದ ಹಿಡಿದು ಯಾವ ವಿಚಾರದಲ್ಲೂ ನಾವು ರಾಜಿಯಾಗಿಲ್ಲ’ ಎನ್ನುವುದು ತ್ರಿವಿಕ್ರಮ್‌ ಮಾತು. ಚಿತ್ರದಲ್ಲಿ ನಟಿಸಿರುವ ಚಿರುಗೆ “ಸೀಜರ್‌’ ಚಿತ್ರದ ಪಾತ್ರ ತುಂಬಾ ಹೊಸದಾಗಿದೆಯಂತೆ. ಮೊದಲ ಬಾರಿಗೆ ನೆಗೆಟಿವ್‌ ಶೇಡ್‌ನ‌ಲ್ಲಿ ನಟಿಸಿರುವ ಅವರಿಗೆ ಈ ಚಿತ್ರ ಹೊಸ ಇಮೇಜ್‌ ಕೊಡುವ ವಿಶ್ವಾಸವಿದೆ. “ಸಿನಿಮಾ ನೋಡಿದಾಗ ನಮಗೆ ಈ ಚಿತ್ರದ ಬಗ್ಗೆ ವಿಶ್ವಾಸ ಬಂದು ಇತರ ಭಾಷೆಗೂ ನಾವೇ ಡಬ್‌ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ರಿವೆಂಜ್‌ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ’
ಎಂಬುದು ಚಿರು ಮಾತು. ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತ ನೀಡಿದ್ದು, ಚಿತ್ರದ ಹಾಡುಗಳ ಹಾಗೂ ಹಿನ್ನೆಲೆ ಸಂಗೀತದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next